ಬೆಂಗಳೂರು: ಸಡನ್ಡೆತ್ ಸಾಹಸದಲ್ಲಿ ಮಾಜಿಯಾ ಎಸ್ ಆಂಡ್ ಆರ್ಸಿ ತಂಡದ ವಿರುದ್ಧ ಸೋಲು ಕಂಡ ಬೆಂಗಳೂರು ಎಫ್ಸಿ ತಂಡ ಎಎಫ್ಸಿ ಕಪ್ ಫುಟ್ಬಾಲ್ ಟೂರ್ನಿಯ ಪ್ಲೇಆಫ್ ಹಂತದಲ್ಲಿಯೇ ನಿರ್ಗಮಿಸಿದೆ.
ಬುಧವಾರ ಕಂಠೀರವ ಸ್ಟೇಡಿಯಂನಲ್ಲಿ ನಡೆದ ನಡೆದ ಪ್ಲೇ ಆಫ್ ಹಂತದ 2ನೇ ಚರಣದ ಪಂದ್ಯ ನಿಗದಿತ ಸಮಯದಲ್ಲಿ 3-2ರಿಂದ ಬಿಎಫ್ಸಿ ಗೆಲುವಿನೊಂದಿಗೆ ಅಂತ್ಯ ಕಂಡರೂ, ಗೋಲು ಲೆಕ್ಕಾಚಾರದಲ್ಲಿ 4-4 ಸಮಬಲ (ಮೊದಲ ಚರಣದಲ್ಲಿ ಬಿಎಫ್ಸಿ 1-2 ರಿಂದ ಸೋಲು ಕಂಡಿತ್ತು) ಕಂಡಿತ್ತು. ಫಲಿತಾಂಶ ನಿರ್ಣಯಕ್ಕಾಗಿ ನಡೆದ ಪೆನಾಲ್ಟಿ ಶೂಟೌಟ್ನಲ್ಲಿ ಎರಡೂ ತಂಡಗಳು ಮೊದಲ ಐದು ಅವಕಾಶಗಳ ಅಂತ್ಯಕ್ಕೆ 3-3 ರಿಂದ ಸಮಬಲ ಸಾಧಿಸಿದ್ದವು. ನಂತರ ನಡೆದ ಸಡನ್ ಡೆತ್ನ ಮೊದಲ ಅವಕಾಶದಲ್ಲಿ ಬಿಎಫ್ಸಿಯ ಪರಾಗ್ ಶ್ರೀನಿವಾಸ್ ಗೋಲು ಬಾರಿಸಲು ವಿಫಲರಾದರೆ, ಮಾಜಿಯಾ ತಂಡದ ಪರವಾಗಿ ಹುಸೇನ್ ಬಾರಿಸಿದ ಗೋಲು ಬಿಎಫ್ಸಿ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧುರನ್ನು ವಂಚಿಸಿತು. ಇದರಿಂದಾಗಿ ಮಾಜಿಯಾ ಪೆನಾಲ್ಟಿಯಲ್ಲಿ 4-3ರಿಂದ ಬಿಎಫ್ಸಿ ತಂಡವನ್ನು ಸೋಲಿಸಿ 2020ರ ಎಎಫ್ಸಿ ಕಪ್ನ ಗುಂಪು ಹಂತಕ್ಕೆ ಅರ್ಹತೆ ಪಡೆದುಕೊಂಡಿತು. ನಿಗದಿತ ಸಮಯದಲ್ಲಿ ಬಿಎಫ್ಸಿ ಪರವಾಗಿ ನಾಯಕ ಸುನೀಲ್ ಛೇಟ್ರಿ 2 ಗೋಲು ಬಾರಿಸಿದ್ದರೆ, ದೆಶಾರ್ನ್ ಬ್ರೌನ್ ಒಂದು ಗೋಲು ಸಿಡಿಸಿದ್ದರು.
ಐಎಸ್ಎಲ್ ಉಪಾಂತ್ಯ ವೇಳಾಪಟ್ಟಿ ಪ್ರಕಟ: ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಸೆಮಿಫೈನಲ್ ವೇಳಾಪಟ್ಟಿ ಪ್ರಕಟಗೊಂಡಿದ್ದು, ಬಿಎಫ್ಸಿ ತಂಡ ಎಟಿಕೆ ವಿರುದ್ಧ ಮಾರ್ಚ್ 1ರಂದು ಬೆಂಗಳೂರಿನಲ್ಲಿ ಸೆಣಸಲಿದ್ದರೆ, ಮಾರ್ಚ್ 8ರಂದು ಕೋಲ್ಕತದಲ್ಲಿ 2ನೇ ಚರಣ ಆಡಲಿದೆ. ಚೆನ್ನೈಯಿನ್ ಎಫ್ಸಿ-ಎಫ್ಸಿ ಗೋವಾ ತಂಡಗಳು ಫೆ. 29 ಮತ್ತು ಮಾ. 7ರಂದು ಕಾದಾಡಲಿವೆ. ಮಾ. 14ರಂದು ಫೈನಲ್ ನಡೆಯಲಿದೆ.