ನವದೆಹಲಿ: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಿಂದ ತಮ್ಮನ್ನು ಕೈಬಿಟ್ಟ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ವೇಗಿ ಮೊಹಮ್ಮದ್ ಶಮಿ ಭಾರೀ ಅಸಮಾಧಾನ ವ್ಯಕ್ತಪಡಿಸಿದ್ದರು. ಫಿಟ್ ಆಗಿದ್ದರೂ ತಂಡದಿಂದ ಹೊರಗಿಟ್ಟಿದ್ದಾರೆ ಎಂದು ಬೇಸರ ಹೊರಹಾಕಿದ್ದರು. ಇದೀಗ ಟೀಮ್ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರಹಾನೆ (Ajinkya Rahane) ಕೂಡ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರಿದ್ದಾರೆ.
"ವಯಸ್ಸು ಒಂದು ಸಂಖ್ಯೆಯಷ್ಟೇ! ಒಬ್ಬ ಆಟಗಾರನಾಗಿ ನಿಮಗೆ ಅನುಭವವಿದ್ದರೆ, ಅದರಲ್ಲೂ ದೇಶಿಯ ಕ್ರಿಕೆಟ್ ಅನ್ನು ಇಂದಿಗೂ ಆಡುತ್ತಿದ್ದರೆ ಮತ್ತು ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಖಂಡಿತ ನಿಮ್ಮನ್ನು ಬಿಸಿಸಿಐ ಆಯ್ಕೆಗೆ ಪರಿಗಣಿಸಬೇಕು. ಇಷ್ಟು ವರ್ಷಗಳ ಕಾಲ ಕ್ರಿಕೆಟ್ ಆಡಿರುವ ನನಗೆ, ಅನುಭವಿ ಆಟಗಾರರನ್ನು ತಂಡದಿಂದ ಕೈಬಿಡುವ ಪ್ರವೃತ್ತಿ ನೋಡಿದಾಗ ಬೇಸರವಾಗುತ್ತೆ. ನನ್ನ ಪ್ರಕಾರ, ನಾವು ಅವಕಾಶಕ್ಕೆ ಅರ್ಹರು. ಆದರೆ, ಸಂಪರ್ಕವೇ ಇಲ್ಲ ಅನ್ನೋದು ಬೇಸರದ ಸಂಗತಿ" ಎಂದಿದ್ದಾರೆ ರಹಾನೆ.
ಇದನ್ನೂ ಓದಿ: ಜಿರಳೆಗಳು ತಮ್ಮ ರಂಧ್ರಗಳಿಂದ ಹೊರಬಂದಿವೆ: RoKo ವಿರುದ್ಧ ಮಾತನಾಡಿದವರಿಗೆ ಟಕ್ಕರ್ ಕೊಟ್ಟ ಮಾಜಿ ದಕ್ಷಿಣ ಅಫ್ರಿಕಾ ನಾಯಕ
"ಈಗಲೂ ಆಟವನ್ನು ಆನಂದಿಸುತ್ತೀನಿ. ನನ್ನಿಂದ ಎಷ್ಟು ಬೆಸ್ಟ್ ಕೊಡಲು ಸಾಧ್ಯವೋ, ಅದನ್ನು ಕೊಡುವುದಷ್ಟೇ ನನ್ನ ಧ್ಯೇಯ. ಅವರ ಆಯ್ಕೆಯಿಂದ ನಾನು ದೂರವಿದ್ದರೂ ನನಗನಿಸಿದ್ದು, ಆಸೀಸ್ ಸರಣಿಗೆ ನನ್ನನ್ನು ಪರಿಗಣಿಸಬೇಕಿತ್ತು. ಕಾರಣ, ನಾನು ಸಂಪೂರ್ಣವಾಗಿ ಸಜ್ಜಾಗಿದ್ದೆ" ಎಂದು ರಹಾನೆ ಹೇಳಿದ್ದಾರೆ,(ಏಜೆನ್ಸೀಸ್).