ದುಬೈ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ಮಿಂಚಿದ ಭಾರತದ ಆರಂಭಿಕ ಅಭಿಷೇಕ್ ಶರ್ಮ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಭಿಷೇಕ್ ಬರೋಬ್ಬರಿ 38 ಸ್ಥಾನ ಬಡ್ತಿ ಕಾಣುವ ಮೂಲಕ ಈಗ ಟಿ20 ಕ್ರಿಕೆಟ್ನಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್ ಎನಿಸಿದ್ದಾರೆ. 3 ಸ್ಥಾನ ಬಡ್ತಿ ಪಡೆದಿರುವ ವರುಣ್ ಚಕ್ರವರ್ತಿ ಇಂಗ್ಲೆಂಡ್ನ ಆದಿಲ್ ರಶೀದ್ ಜತೆಗೆ 2ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಆಸ್ಟ್ರೆಲಿಯಾದ ಟ್ರಾವಿಸ್ ಹೆಡ್ ಮತ್ತು ವೆಸ್ಟ್ ಇಂಡೀಸ್ನ ಅಕೀಲ್ ಹೊಸೈನ್ ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆಲ್ರೌಂಡರ್ಸ್ ರ್ಯಾಂಕಿಂಗ್ನಲ್ಲಿ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ತಂಡ ರ್ಯಾಂಕಿಂಗ್ನಲ್ಲಿ ಭಾರತವೂ ವಿಶ್ವ ನಂ. 1 ಪಟ್ಟದಲ್ಲಿ ಮುಂದುವರಿದಿದೆ.
24 ವರ್ಷದ ಅಭಿಷೇಕ್ ಸರಣಿಯಲ್ಲಿ ಆಡಿದ 5 ಇನಿಂಗ್ಸ್ಗಳಲ್ಲಿ 22 ಸಿಕ್ಸರ್, 24 ಬೌಂಡರಿಗಳ ಸಹಿತ 279 ರನ್ ಬಾರಿಸಿದ್ದರು. ಸರಣಿಯಲ್ಲಿ 3 ವಿಕೆಟ್ ಕೂಡ ಕಬಳಿಸಿದ್ದ ಅಭಿಷೇಕ್ ಆಲ್ರೌಂಡರ್ಸ್ ರ್ಯಾಂಕಿಂಗ್ನಲ್ಲಿ 31 ಸ್ಥಾನ ಬಡ್ತಿಯೊಂದಿಗೆ 13ನೇ ಸ್ಥಾನಕ್ಕೇರಿದ್ದಾರೆ.
ಅಭಿಷೇಕ್ ಹೊರತಾಗಿ ಭಾರತದ ಇತರ ಪ್ರಮುಖ ಬ್ಯಾಟರ್ಗಳು ರ್ಯಾಂಕಿಂಗ್ನಲ್ಲಿ ಕುಸಿತ ಕಂಡಿದ್ದಾರೆ. ಇದುವರೆಗೆ ಟಿ20ಯಲ್ಲಿ ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟರ್ ಆಗಿದ್ದ ತಿಲಕ್ ವರ್ಮ ಇದೀಗ 2ರಿಂದ 3ನೇ ಸ್ಥಾನಕ್ಕೆ ಕುಸಿದಿದ್ದರೆ, ನಾಯಕ ಸೂರ್ಯಕುಮಾರ್ ಯಾದವ್ 5ನೇ ಸ್ಥಾನಕ್ಕಿಳಿದಿದ್ದಾರೆ. ಯಶಸ್ವಿ ಜೈಸ್ವಾಲ್ 12ನೇ ಸ್ಥಾನಕ್ಕಿಳಿದಿದ್ದಾರೆ. ಸಂಜು ಸ್ಯಾಮ್ಸನ್ 5 ಸ್ಥಾನ ಕುಸಿದು 34ನೇ ಸ್ಥಾನಕ್ಕಿಳಿದಿದ್ದಾರೆ. ಬೌಲರ್ಗಳಲ್ಲಿ ಮತ್ತೋರ್ವ ಸ್ಪಿನ್ನರ್ ರವಿ ಬಿಷ್ಣೋಯಿ 4 ಸ್ಥಾನ ಬಡ್ತಿಯೊಂದಿಗೆ 6ನೇ ಸ್ಥಾನಕ್ಕೇರಿದ್ದರೆ, ಅರ್ಷದೀಪ್ 1 ಸ್ಥಾನ ಕುಸಿದು 9ನೇ ಸ್ಥಾನಕ್ಕಿಳಿದಿದ್ದಾರೆ. ಅಕ್ಷರ್ ಪಟೇಲ್ 13ನೇ ಸ್ಥಾನಕ್ಕಿಳಿದಿದ್ದಾರೆ.