ನವದೆಹಲಿ: ಇದೇ ಅ.19ರಿಂದ ಆರಂಭಗೊಳ್ಳಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಈಗಾಗಲೇ ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ (Ajit Agarkar). ಈಗಾಗಲೇ ಎರಡು ಸರಣಿಗೂ ಪ್ರತ್ಯೇಕ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರನ್ನು ಎರಡಕ್ಕೂ ಪರಿಗಣಿಸದೆ ಹೋಗಿದ್ದು ಸದ್ಯ ಹಲವರ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ್ದ ಶಮಿ, ಫಿಟ್ನೆಸ್ ಇದ್ದರೂ ಆಯ್ಕೆಯಿಂದ ಹೊರಗಿಟ್ಟರು ಎಂದಿದ್ದರು. ಈ ಮಾತಿಗೆ ಇದೀಗ ಅಜಿತ್ ಅಗರ್ಕರ್ ಕಿಡಿಕಾರಿದ್ದಾರೆ.
ಈ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ಟೆಸ್ಟ್ ಸರಣಿಯಿಂದ ಶಮಿಯನ್ನು ಕೈಬಿಟ್ಟಿದ್ದ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ, ಆಸೀಸ್ ವಿರುದ್ಧದ ಸರಣಿಯಿಂದಲೂ ಕೈಬಿಟ್ಟಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಶಮಿ, “ನನ್ನ ಬಗ್ಗೆ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಮುಖ್ಯವಾಗಿ, ಆಯ್ಕೆ ಆಗುವುದು, ಬಿಡುವುದು ಇದ್ಯಾವುದು ನಮ್ಮ ಕೈಯಲ್ಲಿಲ್ಲ. ಎಲ್ಲವೂ ಆಯ್ಕೆ ಸಮಿತಿಯ ನಿರ್ಧಾರಗಳಿಂದಲೇ ನಡೆಯುವುದು. ಕೋಚ್, ಕ್ಯಾಪ್ಟನ್ ಮತ್ತು ಸಮಿತಿಯ ಮುಖ್ಯಸ್ಥರು ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಅವಲಂಬಿತ ಎಂದಿದ್ದರು.
"ನಾನು ಆ ತಂಡದಲ್ಲಿ ಇರಬೇಕು ಎಂದು ಅವರು ಬಯಸಿದರೆ, ಖಂಡಿತ ಆಯ್ಕೆ ಆಗ್ತೀನಿ. ಇಲ್ಲ, ನಾನಿನ್ನು ಕೆಲವು ವರ್ಷಗಳು ಕಾಯಬೇಕು ಎಂದರೆ, ಹೀಗೆ ಇರಬೇಕು ಅಷ್ಟೇ. ಪ್ರಸ್ತುತ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೀನಿ. ಮೈದಾನದಲ್ಲಿ ಪ್ರ್ಯಾಕ್ಟಿಸ್ ಕೂಡ ಮಾಡ್ತಿದ್ದೀನಿ. ದುಲೀಪ್ ಟ್ರೋಫಿ ಆಡಿದೆ. 35 ಓವರ್ ಮಾಡಿದೆ. ಅಲ್ಲಿ ಯಾವುದೇ ಫಿಟ್ನೆಸ್ ಸಮಸ್ಯೆ ನನ್ನನ್ನು ಕಾಡಲಿಲ್ಲ. ನನ್ನ ಓಟ ಚೆನ್ನಾಗಿಯೇ ಇದೆ” ಎಂದು ಹೇಳಿದ್ದರು.
ಇತ್ತೀಚೆಗೆ ಮೊಹಮ್ಮದ್ ಶಮಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, "ಫಿಟ್ ಆಗಿದಿದ್ರೆ ಖಂಡಿತ ಅವರು ತಂಡದಲ್ಲಿ ಇರ್ತಿದ್ದರು. ಈ ವಿಷಯವನ್ನು ಖುದ್ದಾಗಿ ನನ್ನೊಂದಿಗೆಯೇ ಮಾತನಾಡಿದ್ದರೆ, ನಾನು ಶಮಿ ಜತೆಗೆ ದೂರವಾಣಿ ಕರೆ ಮಾಡಿ ಮಾತಾಡ್ತಿದ್ದೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಏನು ಹೇಳಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ನನಗಿಲ್ಲ. ಸಾಮಾನ್ಯವಾಗಿ, ಆಟಗಾರರಿಗೆ ನನ್ನ ಫೋನ್ ಎಂದಿಗೂ ಆನ್ನಲ್ಲೇ ಇರುತ್ತೆ. ಈ ಹಿಂದೆ ಶಮಿಯೊಟ್ಟಿಗೆ ಸಾಕಷ್ಟು ಮಾತುಕತೆ ಮಾಡಿದ್ದೀನಿ. ಸಂದೇಶಗಳನ್ನು ಕಳಿಸಿದ್ದೀನಿ. ಅದು ಏನೆಲ್ಲ ಅಂತ ಇಲ್ಲಿ ಹೇಳುವ ಮೂಲಕ ಒಂದು ಹೆಡ್ಲೈನ್ ಕೊಡಲು ನಾನು ಸಿದ್ಧವಿಲ್ಲ" ಎಂದರು.
"ಇಂಗ್ಲೆಂಡ್ ಸರಣಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದೆವು. ಆದರೆ, ಅವರು ಫಿಟ್ ಆಗಿರಲಿಲ್ಲ. ದೇಶಿಯ ಕ್ರಿಕೆಟ್ ಈಗ ಶುರುವಾಗಿದೆ. ಅವರೇನಾದರೂ ಫಿಟ್ ಆಗಿದ್ರೆ ಮುಂದೆ ನೋಡೋಣ. ರಣಜಿ ಪಂದ್ಯಗಳಲ್ಲಿ ಅವರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಗಮನಿಸುತ್ತೇನೆ. ಶಮಿ ಅಂತ ಅತ್ಯುತ್ತಮ ವೇಗಿಯನ್ನು ಹೇಗೆ ಕೈಬಿಡಲು ಸಾಧ್ಯ. ನಾನು ಅವರನ್ನು ತಂಡಕ್ಕೆ ಕರೆದುಕೊಳ್ಳಲು ಎದುರುನೋಡುತ್ತಿದ್ದೇವೆ. ಆದ್ರೆ, ಅವರ ಫಿಟ್ನೆಸ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಇದು ಬದಲಾದರೆ, ಖಂಡಿತ ಕಥೆ ಬೇರೆ ಇರಲಿದೆ. ನನ್ನ ಪ್ರಕಾರ, ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಅವರು ಫಿಟ್ನೆಸ್ ಕಾಪಾಡಿಕೊಂಡಿರಲಿಲ್ಲ" ಎಂದು ಹೇಳಿದ್ದಾರೆ,(ಏಜೆನ್ಸೀಸ್).