ಕ್ರೀಡೆ

ನನ್ನ ಬಗ್ಗೆ... ಎಡ್ಜ್‌ಬಾಸ್ಟನ್‌ ಟೆಸ್ಟ್​ಗೂ ಮುನ್ನ ಆಕಾಶ್​ಗೆ ಸಹೋದರಿ ಕಳುಹಿಸಿದ ಸಂದೇಶ ಮನಕಲಕುವಂತಿದೆ! Akash Deep

Akash Deep : ಭಾರತದ ವೇಗಿ ಆಕಾಶ್ ದೀಪ್ ಅವರ ಯಶಸ್ವಿ ಬೌಲಿಂಗ್ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಸಹೋದರಿ ಅಖಂಡ್ ಜ್ಯೋತಿ ಸಿಂಗ್, ಸಹೋದರನ ಬಗ್ಗೆ ಮಾತನಾಡುತ್ತಾ ತುಂಬಾ ಭಾವುಕರಾದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಹತ್ತು ವಿಕೆಟ್‌ಗಳನ್ನು ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಕಾಶ್​ ದೀಪ್​, ತಮ್ಮ ಬೌಲಿಂಗ್​ ಪ್ರದರ್ಶನವನ್ನು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಜ್ಯೋತಿಗೆ ಅರ್ಪಿಸುತ್ತಿರುವುದಾಗಿ ಪಂದ್ಯದ ನಂತರ ಹೇಳಿದರು.

ಸಹೋದರ ಆಕಾಶ್​ ತನ್ನ ಬೌಲಿಂಗ್​ ಸಾಧನೆಯನ್ನು ತನಗೆ ಅರ್ಪಿಸಿದ್ದಕ್ಕೆ ಆಜ್​ತಕ್​ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಜ್ಯೋತಿ, ನನ್ನ ಸಹೋದರನಿಗೆ ನನ್ನ ಅನಾರೋಗ್ಯದ ಬಗ್ಗೆ ಚಿಂತಿಸದೆ ದೇಶಕ್ಕಾಗಿ ಆಡುವಂತೆ ಹೇಳಿದ್ದಾಗಿ ಬಹಿರಂಗಪಡಿಸಿದರು.

ನಮ್ಮ ತಂದೆ ಕ್ಯಾನ್ಸರ್​ನಿಂದ ನಿಧನರಾದಾಗ ನಮ್ಮ ಕುಟುಂಬಕ್ಕೆ ಕಳೆದುಹೋದ ಸಂತೋಷವನ್ನು ಆಕಾಶ್ ದೀಪ್ ಮರಳಿ ತಂದಿದ್ದಾರೆ ಎಂದು ಜ್ಯೋತಿ ಹರ್ಷ ವ್ಯಕ್ತಪಡಿಸಿದರು. ನನ್ನ ತಂದೆ ತೀರಿಕೊಂಡಾಗ, ಆಕಾಶ್ ದೆಹಲಿಯಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು. ಆದರೆ, ಅವರು ನಿರೀಕ್ಷಿತ ಪ್ರಗತಿ ಸಾಧಿಸಲಿಲ್ಲ. ನಾನು ಅವರಿಗೆ ದೃಢವಾಗಿ ಹೇಳಿದೆ. ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿದರೆ ಮಾತ್ರ ಉತ್ತಮ ಪ್ರದರ್ಶನ ನೀಡಬಹುದು ಎಂದು ಹೇಳಿದೆ. ಇಲ್ಲಿ ಮಾಡಲು ಸಾಧ್ಯವಾಗದಿದ್ದರೆ, ಬೇರೆಡೆ ಪ್ರಯತ್ನಿಸಬೇಕೆಂದು ಸೂಚಿಸಿದೆ ಎಂದರು.

2017ರಲ್ಲಿ ಆಕಾಶ್​ ದೀಪ್​ ಕೋಲ್ಕತಗೆ ತೆರಳಿದ ನಂತರ, ಅವರು ಬಂಗಾಳ ಅಂಡರ್-23 ತಂಡಕ್ಕಾಗಿ ಸ್ಥಿರ ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅದೇ ವರ್ಷ ತಂದೆ ಮತ್ತು ತಮ್ಮನ ಮರಣದ ನಂತರ ನಮ್ಮ ಕುಟುಂಬವು ಆರ್ಥಿಕ ತೊಂದರೆಗಳಿಂದ ಸುತ್ತುವರೆದಿತ್ತು. ಆದಾಗ್ಯೂ, ಯಾವುದರ ಬಗ್ಗೆಯೂ ಚಿಂತಿಸದೆ ಆಕಾಶ್ ತಮ್ಮ ಗುರಿಯನ್ನು ಸಾಧಿಸಲು ನಾವು ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ ಎಂದು ಜ್ಯೋತಿ ವಿವರಿಸಿದರು.

ನಾವೆಲ್ಲರೂ ಅನಾರೋಗ್ಯದ ಬಗ್ಗೆ ಮಾತನಾಡಲು ಬಯಸದೆ ಈ ಪಂದ್ಯವನ್ನು ವೀಕ್ಷಿಸಿದೆವು. ನಾವು ಪ್ರತಿ ಬಾರಿ ವಿಕೆಟ್ ಪಡೆದಾಗಲೂ ಜೋರಾಗಿ ಚಪ್ಪಾಳೆ ತಟ್ಟಿ ಆಚರಿಸಿದೆವು. ಇದರೊಂದಿಗೆ, ನೆರೆಹೊರೆಯವರು ಬಂದು ಏನಾಯಿತು ಎಂದು ಕೇಳುತ್ತಿದ್ದರು. ದೇಶಕ್ಕೆ ಜಯ ತಂದುಕೊಟ್ಟ ಅವರ ಪ್ರದರ್ಶನವು ನಮಗೆ ಸಂಭ್ರಮವನ್ನು ತಂದಿತು. ಮೊದಲಿಗೆ, ಮಾಧ್ಯಮಗಳು ನನ್ನ ಅನಾರೋಗ್ಯದ ಬಗ್ಗೆ ಉಲ್ಲೇಖಿಸಿವೆ ಎಂದು ನನಗೆ ತಿಳಿದಿರಲಿಲ್ಲ. ಏಕೆಂದರೆ ನನ್ನ ಕುಟುಂಬವು ನನ್ನ ಕ್ಯಾನ್ಸರ್ ಅನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ಸಿದ್ಧರಿಲ್ಲ. ಬಹುಶಃ ಆಕಾಶ್​, ಆ ಕ್ಷಣದಲ್ಲಿ ಭಾವುಕರಾಗಿ ನನ್ನ ಮೇಲಿನ ಪ್ರೀತಿಯಿಂದಾಗಿ ಅದನ್ನು ತಮ್ಮ ಸಹೋದರಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳಿದರು. ನಾನು ಪ್ರಸ್ತುತ ಕ್ಯಾನ್ಸರ್‌ನ ಮೂರನೇ ಹಂತದಲ್ಲಿದ್ದೇನೆ. ನನಗೆ ಇನ್ನೊಂದು ವರ್ಷ ಚಿಕಿತ್ಸೆ ಬೇಕು ಎಂದು ವೈದ್ಯರು ಹೇಳಿದ್ದಾರೆ. ಆ ನಂತರ ಏನಾಗುತ್ತದೆ ಎಂದು ನೋಡೋಣ ಎಂದರು.

ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುವ ಆಕಾಶ್, ಪಂದ್ಯದ ಮೊದಲು ಅಥವಾ ನಂತರ ಲೀಗ್ ಸಮಯದಲ್ಲಿ ಹತ್ತು ವಿಭಿನ್ನ ಸ್ಥಳಗಳಲ್ಲಿ ಆಡುವ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ, ಯಾವಾಗಲೂ ನನ್ನನ್ನು ಸಂಪರ್ಕಿಸಲು ಆಸ್ಪತ್ರೆಗೆ ಬರುತ್ತಿದ್ದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಗೆಲುವಿನ ನಂತರ ನಾವು ಎರಡು ಬಾರಿ ವಿಡಿಯೋ ಕರೆಗಳಲ್ಲಿ ಮಾತನಾಡಿದ್ದೇವೆ. ಚಿಂತಿಸಬೇಡ ಸಹೋದರಿ, ಇಡೀ ದೇಶ ನಮ್ಮದು ಎಂದು ಹೇಳಿದಾಗ, ಆ ಕ್ಷಣದಲ್ಲಿ ನಾನು ನನ್ನನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮತ್ತು ನಾನು ತುಂಬಾ ಭಾವುಳಾಗಿ ಅಳುತ್ತಿದ್ದೆ. ನಿಮಗೆ ನಿಜ ಹೇಳಬೇಕೆಂದರೆ ಈ ರೀತಿಯ ಸಹೋದರ ಬಹಳ ಅಪರೂಪ. ಅವರು ಯಾವಾಗಲೂ ನಮಗಾಗಿ ಇರುತ್ತಾರೆ. ಅವರು ನಮಗೆ ಹೇಳದೆ ಏನನ್ನೂ ಮಾಡುವುದಿಲ್ಲ. ಕುಟುಂಬದೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ನಮ್ಮ ತಂದೆ ಮತ್ತು ಒಬ್ಬ ಸಹೋದರ ಕೆಲವು ವರ್ಷಗಳ ಅವಧಿಯಲ್ಲಿ ನಿಧನರಾದ ನಂತರ, ಆಕಾಶ್ ಕುಟುಂಬದ ಸಂಪೂರ್ಣ ಹೊರೆಯನ್ನು ಸ್ವತಃ ಹೊರುತ್ತಿದ್ದಾರೆ ಎಂದರು.

ನಾನು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗುತ್ತಿದ್ದಾಗ, ಆಕಾಶ್ ಅವರ ಮಾತುಗಳೇ ನನ್ನನ್ನು ಮುನ್ನಡೆಸುತ್ತಿದ್ದವು. ಅವರು ನನ್ನ ಆರೋಗ್ಯದ ಬಗ್ಗೆ ಯೋಚಿಸುತ್ತಿದ್ದರು. ನಂತರ ನಾನು ಅವರನ್ನು ಅವರ ಆಟದ ಮೇಲೆ ಗಮನಹರಿಸಲು ಪ್ರೋತ್ಸಾಹಿಸುತ್ತಿದ್ದೆ ಎಂದು ಜ್ಯೋತಿ ಹೇಳಿದ್ದಾರೆ. (ಏಜೆನ್ಸೀಸ್​)