ಕ್ರೀಡೆ

ರೋಹಿತ್​ಗೆ ಕೈಮುಗಿದ ರಾಜಸ್ಥಾನ ರಾಯಲ್ಸ್​ ವೇಗಿ; 'ಹಿಟ್​ಮ್ಯಾನ್' ಕ್ಯಾಪ್ಟನ್ಸಿ ನೆನೆದ ಆಕಾಶ್ ಮಧ್ವಾಲ್​ | Rohit Sharma

Rohit Sharma: ನಿನ್ನೆ (ಮೇ.02) ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 100 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ರೋಹಿತ್​, ಐಪಿಎಲ್​ ದಾಖಲೆಗಳಿಗೆ ಸಾಕ್ಷಿಯಾದರು.

36 ಎಸೆತಗಳಲ್ಲಿ 53 ರನ್​ ಬಾರಿಸಿದ ರೋಹಿತ್​, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ 231 ಪಂದ್ಯಗಳನ್ನಾಡಿ 6024 ರನ್ ಕಲೆಹಾಕಿದ್ದಾರೆ. ಆರ್​ಸಿಬಿ ತಂಡದ ವಿರಾಟ್​ ಕೊಹ್ಲಿ ನಂತರ 6000 ರನ್​ ಗಡಿದಾಟಿದ ಎರಡನೇ ಆಟಗಾರನಾಗಿ ರೋಹಿತ್ ಹೊರಹೊಮ್ಮಿದ್ದಾರೆ. ಇನ್ನು ಪಂದ್ಯ ಗೆದ್ದ ಬಳಿಕ ಪೆವಿಲಿಯನ್​ನತ್ತ ಸಾಗುತ್ತಿದ್ದ ರೋಹಿತ್​ರನ್ನು ಕೈಮುಗಿದು ಮಾತನಾಡಿಸಿದ ರಾಜಸ್ಥಾನ್ ರಾಯಲ್ಸ್ ವೇಗಿ ಆಕಾಶ್ ಮಧ್ವಾಲ್, ಸ್ಟ್ಯಾಂಡ್ಸ್​ನಲ್ಲಿ ಕುಳಿತಿದ್ದ ರೋಹಿತ್​ ಪತ್ನಿ ರಿತಿಕಾ ಸಜ್ದೇ ಅವರಿಗೂ ಕೈಮುಗಿದು ಮಾತನಾಡಿಸಿದರು. ಈ ದೃಶ್ಯ ನೋಡುಗರ ಮನ ಮುಟ್ಟಿದ್ದು, ಹಿರಿಯ ಕ್ರಿಕೆಟಿಗನ ಮೇಲೆ ಯುವ ಆಟಗಾರ ಇಟ್ಟಿರುವ ಗೌರವಕ್ಕೆ ಹರ್ಷ ವ್ಯಕ್ತವಾಗಿದೆ.

2023ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ ಮಧ್ವಾಲ್, ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ನಂತರದಲ್ಲಿ ಆರ್​ಆರ್​ ತಂಡಕ್ಕೆ ಸೇರ್ಪಡೆಗೊಂಡರು. ಈ ಸೀಸನ್​ ಆರಂಭದಲ್ಲಿ ರಾಜಸ್ಥಾನ ಪರ ಕಾಣಿಸಿಕೊಂಡ ಮಧ್ವಾಲ್​, ಮುಂಬೈ ವಿರುದ್ಧದ ಪಂದ್ಯದಲ್ಲಿ ಕುಳಿತಿದ್ದರು. ಈ ವೇಳೆ ರೋಹಿತ್​ರನ್ನು ಕಂಡ ಕ್ಷಣವೇ ಗೌರವದಿಂದ ಎದ್ದು, ತಮ್ಮ ಮಾಜಿ ಕ್ಯಾಪ್ಟನ್​ಗೆ ಕೈಮುಗಿದು ಮಾತನಾಡಿಸಿದ ದೃಶ್ಯ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯ ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದೆ.