ಒಲಿಂಪಿಕ್ಸ್​ಗೆ ಯೋಗಾಸನ ಸೇರಿಸಲು ಭಾರತ ಪ್ರಯತ್ನ 
ಕ್ರೀಡೆ

ಒಲಿಂಪಿಕ್ಸ್​ಗೆ ಯೋಗಾಸನ ಸೇರಿಸಲು ಭಾರತ ಪ್ರಯತ್ನ

ನವದೆಹಲಿ: ಭಾರತ 2036ರ ಒಲಿಂಪಿಕ್ಸ್​ ಗೇಮ್ಸ್​ ಆತಿಥ್ಯಕ್ಕೆ ಬಿಡ್​ ಸಲ್ಲಿಸಲು ಸಜ್ಜಾಗುತ್ತಿರುವ ನಡುವೆ, ಯೋಗಾಸನವನ್ನು (Yogasana) ಭವಿಷ್ಯದಲ್ಲಿ ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸುವ ಪ್ರಯತ್ನವನ್ನೂ ನಡೆಸಲಾಗುತ್ತಿದೆ ಎಂದು ಕ್ರೀಡಾ ಸಚಿವ ಮನ್ಸುಖ್​ ಮಾಂಡವೀಯ ತಿಳಿಸಿದ್ದಾರೆ.

ಜೂನ್​ 4ರಿಂದ 8ರವರೆಗೆ ಅಹಮದಾಬಾದ್​ನಲ್ಲಿ ಚೊಚ್ಚಲ ಆವೃತ್ತಿಯ ಯೋಗಾಸನ ವಿಶ್ವ ಚಾಂಪಿಯನ್​ ಆಯೋಜಿಸಲು ಸಿದ್ಧತೆ ಪೂರ್ಣಗೊಂಡಿರುವ ಸಮಯದಲ್ಲಿ ಮಾಂಡವೀಯ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯೋಗಾಸನ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 60 ದೇಶಗಳಿಂದ 529 ಯೋಗಪಟುಗಳು ಭಾಗವಹಿಸಲಿದ್ದಾರೆ. ಈ ಪೈಕಿ 114 ಸ್ಪರ್ಧಿಗಳು ಭಾರತೀಯರಾಗಿದ್ದಾರೆ. ಆಯ್ಕೆ ಟ್ರಯಲ್ಸ್​ ಮೂಲಕ ಈ ಸ್ಪರ್ಧಿಗಳನ್ನು ಆರಿಸಲಾಗಿದ್ದು, ಸದ್ಯ ಅವರೆಲ್ಲರೂ ಅಹಮದಾಬಾದ್​ನಲ್ಲಿ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದಾರೆ.

"2030ರಲ್ಲಿ ಅಹಮದಾಬಾದ್​ನಲ್ಲಿ ನಡೆಯಲಿರುವ ಕಾಮನ್ವೆಲ್ತ್​ ಗೇಮ್ಸ್​ ವೇಳೆ ಯೋಗಾಸನ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾಗಿರಲಿದೆ. 2036ರ ಒಲಿಂಪಿಕ್ಸ್​ ಆತಿಥ್ಯ ಸಿಕ್ಕರೆ ಆಗ ನಮ್ಮ ಕ್ರೀಡೆಯೂ ಅದರಲ್ಲಿ ಇರಲಿದೆ. ಆ ವೇಳೆಗೆ ಯೋಗಾಸನ ಒಲಿಂಪಿಕ್ಸ್​ ಕ್ರೀಡೆಯಾಗಿರಬೇಕೆಂದು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಯೋಗಾಸನ ಒಕ್ಕೂಟ (ಯೋಗಾಸನ ಭಾರತ್​) ಪ್ರಯತ್ನಿಸುತ್ತಿದೆ' ಎಂದು ಮಾಂಡವೀಯ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾ ಒಕ್ಕೂಟವನ್ನು ರಚಿಸಲು 75 ದೇಶಗಳ ಸಹಿ ಅಗತ್ಯವಿದೆ. ಇದು ದೊರೆತ ಬಳಿಕ ನಾವು, ಯೋಗಾಸನವನ್ನು ಒಲಿಂಪಿಕ್ಸ್​ಗೆ ಸೇರಿಸಲು ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಗೆ ಮನವಿ ಸಲ್ಲಿಸಲಿದ್ದೇವೆ. ಯೋಗಾಸನ 2032ರ ಒಲಿಂಪಿಕ್ಸ್​ನಲ್ಲಿ ಪ್ರದರ್ಶನ ಕ್ರೀಡೆ ಮತ್ತು 2036ರ ಒಲಿಂಪಿಕ್ಸ್​ನಲ್ಲಿ ಪದಕ ಸ್ಪರ್ಧೆಯಾಗಿರಬೇಕು ಎಂಬುದು ನಮ್ಮ ಧ್ಯೇಯವಾಗಿದೆ. 2036ರ ಒಲಿಂಪಿಕ್ಸ್​ ಭಾರತ ಅಥವಾ ಬೇರೆ ಎಲ್ಲೇ ನಡೆದರೂ ನಮ್ಮ ಪ್ರಯತ್ನ ಮುಂದುವರಿಯಲಿದೆ ಎಂದು ವಿವರಿಸಿದ್ದಾರೆ.

ಯೋಗಾಸನ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 12 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 10ರಿಂದ 55ನೇ ವಯಸ್ಸಿನವರೆಗೆ ಪುರುಷ-ಮಹಿಳೆಯರಲ್ಲಿ 6 ವಯೋಮಿತಿ ವಿಭಾಗಗಳು ಇರಲಿವೆ. ಏಷ್ಯಾ ವಲಯದಿಂದ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ದೇಶಗಳು ಗೈರಾಗಲಿವೆ. ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದಾಗಿ ಇತರ ಕೆಲ ದೇಶಗಳು ಕೂಟಕ್ಕೆ ಗೈರಾಗುತ್ತಿವೆ.