ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ಆಫ್ಘಾನಿಸ್ತಾನ; ದಿಗ್ಗಜನ ಹಾಡಿಗೆ ಕುಣಿದು, ಕುಪ್ಪಳಿಸಿದ ರಶೀದ್ ಪಡೆ

ವೆಸ್ಟ್​ ಇಂಡೀಸ್: ಇಂದು (ಜೂ.23) ಅರ್ನೋಸ್ ವೇಲ್ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಸೂಪರ್​ 08 ಕ್ಲ್ಯಾಶ್​ನಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಆಸ್ಟ್ರೇಲಿಯಾ ತಂಡವನ್ನು 21 ರನ್​ಗಳಿಂದ ಮಣಿಸಿದ ಅಫ್ಘಾನಿಸ್ತಾನ, ತಮ್ಮ ಸೆಮಿಫೈನಲ್​ ಆಸೆಯನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ. 10ಕ್ಕೆ 10 ವಿಕೆಟ್​ ಉರುಳಿಸುವ ಮೂಲಕ ಚಾಂಪಿಯನ್​ ಆಗಿ ಮೆರೆದವರಿಗೆ ರಶೀದ್​ ಪಡೆ ಕೊಟ್ಟ ಶಾಕ್ ಸದ್ಯ ಕ್ರಿಕೆಟ್ ಪ್ರೇಮಿಗಳನ್ನು ನಿಬ್ಬೆರಗಾಗಿಸಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಅಫ್ಘಾನಿಸ್ತಾನದ ಆರಂಭಿಕರಾದ ರೆಹಮಾನುಲ್ಲಾ ಗುರ್ಬಾಜ್​ (60 ರನ್, 49 ಎಸೆತ, 4 ಬೌಂಡರಿ, 4 ಸಿಕ್ಸರ್), ಇಬ್ರಾಹಿಂ ಜರ್ದಾನ್​ (51 ರನ್, 48 ಎಸೆತ, 6 ಬೌಂಡರಿ) ಆರ್ಧಶತಕಗಳ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 148 ರನ್​ ಗಳಿಸಿತು. ಆಸ್ಟ್ರೇಲಿಯಾ ಪರ ಪ್ಯಾಟ್​ ಕಮ್ಮಿನ್ಸ್​ (4-0-28-3), ಆ್ಯಡಂ ಜಂಪಾ (4-0-28-2), ಮಾರ್ಕಸ್​ ಸ್ಟೋಯಿನಿಸ್​ (2-0-19-1), ಗ್ಲೆನ್​ ಮ್ಯಾಕ್ಸ್​ವೆಲ್​ (2-0-12-0), ಆಶ್ಟನ್​ ಅಗರ್​ (4-1-17-0), ಜೋಶ್​ ಹೇಜಲ್​ವುಡ್​ (4-0-39-0) ರನ್​ ನೀಡಿ ವಿಕೆಟ್​ ಪಡೆದರು. ಅಂತಿಮವಾಗಿ 10ಕ್ಕೆ 10 ವಿಕೆಟ್​ ಕಳೆದುಕೊಳ್ಳುವ ಮೂಲಕ ಆಫ್ಘಾನ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಶರಣಾಯಿತು.

ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ನೋಡಿದ ಅಫ್ಘಾನಿಸ್ತಾನ ಪಡೆ, ತಾವು ತೆರಳುತ್ತಿದ್ದ ಬಸ್​ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಅದರಲ್ಲೂ ವೆಸ್ಟ್​ ಇಂಡೀಸ್​ನ ಮಾಜಿ ಕ್ರಿಕೆಟಿಗ ಡಿ.ಜೆ. ಬ್ರಾವೋ ಅವರು ಹಾಡಿರುವ 'ಚಾಂಪಿಯನ್'​ ಹಾಡಿಗೆ ಡ್ಯಾನ್ಸ್​ ಮಾಡುವ ಮೂಲಕ ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ತಂಡದ ಆಟಗಾರರೊಂದಿಗೆ ಕ್ಯಾಪ್ಟನ್​ ರಶೀದ್​ ಪಟ್ಟ ಖುಷಿಗೆ ಕ್ರಿಕೆಟ್ ಪ್ರೇಮಿಗಳು ಫಿದಾ ಆಗಿದ್ದು, ನೀವು ಇದಕ್ಕೆ ಅರ್ಹರು, ಮುಂದಿನ ಪಂದ್ಯಗಳಿಗೆ ಶುಭವಾಗಲಿ ಎಂದು ಹಾರೈಸಿದ್ದಾರೆ,(ಏಜೆನ್ಸೀಸ್).