ಕ್ರೀಡೆ

ಮುವಾಯ್​ಥಾಯ್‌ನಲ್ಲಿ ಶೌರ್ಯ ಮೆರೆದ ಕನ್ನಡಿಗ ಸೂರ್ಯ; ಥಾಯ್ಲೆಂಡ್​ನಲ್ಲಿ ಸೆಣಸಿ ಮಿಂಚಿದ ಸ್ಯಾಂಡಲ್‌ವುಡ್ ನಟನ‌ ಪುತ್ರ

ಬೆಂಗಳೂರು: ಥಾಯ್ಲೆಂಡ್‌ನಲ್ಲಿ ಇತ್ತೀಚೆಗೆ ನಡೆದ ಮುವಾಯ್​ಥಾಯ್ ಸೆಣಸಾಟದಲ್ಲಿ ಕನ್ನಡಿಗ ಸೂರ್ಯ ಸಾಗರ್ ಶೌರ್ಯ ಮೆರೆದಿದ್ದಲ್ಲದೆ ಪದಕವನ್ನೂ ಗಳಿಸಿದ್ದಾರೆ. ಪ್ರಪಂಚದ ಪ್ರಥಮ ಮುವಾಯ್​ಥಾಯ್​ ಸ್ಟೇಡಿಯಂ ಎನ್ನಲಾದ ರಾಜದಮ್ನರ್ನ್ ಸ್ಟೇಡಿಯಮ್​ನಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.

ಇತ್ತೀಚೆಗೆ ಥಾಯ್ಲೆಂಡ್​ನಲ್ಲಿ ನಡೆದ ರಾಜದಮ್ನರ್ನ್ ವರ್ಲ್ಡ್ ಸೀರಿಸ್(ಆರ್​ಡಬ್ಲ್ಯುಎಸ್​)ನಲ್ಲಿ ಸೂರ್ಯ ಅಲ್ಲಿನ ಖ್ಯಾತ ಪ್ರತಿಸ್ಪರ್ಧಿ ಚಟಪೆಚ್ ಸಪಿದ ಅವರನ್ನು ಮಣಿಸಿ ಪದಕ ಗಳಿಸಿದ್ದಾರೆ. ಮುವಾಯ್​ಥಾಯ್​​ನ ನೂರಾರು ಸೆಣಸಾಟಗಳಲ್ಲಿ ಭಾಗವಹಿಸಿ, 4 ಬಾರಿ ಟೂರ್ನಮೆಂಟ್ ಚಾಂಪಿಯನ್ ಆಗಿರುವ ಸಪಿದ ಅವರನ್ನು ಮಣಿಸುವ ಮೂಲಕ ಸೂರ್ಯ ಶೌರ್ಯ ಮೆರೆದಿದ್ದಾರೆ. ಸೂರ್ಯ ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಭಾರತೀಯ ಮುವಾಯ್​ಥಾಯ್​ ಫೈಟರ್ ಎಂದೆನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಚೊಚ್ಚಲ ಸೆಣಸಾಟದಲ್ಲಿ ಸೂರ್ಯ ಥಾಯ್ಲೆಂಡ್​ನ ದೆನ್​ ನೊಂಗ್​ ಬುವಾ ಅವರನ್ನು ಡೆಡ್ಲಿ ಎಲ್​ಬೊ ಕೆಒನಲ್ಲಿ ಮಣಿಸಿದ್ದರು.

ಆರ್​ಡಬ್ಲ್ಯುಎಸ್​ನಲ್ಲಿ ಹೀಗೊಂದು ಸಾಧನೆ ಮಾಡಿರುವ ಕನ್ನಡಿಗ ಬೇರಾರೂ ಅಲ್ಲ. ನಟ ಅರುಣ್​ ಸಾಗರ್ ಅವರ ಪುತ್ರ ಸೂರ್ಯ ಸಾಗರ್​. ಅರುಣ್ ಸಾಗರ್ ಪುತ್ರ ಥಾಯ್ಲೆಂಡ್​ನಲ್ಲಿ ಮುವಾಯ್​ಥಾಯ್​ನಲ್ಲಿ ಮಿಂಚಿದರೆ, ಇತ್ತ ಪುತ್ರಿ ಅದಿತಿ ಸಾಗರ್ ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ, ಶಿವರಾಜಕುಮಾರ್ ಅಭಿನಯದ 'ವೇದ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್​​ವುಡ್​ಗೆ ಪ್ರವೇಶಿಸಿದ್ದರು.