ಕ್ರೀಡೆ

ಕ್ವಾರಂಟೈನ್​ ಬಗ್ಗೆ ಮಾಹಿತಿ ಬಿಚ್ಚಿಟ್ಟ ಟೀಮ್​ ಇಂಡಿಯಾ ಆಲ್ರೌಂಡರ್​ ಅಕ್ಷರ್​ ಪಟೇಲ್​

raghukittur

ಸೌಥಾಂಪ್ಟನ್​: ಕೋವಿಡ್​ನಿಂದಾಗಿ ಕ್ರಿಕೆಟಿಗರಿಗೆ ಕ್ವಾರಂಟೈನ್​ ಸಾಮಾನ್ಯವಾಗಿದೆ. ಕಳೆದ ವರ್ಷ ಯುಎಇಯಲ್ಲಿ ನಡೆದ 13ನೇ ಐಪಿಎಲ್​ನಿಂದ ಆರಂಭಗೊಂಡ ಕ್ವಾರಂಟೈನ್​ ನಿಯಮ, ಆಟಗಾರರ ಪಾಲಿಗೆ ಸಾಮಾನ್ಯವಾಗಿದೆ. ಯಾವುದೇ ಸರಣಿ ಆರಂಭಕ್ಕೂ ಮುನ್ನವೇ ಕನಿಷ್ಠ ಇಂತಿಷ್ಟು ದಿನಗಳ ಕಾಲ ಕ್ವಾರಂಟೈನ್​ ಕಡ್ಡಾಯಗೊಳಿಸಲಾಗಿದೆ. ಇದೀಗ ಮುಂದುವರಿದ ಭಾಗದಂತೆ ಇಂಗ್ಲೆಂಡ್​ ಪ್ರವಾಸದಲ್ಲಿ ಆರಂಭಿಕ ಮೂರು ದಿನ ಭಾರತ ತಂಡಗಳಿಗೆ ಕಠಿಣ ಕ್ವಾರಂಟೈನ್​ ನಿಯಮ ಜಾರಿಗೆ ತರಲಾಗಿದೆ. ಆಟಗಾರರು ಕ್ವಾರಂಟೈನ್​ ಅವಧಿಯಲ್ಲಿ ಪರಸ್ಪರ ಭೇಟಿಯಾಗುವಂತಿಲ್ಲ. ಐಸೋಲೇಷನ್​ ಅವಧಿಯನ್ನು ಕಠಿಣವಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಭಾರತ ತಂಡದ ಸ್ಪಿನ್ನರ್​ ಅಕ್ಷರ್​ ಪಟೇಲ್​ ತಿಳಿಸಿದ್ದಾರೆ.

ಕ್ವಾರಂಟೈನ್​ ಅವಧಿ ಕುರಿತು ಅಕ್ಷರ್​ ಪಟೇಲ್ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್​ ಮಾಡಿದೆ. ಭಾರತ ಹಾಗೂ ನ್ಯೂಜಿಲೆಂಡ್​ ನಡುವಿನ ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ (ಡಬ್ಲ್ಯುಟಿಸಿ) ಫೈನಲ್​ ಪಂದ್ಯವೂ ಜೂನ್​ 18 ರಿಂದ ಸೌಥಾಂಪ್ಟನ್​ನಲ್ಲಿ ನಡೆಯಲಿದೆ. ಮತ್ತೊಂದೆಡೆ, ಎದುರಾಳಿ ನ್ಯೂಜಿಲೆಂಡ್​ ಈಗಾಗಲೇ ಇಂಗ್ಲೆಂಡ್​ನಲ್ಲಿದ್ದು, ಆತಿಥೇಯ ತಂಡದ ಎದುರು ಎರಡು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಡುತ್ತಿದೆ. ಇಂಗ್ಲೆಂಡ್​ಗೆ ತೆರೆಳುವುದಕ್ಕೂ ಮುನ್ನ ಭಾರತ ತಂಡ ಮುಂಬೈನಲ್ಲಿ 14 ದಿನಗಳ ಕ್ವಾರಂಟೈನ್​ಗೆ ಒಳಗಾಗಿತ್ತು. ಇಂಗ್ಲೆಂಡ್​ ಪ್ರವಾಸದ ಕುರಿತು ವಿಮಾನದಲ್ಲಿ ಮಾತನಾಡಿರುವ ಅರ್​ ಪಟೇಲ್​, ಪ್ರವಾಸದಲ್ಲಿ ಎರಡು ಗಂಟೆಗಳ ಸಿನಿಮಾ ನೋಡಿದೆ, ಮತ್ತೆ ಆರು ಗಂಟೆ ಭರ್ಜರಿ ನಿದ್ದೆ ಮಾಡಿದೆ. ಮೂರು ದಿನಗಳ ಕಾಲ ಆಟಗಾರರು ಪರಸ್ಪರ ಮಾತನಾಡಬಾರದು ಎಂದು ಹೇಳಲಾಗಿದೆ. ಕಠಿಣ ಕ್ವಾರಂಟೈನ್​ ಅವಧಿ ಇದಾಗಿದೆ ಎಂದು ಅಕ್ಷರ್​ ಪಟೇಲ್​ ಹೇಳಿದ್ದಾರೆ.

ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಒಂದೇ ವಿಮಾನದಲ್ಲಿ ಇಂಗ್ಲೆಂಡ್​ಗೆ ತೆರಳಿದ್ದವು. ಲಂಡನ್​ಗೆ ಬಂದಿಳಿದ ಬಳೀಕ ಎರಡು ತಂಡಗಳು ಸೌಥಾಂಪ್ಟನ್​ಗೆ ಎರಡು ಗಂಟೆಯ ಅವಧಿಯಲ್ಲಿ ಬಸ್​ನಲ್ಲಿ ತೆರಳಿದವು. ಭಾರತ ಪುರುಷರ ತಂಡ ಡಬ್ಲ್ಯುಟಿಸಿ ಫೈನಲ್​ ಪಂದ್ಯದ ಬಳಿಕ ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ ಎದುರು 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಮತ್ತೊಂದೆಡೆ, ಮಹಿಳಾ ತಂಡ ಇಂಗ್ಲೆಂಡ್​ ಎದುರು ಏಕೈಕ ಟೆಸ್ಟ್​, ತಲಾ 3 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಲಿವೆ.