ಇಂದೋರ್: ಲೆಗ್ ಸ್ಪಿನ್ನರ್ ಅಲನಾ ಕಿಂಗ್ (18ಕ್ಕೆ 7) ಪ್ರದರ್ಶಿಸಿದ ಮಹಿಳೆಯರ ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಅತ್ಯುತ್ತಮವಾದ ಬೌಲಿಂಗ್ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ಗಳಿಂದ ಸುಲಭ ಗೆಲುವು ದಾಖಲಿಸಿತು. ಈ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಆಸ್ಟ್ರೆಲಿಯಾ, ಆತಿಥೇಯ ಭಾರತ ವಿರುದ್ಧದ ಸೆಮಿಫೈನಲ್ ಹಣಾಹಣಿಗೆ ಸಜ್ಜಾಗಿದೆ.
ಹೋಳ್ಕರ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ 24 ಓವರ್ಗಳಲ್ಲಿ ಕೇವಲ 97 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಆಸೀಸ್ 16.5 ಓವರ್ಗಳಲ್ಲೇ 3 ವಿಕೆಟ್ಗೆ 98 ರನ್ ಗಳಿಸಿ ಜಯಿಸಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್ಗಳಿಗೆ ಕುಸಿದ ಬಳಿಕ ಸತತ 5 ಜಯದೊಂದಿಗೆ ಸೆಮೀಸ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ, ಮತ್ತೆ ಕುಸಿತ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೈಚೆಲ್ಲಿತು.
ಅಲನಾ ಕಿಂಗ್ ಮಹಿಳೆಯರ ಏಕದಿನ ಕ್ರಿಕೆಟ್ನಲ್ಲಿ 7 ವಿಕೆಟ್ ಕಬಳಿಸಿದ 6ನೇ ಬೌಲರ್ ಎನಿಸಿದರು. ಅವರು ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ ಮೊದಲಿಗರಾಗಿದ್ದಾರೆ. ನ್ಯೂಜಿಲೆಂಡ್ನ ಜಾಕಿ ಲಾರ್ಡ್ಸ್ 1982ರಲ್ಲಿ ಭಾರತದ ವಿರುದ್ಧ 10 ರನ್ಗೆ 6 ವಿಕೆಟ್ ಕಬಳಿಸಿದ್ದು ಹಿಂದಿನ ಶ್ರೇಷ್ಠ ನಿರ್ವಹಣೆ.
ದಕ್ಷಿಣ ಆಫ್ರಿಕಾ: 24 ಓವರ್ಗಳಲ್ಲಿ 97 (ವೊಲ್ವಾರ್ಡ್ 31, ಬ್ರಿಟ್ಸ್ 6, ಲುಸ್ 6, ಕಾಪ್ 0, ಜ್ತಾ 29, ಡಿ ಕ್ಲರ್ಕ್ 14, ಟೆಯಾನ್ 0, ಅಲನಾ ಕಿಂಗ್ 18ಕ್ಕೆ 7, ಸ್ಕಟ್ 21ಕ್ಕೆ 1, ಗಾರ್ತ್ 21ಕ್ಕೆ 1, ಗಾರ್ಡ್ನರ್ 19ಕ್ಕೆ 1). ಆಸ್ಟ್ರೆಲಿಯಾ: 16.5 ಓವರ್ಗಳಲ್ಲಿ 3 ವಿಕೆಟ್ಗೆ 98 (ವೋಲ್ 38*, ಮೂನಿ 42, ಕಾಪ್ 11ಕ್ಕೆ 1).