ಕ್ರೀಡೆ

ಇಂದಿನಿಂದ ಭಾರತಕ್ಕೆ ಆಸೀಸ್ ಟೆಸ್ಟ್: ವಾಂಖೆಡೆಯಲ್ಲಿ ಮಹಿಳೆಯರ ಕಾದಾಟ, ಮೊದಲ ಜಯುದ ನಿರೀಕ್ಷೆಯಲ್ಲಿ ಹರ್ಮಾನ್‌ಪ್ರೀತ್ ಬಳಗ

ಮುಂಬೈ: ಪ್ರವಾಸಿ ಇಂಗ್ಲೆಂಡ್ ತಂಡವನ್ನು ಸ್ಪಿನ್ ಬಲೆಯಲ್ಲಿ ಕೆಡವಿ ಯಶಸ್ಸು ಸಾಧಿಸಿರುವ ಭಾರತ ಮಹಿಳಾ ತಂಡ 40 ವರ್ಷಗಳ ಬಳಿಕ ತವರಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ಟೆಸ್ಟ್ ಪಂದ್ಯವನ್ನಾಡಲು ಸಜ್ಜಾಗಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಎದುರಾಗಲಿವೆ. 1984ರಲ್ಲಿ ಕೊನೆಯದಾಗಿ ಉಭಯ ತಂಡಗಳು ಭಾರತದಲ್ಲಿ ಮುಖಾಮುಖಿಯಾಗಿದ್ದವು.ಎರಡು ತಂಡಗಳು ಇದುವರೆಗೆ 10 ಬಾರಿ ಎದುರಾಗಿದ್ದು, 4 ಬಾರಿ ಆಸೀಸ್ ಗೆದ್ದರೆ, ಉಳಿದ 6 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ.

ಭಾರತ ಮೊದಲ ಗೆಲುವು ದಾಖಲಿಸುವ ಹಂಬಲದಲ್ಲಿ ಕಣಕ್ಕಿಳಿಯಲಿದೆ. 40 ವರ್ಷದ ಬಳಿಕ ಭಾರತದಲ್ಲಿ ಟೆಸ್ಟ್ ಆಡುತ್ತಿರುವ ಆಸ್ಟ್ರೇಲಿಯಾ ತಂಡವನ್ನು ನೂತನ ನಾಯಕಿ ಅಲಿಸ್ಸಾ ಹೀಲಿ ಮುನ್ನಡೆಸಲಿದ್ದಾರೆ. ಮೆಗ್ ಲ್ಯಾನಿಂಗ್ ಬಳಿಕ ಅಲಿಸ್ಸಾ ಹೀಲಿ ಅವರನ್ನು ನಾಯಕಿಯಾಗಿ ನೇಮಕ ಮಾಡಲಾಗಿದೆ. 2021ರಲ್ಲಿ ಕೊನೆಯದಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಖಾಮುಖಿಯಾದಾಗ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಸ್ಮತಿ ಮಂದನಾ ಶತಕ ಗಳಿಸಿದ್ದರು.

ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಪೋಟ್ಸ್ 18, ಜಿಯೋ ಸಿನಿಮಾ

ಶುಭಾಗೆ ಪ್ರಿಯಾ ಮೀಸಲು

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಎಡಗೈ ಬೆರಳಿನ ಗಾಯಕ್ಕೆ ತುತ್ತಾಗಿದ್ದ ಕರ್ನಾಟಕದ ಬ್ಯಾಟರ್ ಶುಭಾ ಸತೀಶ್, ಆಸೀಸ್ ವಿರುದ್ಧ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಶುಭಾಗೆ ಮೀಸಲು ಆಟಗಾರ್ತಿಯಾಗಿ ಪ್ರಿಯಾ ಪೂನಿಯಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಶುಭಾ ಬದಲಿಗೆ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಹರ್ಲೀನ್ ಡಿಯೋಲ್ ಹಾಗೂ ರಿಚಾ ೋಷ್ ನಡುವೆ ಪೈಪೋಟಿ ಇದೆ.

ಮುಖಾಮುಖಿ: 10

ಆಸ್ಟ್ರೇಲಿಯಾ: 4

ಭಾರತ: 0

ಡ್ರಾ: 6