ಕ್ರೀಡೆ

ಭಾರತ-ಬಾಂಗ್ಲಾ 2ನೇ ಟೆಸ್ಟ್‌ನ ಮೊದಲ ದಿನ ಮಳೆ, ಮಂದಬೆಳಕಿನ ಅಡ್ಡಿ: ಗಮನಸೆಳೆದ ಆಕಾಶ್‌ದೀಪ್

ಕಾನ್ಪುರ: ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಹಂಬಲದಲ್ಲಿರುವ ಭಾರತ ತಂಡ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಹವಾಮಾನ ವೈಪರೀತ್ಯ ಸಮಸ್ಯೆ ಎದುರಾಗಿದ್ದು. ಮೊದಲ ದಿನ 35 ಓವರ್‌ಗಳ ಆಟ ಮಾತ್ರ ಸಾಧ್ಯವಾಯಿತು. ವೇಗಿ ಆಕಾಶ್ ದೀಪ್ (34ಕ್ಕೆ 2) ಬಿಗಿ ದಾಳಿಯ ಮೂಲಕ ಆರಂಭಿಕ ಕಡಿವಾಣ ಹೇರಿದರೆ, ಬಳಿಕ ಮಾಮಿನುಲ್ ಹಕ್ (40* ರನ್, 81 ಎಸೆತ, 7 ಬೌಂಡರಿ) ಹಾಗೂ ನಾಯಕ ನಜ್ಮೂಲ್ ಹೊಸೈನ್ ಶಾಂಟೋ (31 ರನ್, 57 ಎಸೆತ, 6 ಬೌಂಡರಿ) ಜತೆಯಾಟದ ನೆರವಿನಿಂದ ಬಾಂಗ್ಲಾದೇಶ ಚೇತರಿಸಿಕೊಂಡಿದೆ. ಪಂದ್ಯದ 2 ಮತ್ತು 3ನೇ ದಿನವೂ ಮಳೆ ಅಡಚಣೆಯ ಭೀತಿ ಕಾಡುತ್ತಿದೆ.

ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದು 2015ರ ಬಳಿಕ ತವರಿನ ಟೆಸ್ಟ್ ಸರಣಿಯಲ್ಲಿ ಟಾಸ್ ಗೆದ್ದು ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ ಮೊದಲ ದೃಷ್ಟಾಂತ ಎನಿಸಿತು.

ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾದೇಶ, ಆರಂಭಿಕ ಹಂತದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲಕರ ಆಗುವಂತಿದ್ದ ಪಿಚ್‌ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿತು. ಪಂದ್ಯಕ್ಕೆ ಮಂದಬೆಳಕು, ಮಳೆ ಅಡಚಣೆ ತಂದಿದ್ದರಿಂದ ನಿಗದಿತ ಸಮಯಕ್ಕೆ ಮುನ್ನವೇ ಮಧ್ಯಾಹ್ನ 3 ಗಂಟೆಗೆ ದಿನದ ಆಟವನ್ನು ಮೊಟಕುಗೊಳಿಸಲು ಅಂಪೈರ್‌ಗಳು ನಿರ್ಧರಿಸಿದರು. ದಿನದಂತ್ಯಕ್ಕೆ ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗೆ 107 ರನ್ ಕಲೆಹಾಕಿದೆ. ಮಾಮಿನುಲ್ ಹಕ್ ಜತೆ ಅನುಭವಿ ಮುಶ್ಫಿಕರ್ ರಹೀಂ (6*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.