ಕ್ರೀಡೆ

ಆಪರೇಷನ್​ ಸಿಂಧೂರದ ಬಗ್ಗೆ ವ್ಯಂಗ್ಯವಾಡಿದ್ದ ಪಾಕ್​ನ ರೌಫ್​ಗೆ ಅಮಾನತು ಶಿಕ್ಷೆ! ಸೂರ್ಯನಿಗೂ ಶಾಕ್ ನೀಡಿ ICC

ನವದೆಹಲಿ: 2025ರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತದ ವಿರುದ್ಧ ಅತಿಯಾಗಿ ವರ್ತಿಸಿದ್ದ ಹಿನ್ನೆಲೆ ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್​ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ICC) ಎರಡು ಪಂದ್ಯಗಳ ನಿಷೇಧ ಹೇರಿದೆ.

2025ರ ಸೆ.21 ಮತ್ತು 28ರಂದು ನಡೆದ ಏಷ್ಯಾಕಪ್​ ಫೋರ್​ ಪಂದ್ಯ ಮತ್ತು ಭಾರತದ ವಿರುದ್ಧದ ಫೈನಲ್​ ಪಂದ್ಯದಲ್ಲಿ ಕ್ರಮವಾಗಿ ಪಾಕ್ ಆಟಗಾರ ರೌಫ್​ ಪ್ರಚೋದನಕಾರಿ ಸನ್ನೆಗಳಿಗಾಗಿ ಅವರ ವಿರುದ್ಧ ಪಂದ್ಯದ ಶುಲ್ಕ ಶೇ.30ರಷ್ಟು ದಂಡ ವಿಧಿಸಲಾಗಿದೆ ಮತ್ತು ಅಮಾನತು ಮಾಡಲಾಗಿದೆ. ಮೆಗಾ ಟೂರ್ನಮೆಂಟ್‌ನಲ್ಲಿ ರೌಫ್ ಎರಡು ಬಾರಿ ತನ್ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಹ್ಯಾರಿಸ್​ ಭಾರತೀಯ ಅಭಿಮಾನಿಗಳ ಕಡೆಗೆ ಮುಖ ಮಾಡಿ 6-0 ತೋರಿಸಿವ ಮೂಲಕ ಗಾಳಿಯಲ್ಲಿ ಹಾದು ಹೋಗುವ ವಿಮಾನ ರೀತಿಯ ಅನುಕರಣೆ ಮಾಡಿದ್ದರು(ಆಪರೇಷನ್​ ಸಿಂಧೂರ). ಅಲ್ಲದೆ, ಸಹ-ಆಟಗಾರ ಫಾರ್ಹನ್​ ಸೂಪರ್​-4 ಪಂದ್ಯದಲ್ಲಿ AK-47 ಗನ್​ ರೀತಿಯಲ್ಲಿ ಬ್ಯಾಟ್​ ತೋರಿಸಿ ಸಂಭ್ರಮಿಸಿದ್ದರು.

ಈ ಸನ್ನೆಗಳ ಕುರಿತು ಬಿಸಿಸಿಐ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ದೂರು ನೀಡಿತು ಮತ್ತು ಪಂದ್ಯದ ರೆಫರಿ ರಿಚಿ ರಿಚರ್ಡ್ಸನ್ ಅಧ್ಯಕ್ಷತೆಯಲ್ಲಿ ಅಧಿಕೃತ ವಿಚಾರಣೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಉಲ್ಲೇಖಿಸಿದೆ.

ಸೂರ್ಯನಿಗೂ ಶಾಕ್​!

ಪಾಕಿಸ್ತಾನ ವಿರುದ್ಧ ಭಾರತ 7 ವಿಕೆಟ್‌ಗಳ ಗೆಲುವಿನ ನಂತರ, ಕ್ಯಾಪ್ಟನ್​ ಸೂರ್ಯ ಕುಮಾರ್​ ಯಾದವ್ ಈ ಗೆಲುವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಅರ್ಪಿಸಿದರು. ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಲಿಪಶುಗಳ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸಿದರು. ಈ ಹೇಳಿಕೆಯ ನಂತರ ಪಾಕಿಸ್ತಾನವು ಭಾರತ ನಾಯಕನ ವಿರುದ್ಧ ಅಧಿಕೃತ ದೂರು ದಾಖಲಿಸಿದೆ.

"ಸೂರ್ಯಕುಮಾರ್ ಯಾದವ್ (ಭಾರತ) ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.21 ರ ಉಲ್ಲಂಘನೆಗಾಗಿ ತಪ್ಪಿತಸ್ಥರೆಂದು ಕಂಡುಬಂದಿದೆ. ಇದು ಆಟಕ್ಕೆ ಅಪಖ್ಯಾತಿ ತರುವ ನಡವಳಿಕೆಗೆ ಸಂಬಂಧಿಸಿದೆ. ಅವರಿಗೆ ಪಂದ್ಯ ಶುಲ್ಕದ ಶೇಕಡಾ 30 ರಷ್ಟು ದಂಡ ವಿಧಿಸಲಾಗಿದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.