ಹರಾರೆ: ಮೊದಲ ಟಿ20 ಪಂದ್ಯದ ಸೋಲಿಗೆ ಭಾರತದ ಯುವ ತಂಡ 2ನೇ ಪಂದ್ಯದಲ್ಲಿ ದಿಟ್ಟ ತಿರುಗೇಟು ನೀಡಿದೆ. ಪಂಜಾಬ್ನ ಯುವ ಎಡಗೈ ಆರಂಭಿಕ ಅಭಿಷೇಕ್ ಶರ್ಮ (100 ರನ್, 47 ಎಸೆತ, 7 ಬೌಂಡರಿ, 8 ಸಿಕ್ಸರ್) ಬಿರುಸಿನ ಶತಕದೊಂದಿಗೆ ಭಾರತ ತಂಡ 2ನೇ ಟಿ20 ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ ವಿರುದ್ಧ ಭರ್ತಿ 100 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇದೇ ವೇಳೆ 23 ವರ್ಷದ ಅಭಿಷೇಕ್ ಶರ್ಮ ಹಲವು ದಾಖಲೆಗಳನ್ನು ಬರೆದರು.
ನಾಯಕ ಶುಭಮಾನ್ ಗಿಲ್ (2) ವಿಕೆಟ್ ಬೇಗನೆ ಕಬಳಿಸುವ ಮೂಲಕ ಜಿಂಬಾಬ್ವೆ ತಂಡ ಭಾರತಕ್ಕೆ ಆರಂಭಿಕ ಆಘಾತ ನೀಡಿತು. ಆಗ ಅಭಿಷೇಕ್ ಶರ್ಮ ಭಾರತಕ್ಕೆ ಆಸರೆಯಾಗಿ ನಿಂತು, ಋತುರಾಜ್ ಗಾಯಕ್ವಾಡ್ (77*ರನ್, 47 ಎಸೆತ, 11 ಬೌಂಡರಿ, 1 ಸಿಕ್ಸರ್) ಜತೆ 2ನೇ ವಿಕೆಟ್ಗೆ 76 ಎಸೆತಗಳಲ್ಲಿ 137 ರನ್ ಕಸಿಯುವ ಮೂಲಕ ಜಿಂಬಾಬ್ವೆಗೆ ದಿಟ್ಟ ತಿರುಗೇಟು ನೀಡಿದರು. ಈ ಜೋಡಿ ಆರಂಭದಲ್ಲಿ ನಿಧಾಗತಿಯಲ್ಲಿ ಆಡಿದ್ದರಿಂದ ಭಾರತ ಪವರ್ಪ್ಲೇನಲ್ಲಿ 36 ರನ್ ಮಾತ್ರ ಗಳಿಸಿತ್ತು. ಪದಾರ್ಪಣೆಯ ಪಂದ್ಯದಲ್ಲಿ ಸೊನ್ನೆ ಸುತ್ತಿದ್ದ ಅಭಿಷೇಕ್ ಅದರಿಂದ ದೃತಿಗೆಡದೆ ಈ ಸಲ ಎದುರಿಸಿದ ಮೊದಲ ಕ್ರಮಬದ್ಧ ಎಸೆತದಲ್ಲೇ ಸಿಕ್ಸರ್ ಸಿಡಿಸಿದರು. ಪವರ್ಪ್ಲೇ ನಂತರ ರನ್ಗತಿ ಏರಿಸಲು ಯತ್ನಿಸಿದ ಅಭಿಷೇಕ್, ಡಿಯೋನ್ ಮೈಯರ್ಸ್ ಎಸೆದ ಪಂದ್ಯದ 11ನೇ ಓವರ್ನಲ್ಲಿ 28 ರನ್ (2ವೈಡ್, 2, 4,6, 4, 6, 4) ಸಿಡಿಸಿದರು. ಈ ಮೂಲಕ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ಮುಂದಿನ 50 ರನ್ಗಳನ್ನು 13 ಎಸೆತಗಳಲ್ಲೇ ಕಸಿಯುವ ಮೂಲಕ 46 ಎಸೆತಗಳಲ್ಲೇ ಶತಕ ಪೂರೈಸಿದರು. ವೆಲ್ಲಿಂಗ್ಟನ್ ಮಸಕಜ ಎಸೆದ ಪಂದ್ಯದ 14ನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಅಭಿಷೇಕ್ ಶತಕ ಪೂರೈಸಿದರು ಮತ್ತು ಮರುಎಸೆತದಲ್ಲೇ ಔಟಾದರು.
1: ಅಭಿಷೇಕ್ ಶರ್ಮ ಟಿ20 ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಮೂಲಕ ಶತಕ ಪೂರೈಸಿದ ಮೊದಲ ಬ್ಯಾಟರ್ ಎನಿಸಿದರು.
46: ಅಭಿಷೇಕ್ ಶರ್ಮ (46 ಎಸೆತ) ಟಿ20 ಕ್ರಿಕೆಟ್ನಲ್ಲಿ ಭಾರತದ 3ನೇ ಅತಿವೇಗದ ಶತಕವೀರ ಎನಿಸಿದರು. ರೋಹಿತ್ ಶರ್ಮ (35 ಎಸೆತ), ಸೂರ್ಯಕುಮಾರ್ (45 ಎಸೆತ) ಮೊದಲೆರಡು ಸ್ಥಾನದಲ್ಲಿದ್ದಾರೆ. ಕೆಎಲ್ ರಾಹುಲ್ ಕೂಡ 46 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
2: ಅಭಿಷೇಕ್ ಶರ್ಮ ಟಿ20 ಕ್ರಿಕೆಟ್ನ ಮೊದಲ 2 ಇನಿಂಗ್ಸ್ಗಳಲ್ಲಿ ಶೂನ್ಯ&ಶತಕ ಗಳಿಸಿದ ವಿಶ್ವದ 2ನೇ ಬ್ಯಾಟರ್ ಎನಿಸಿದರು. ವೆಸ್ಟ್ ಇಂಡೀಸ್ನ ಇವಿನ್ ಲೆವಿಸ್ ಮೊದಲಿಗ.
4: 23 ವರ್ಷ, 307 ದಿನ ವಯಸ್ಸಿನ ಅಭಿಷೇಕ್ ಶರ್ಮ ಟಿ20ಯಲ್ಲಿ ಭಾರತದ 4ನೇ ಅತಿಕಿರಿಯ ಶತಕವೀರ ಎನಿಸಿದರು. ಯಶಸ್ವಿ ಜೈಸ್ವಾಲ್ (21 ವರ್ಷ, 279 ದಿನ) ಮೊದಲ ಸ್ಥಾನದಲ್ಲಿದ್ದಾರೆ.
2: ಅಭಿಷೇಕ್ ಶರ್ಮ ಟಿ20 ಕ್ರಿಕೆಟ್ನಲ್ಲಿ ಅತಿ ಕಡಿಮೆ ಇನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ಭಾರತೀಯ ಎನಿಸಿದರು. ದೀಪಕ್ ಹೂಡಾ 3ನೇ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದು ಹಿಂದಿನ ಕನಿಷ್ಠ.
10: ಅಭಿಷೇಕ್ ಶರ್ಮ ಟಿ20ಯಲ್ಲಿ ಭಾರತದ 10ನೇ ಶತಕವೀರ ಎನಿಸಿದರು. ಜಿಂಬಾಬ್ವೆ ವಿರುದ್ಧ ಟಿ20ಯಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರಾಗಿದ್ದಾರೆ.