ಅಡಿಲೇಡ್: ಕಾಂಗರೂ ಪ್ರವಾಸದಲ್ಲಿ ಶುಭಾರಂಭದ ಬಳಿಕ ನೀರಸ ನಿರ್ವಹಣೆ ತೋರಿದ ಪ್ರವಾಸಿ ಭಾರತ ತಂಡ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಎರಡನೇ ಹಾಗೂ ಅಹರ್ನಿಶಿ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಪರಾಭವಗೊಂಡಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ (57ಕ್ಕೆ 5) ಮಾರಕ ದಾಳಿಯ ನೆರವಿನಿಂದ 3ನೇ ದಿನದಾಟದಲ್ಲಿ ಭಾರತ ತಂಡವನ್ನು ಬೇಗನೆ ಕಟ್ಟಿಹಾಕಿದ ಆತಿಥೇಯ ಆಸ್ಟ್ರೇಲಿಯಾ ತಂಡ ಎರಡೂವರೆ ದಿನಗಳಲ್ಲೇ ಗೆಲುವು ಒಲಿಸಿಕೊಂಡು ತಿರುಗೇಟು ನೀಡಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.
ಗೆಲುವಿನೊಂದಿಗೆ ಕಾಂಗರೂ ಪಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ರೋಹಿತ್ ಶರ್ಮ ಸಾರಥ್ಯದಲ್ಲಿ ಸತತ 4ನೇ ಸೋಲಿಗೆ ತುತ್ತಾದ ಭಾರತ ತಂಡ 3ನೇ ಸ್ಥಾನಕ್ಕೆ ಕುಸಿದಿದೆ. ಇದರೊಂದಿಗೆ ಸತತ 3ನೇ ಬಾರಿಗೆ ಫೈನಲ್‌ಗೇರುವ ಭಾರತದ ಹಾದಿಯೂ ದುರ್ಗಮಗೊಂಡಿದೆ.
ಡಬ್ಲ್ಯುಟಿಸಿಯಲ್ಲಿ 3ನೇ ಸ್ಥಾನಕ್ಕಿಳಿದ ಭಾರತ
ಅಹರ್ನಿಶಿ ಟೆಸ್ಟ್‌ನ ಹೀನಾಯ ಸೋಲಿನ ಬಳಿಕ ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್‌ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಭಾರಿ ಕುಸಿತ ಕಂಡಿದೆ. ಪರ್ತ್ ಟೆಸ್ಟ್ ಗೆಲುವಿನ ಬಳಿಕ ಶೇ.61.11 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದ ಭಾರತ, ಅಡಿಲೇಡ್ ಸೋಲಿನ ನಂತರ ಶೇ. 57.29 ಅಂಕಗಳೊಂದಿಗೆ 3ನೇ ಸ್ಥಾನಕ್ಕಿಳಿದಿದೆ. ಇತ್ತ ಆಸ್ಟ್ರೇಲಿಯಾ ತಂಡ ಜಯದೊಂದಿಗೆ ಶೇ. 57.69ರಿಂದ 60.71 ಅಂಕದ ಪ್ರಗತಿ ಸಾಧಿಸಿ ಅಗ್ರಸ್ಥಾನಕ್ಕೆ ಮರಳಿದೆ.
ಡಬ್ಲ್ಯುಟಿಸಿ ಫೈನಲ್ ರೇಸ್‌ನಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಶೇ.59.26 ಅಂಕದೊಂದಿಗೆ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಡಬ್ಲುೃಟಿಸಿ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿವೆ. ಡಬ್ಲ್ಯುಟಿಸಿಯಲ್ಲಿ ಭಾರತ ಇನ್ನೂ 3 ಪಂದ್ಯಗಳನ್ನಾಡಲಿದ್ದು, 4-1 ಅಥವಾ 3-1ರಿಂದ ಸರಣಿ ಗೆದ್ದರೂ ನೇರವಾಗಿ ಫೈನಲ್‌ಗೇರುವ ಅವಕಾಶ ಹೊಂದಿದೆ. ಶ್ರೀಲಂಕಾ ಶೇ.50 ನಾಲ್ಕನೇ ಸ್ಥಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಶೇ.45.24 ಅಂಕದೊಂದಿಗೆ 5ನೇ ಸ್ಥಾನಕ್ಕೇರಿದರೆ, ಕಿವೀಸ್ 6ನೇ ಸ್ಥಾನದಲ್ಲಿದೆ.
ಹೆಡ್, ಕಮ್ಮಿನ್ಸ್ ವಿಶೇಷ ದಾಖಲೆ
ಟ್ರಾವಿಸ್ ಹೆಡ್ ಭಾರತ ವಿರುದ್ಧ ಬಿಳಿ, ಕೆಂಪು, ಪಿಂಕ್ ಚೆಂಡಿನಲ್ಲಿ ಶತಕ ಸಿಡಿಸಿದ ಮೊದಲ ಸಾಧಕ ಎನಿಸಿದರೆ, ಪ್ಯಾಟ್ ಕಮ್ಮಿನ್ಸ್ ಈ ಮೂರೂ ಬಣ್ಣದ ಚೆಂಡುಗಳಲ್ಲಿ ಭಾರತ ವಿರುದ್ಧ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎಂಬ ದಾಖಲೆ ಬರೆದರು.