ಕ್ರೀಡೆ

ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಗೆ ಅಭಿಷೇಕ್ ಶರ್ಮ​, ನಿತೀಶ್​ ರೆಡ್ಡಿ, ಹರ್ಷಿತ್​ ರಾಣಾ ಸೇರ್ಪಡೆ?

ನವದೆಹಲಿ: ಟೀಮ್​ ಇಂಡಿಯಾದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ ಎಂದು ವರದಿಯಾಗಿದ್ದು, ಇದರಲ್ಲಿ ಹೆಚ್ಚಿನ ಅಚ್ಚರಿಗಳು ಇರುವುದಿಲ್ಲ ಎನ್ನಲಾಗಿದೆ. ಸ್ಫೋಟಕ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ, ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಮತ್ತು ವೇಗಿ ಹರ್ಷಿತ್​ ರಾಣಾ ಗುತ್ತಿಗೆ ಪಟ್ಟಿಗೆ ಹೊಸ ಸೇರ್ಪಡೆಯಾಗಲಿದ್ದಾರೆ. ಇವರು ತಲಾ 1 ಕೋಟಿ ರೂ. ವಾರ್ಷಿಕ ವೇತನದ ಸಿ ಶ್ರೇಣಿಗೆ ಸೇರಲಿದ್ದಾರೆ ಎನ್ನಲಾಗಿದೆ.

ಬಿಸಿಸಿಐ ಮಾನದಂಡದ ಅನ್ವಯ ವಾರ್ಷಿಕ ಗುತ್ತಿಗೆ ಪಡೆಯಲು ನಿಶ್ಚಿತ ಅವಧಿಯಲ್ಲಿ 3 ಟೆಸ್ಟ್​ ಅಥವಾ 8 ಏಕದಿನ ಅಥವಾ 10 ಟಿ20 ಪಂದ್ಯ ಆಡಿರಬೇಕು. ಹರ್ಷಿತ್​ ಇದುವರೆಗೆ 2 ಟೆಸ್ಟ್​, 5 ಏಕದಿನ, 1 ಟಿ20 ಪಂದ್ಯ ಆಡಿದ್ದು, ಈ ಮೂರೂ ಮಾನದಂಡ ತಲುಪಿಲ್ಲ. ಆದರೂ ಅವರಿಗೆ ವಿಶೇಷ ವಿನಾಯಿತಿ ನೀಡಲು ಬಿಸಿಸಿಐ ಬಯಸಿದೆ ಎನ್ನಲಾಗಿದೆ.

17 ಟಿ20 ಪಂದ್ಯ ಆಡಿರುವ ಅಭಿಷೇಕ್​ ಮತ್ತು 5 ಟೆಸ್ಟ್​ ಆಡಿರುವ ನಿತೀಶ್​ ರೆಡ್ಡಿ ಈ ಮಾನದಂಡದಡಿಯಲ್ಲೇ ಬರುತ್ತಾರೆ. ಸ್ಪಿನ್ನರ್​ ವರುಣ್​ ಚಕ್ರವರ್ತಿ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಗುತ್ತಿಗೆಗೆ ಮರುಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.