ಕ್ರೀಡೆ

ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್: ರಾಜ್ಯದ ಅಭಿಷೇಕ್‌ಗೆ ಆರು ಪದಕ

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ (ಎನ್‌ಎಸ್‌ಸಿಸಿ) ರಾಜ್ಯದ ಅಭಿಷೇಕ್ ಶೇಖರ್ ಆರು ಪದಕ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಈ ಸಾಧನೆ ಮಾಡಿದ ಮೊದಲ ಕನ್ನಡಿಗ ಎನಿಸಿದ್ದಾರೆ.

ಮಧ್ಯಪ್ರದೇಶ ಶೂಟಿಂಗ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯ 10 ಮೀಟರ್ ಏರ್‌ರೈಲ್ ಶೂಟಿಂಗ್ ಸ್ಪರ್ಧೆಯಲ್ಲಿ 18 ವರ್ಷದ ಅಭಿಷೇಕ್, ತಂಡದ ವಿಭಾಗದಲ್ಲಿ 3 ಸ್ವರ್ಣ ಪದಕಕ್ಕೆ ಕೊರಳೊಡ್ಡಿದರೆ, ಜೂನಿಯರ್ ವಿಭಾಗದ ಫೈನಲ್‌ನಲ್ಲಿ ರಜತ ಪದಕಕ್ಕೆ ತೃಪ್ತಿಪಟ್ಟರು. ಫೈನಲ್‌ನಲ್ಲಿ ಪ್ಯಾರಿಸ್ ಒಲಿಂಪಿಯನ್ ರುದ್ರಾಂಕ್ಷ್ ಪಾಟೀಲ್ ವಿಶ್ವದಾಖಲೆಯೊಂದಿಗೆ ಚಿನ್ನ ಜಯಿಸಿದರೆ, 251.4 ಅಂಕ ಕಲೆಹಾಕಿದ ಅಭಿಷೇಕ್ 2ನೇ ಸ್ಥಾನ ಪಡೆದರು. ಜೂನಿಯರ್ ಮಿಶ್ರ ತಂಡ ವಿಭಾಗದಲ್ಲಿ ರಾಜ್ಯದವರೇ ಆದ ತಿಲೋತ್ತಮ ಸೇನ್ ಜತೆಯಾಗಿ 2ನೇ ಬೆಳ್ಳಿ ಪದಕ ಪಡೆದ ಅಭಿಷೇಕ್, ಸಿವಿಲಿಯನ್ ವಿಭಾಗದಲ್ಲಿ ಕಂಚು ಜಯಿಸಿದರು. ಬೆಂಗಳೂರಿನ ಆರ್ಟ್ ಆ್ ಶೂಟಿಂಗ್ ಅಕಾಡೆಮಿಯಲ್ಲಿ ಕೋಚ್ ರಾಮಚಂದ್ರನ್ ಪುರುಷೋತ್ತಮ ಬಳಿ ಅಭಿಷೇಕ್ ತರಬೇತಿ ಪಡೆಯುತ್ತಿದ್ದಾರೆ.