ಕ್ರೀಡೆ

ಭಾರತ-ಪಾಕ್​ ನಡುವಿನ ಏಷ್ಯಾಕಪ್​ ಪಂದ್ಯದ ಮೀಸಲು ದಿನಕ್ಕೆ ವಿಶೇಷ ನಿಯಮ!

ಕೊಲಂಬೊ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕ್​ ನಡುವೆ ಏಷ್ಯಾಕಪ್​ ಏಕದಿನ ಟೂರ್ನಿಯ ಸೂಪರ್​-4ರಲ್ಲಿ ಭಾನುವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿಯಿಂದಾಗಿ ಮೀಸಲು ದಿನ ನಿಗದಿಪಡಿಸಲಾಗಿದೆ. ಆದರೆ ಮೀಸಲು ದಿನವಾದ ಸೋಮವಾರ ಹೊಸದಾಗಿ ಪಂದ್ಯ ಆರಂಭಗೊಳ್ಳುವುದಿಲ್ಲ. ಭಾನುವಾರ ಮಳೆ ಕಾಡಿದರೆ ಯಾವ ಹಂತದಲ್ಲಿ ಪಂದ್ಯ ಸ್ಥಗಿತಗೊಳ್ಳುವುದೋ ಅಲ್ಲಿಂದಲೇ ಸೋಮವಾರ ಆಟ ಮುಂದುವರಿಯಲಿದೆ.

ಪ್ರೇಕ್ಷಕರಿಗೂ ಮೀಸಲು ದಿನದ ಆಟವನ್ನು ಒಂದೇ ಟಿಕೆಟ್​ನಿಂದ ನೋಡುವ ಅವಕಾಶ ಕಲ್ಪಿಸಲಾಗಿದೆ. ಸೂಪರ್​-4ರಲ್ಲಿ ಉಳಿದ ಯಾವ ಪಂದ್ಯಗಳಿಗೂ ಮೀಸಲು ದಿನ ಇರುವುದಿಲ್ಲ. ಸೆ. 17ರ ಫೈನಲ್​ ಪಂದ್ಯಕ್ಕೆ ಸೆ. 18 ಮೀಸಲು ದಿನವಾಗಿರುತ್ತದೆ.

ಪಂದ್ಯ ರದ್ದುಗೊಂಡರೆ ಆರ್ಥಿಕ ಪರಿಹಾರ ನೀಡಬೇಕೆಂದು ಬೇಡಿಕೆ ಸಲ್ಲಿಸಿದ್ದ ಪಾಕಿಸ್ತಾನ ಕ್ರಿಕೆಟ್​ ಮಂಡಳಿಗೆ (ಪಿಸಿಬಿ), ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಮೀಸಲು ದಿನದ ಪರಿಹಾರವನ್ನಷ್ಟೇ ನೀಡಿದೆ.