ಕ್ರೀಡೆ

ಲಂಕಾ ಪ್ರವಾಸಕ್ಕೆ ಅಭಿಷೇಕ್, ಡೋಶೆಟ್ ಭಾರತ ತಂಡದ ಸಹಾಯಕ ಕೋಚ್?: ಮಾರ್ಕೆಲ್ ಬೌಲಿಂಗ್ ಕೋಚ್ !

ನವದೆಹಲಿ: ಭಾರತ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಅವರ ಐದು ಬೇಡಿಕೆಗಳಲ್ಲಿ ಟಿ20 ತಂಡಕ್ಕೆ ನೂತನ ನಾಯಕ, ಉಪನಾಯಕ ಹೆಸರಿಸಿರುವ ಬಿಸಿಸಿಐ, ತರಬೇತಿ ಬಳಗಕ್ಕೂ ಮಾಜಿ ಕ್ರಿಕೆಟಿಗರಾದ ಮುಂಬೈನ ಅಭಿಷೇಕ್ ನಾಯರ್ ಹಾಗೂ ನೆದರ್ಲೆಂಡ್‌ನ ರ‌್ಯಾನ್ ಟೆನ್ ಡೋಶೆಟ್ ಅವರನ್ನು ಸಹಾಯಕ ಕೋಚ್‌ಗಳಾಗಿ ನೇಮಿಸಲು ಒಪ್ಪಿಗೆ ನೀಡಿದೆ ಎನ್ನಲಾಗಿದೆ. ನೂತನ ಬೌಲಿಂಗ್ ಕೋಚ್ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

ಮುಂಬರುವ ಶ್ರೀಲಂಕಾ ಪ್ರವಾಸದಿಂದ ಗಂಭೀರ್ ತರಬೇತಿ ಬಳಗ ಸೇರಲು ಮಾಜಿ ಆಲ್ರೌಂಡರ್ ಅಭಿಷೇಕ್ ನಾಯರ್ ಹಾಗೂ ರ‌್ಯಾನ್ ಟೆನ್ ಡೋಶೆಟ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಮಾಜಿ ಕೋಚ್ ರಾಹುಲ್ ದ್ರಾವಿಡ್ ತರಬೇತಿ ಬಳಗದಲ್ಲಿದ್ದ ಟಿ.ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ದಿಲೀಪ್ ಪರಿಣಾಮಕಾರಿ ಫೀಲ್ಡಿಂಗ್ ತರಬೇತುದಾರರಾಗಿ ಮಾತ್ರವಲ್ಲದೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರ ನಡುವೆ ಉತ್ತಮ ವಾತಾವರಣವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜತೆಗೆ ಉತ್ತಮ ಕ್ಷೇತ್ರರಕ್ಷಣೆಗೆ ಆಟಗಾರರಿಗೆ ಪದಕ ನೀಡುವ ವಿಭಿನ್ನ ಯೋಜನೆಯನ್ನು ಕಾರ್ಯಗತಗೊಳಿಸಿ ಯಶಸ್ಸು ಕಂಡಿದ್ದರು.

ಅಭಿಷೇಕ್, ಡೋಶೆಟ್ ಇಬ್ಬರೂ ಐಪಿಎಲ್ನಲ್ಲಿ ಗಂಭೀರ್ ಜತೆಯಾಗಿ ಕೆಕೆಆರ್ ಪರ ಕಾರ್ಯನಿರ್ವಹಿಸಿದ್ದರು. ತರಬೇತಿ ಬಳಗಕ್ಕೆ ಇವರಿಬ್ಬರ ಹೆಸರನ್ನು ಗಂಭೀರ್ ಖುದ್ದು ಬಿಸಿಸಿಐಗೆ ಶಿಾರಸು ಮಾಡಿದ್ದರು. ದಿಲೀಪ್ ಮತ್ತು ನಾಯರ್ ಅವರು ಸೋಮವಾರ ಭಾರತ ತಂಡದೊಂದಿಗೆ ಕೊಲಂಬೊಗೆ ಪ್ರಯಾಣಿಸಲಿದ್ದು, ಪ್ರಸ್ತುತ ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಎಲ್‌ಎ ನೈಟ್ ರೈಡರ್ಸ್‌ ತಂಡದ ತರಬೇತಿ ಬಖಳಗದಲ್ಲಿರುವ ಡೋಶೆಟ್ ನೇರವಾಗಿ ಕೊಲಂಬೊದಲ್ಲಿ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಗಳಿವೆ.

ಮಾರ್ಕೆಲ್ ಬೌಲಿಂಗ್ ಕೋಚ್ ?

ಕನ್ನಡಿಗ ವಿನಯ್ ಕುಮಾರ್, ಮಾರ್ನ್ ಮಾರ್ಕೆಲ್ ಅವರನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ನೇಮಿಸಲು ಗಂಭೀರ್ ಶಿಾರಸು ಮಾಡಿದ ಆಟಗಾರರಾಗಿದ್ದಾರೆ. ಆದರೆ ವಿನಯ್ ಕುಮಾರ್ ಅವರ ನೇಮಕಕ್ಕೆ ಬಿಸಿಸಿಐ ಹಿಂದೇಟು ಹಾಕಿದ್ದು, ತಂಡದ ಬೌಲಿಂಗ್ ಕೋಚ್ ಆಗುವ ಬಗ್ಗೆ ದ.ಆಫ್ರಿಕಾದ ವೇಗಿ ಮೊರ್ಕೆಲ್ ಜತೆಗೆ ಬಿಸಿಸಿಐ ಚರ್ಚೆ ನಡೆಸಿದೆ ಎನ್ನಲಾಗಿದೆ. ಗಂಭೀರ್ ಹಾಗೂ ಮಾರ್ಕೆಲ್ ಈ ಹಿಂದೆ ಲಖನೌ ಸೂಪರ್ ಜೈಂಟ್ಸ್ ಪರ ಮೆಂಟರ್ ಮತ್ತು ಬೌಲಿಂಗ್ ಕೋಚ್ ಆಗಿ ಒಟ್ಟಾಗಿ ಕಾರ್ಯನಿರ್ವಹಿಸಿದ್ದಾರೆ. ಮಾರ್ಕೆಲ್ ಟೀಮ್ ಇಂಡಿಯಾ ಬೌಲಿಂಗ್ ಆಗಿ ನೇಮಕಗೊಂಡರೆ 2014ರ ಬಳಿಕ ಈ ಹುದ್ದೆ ನಿರ್ವಹಿಸಲಿರುವ ಮೊದಲ ವಿದೇಶಿ ಆಟಗಾರ ಎನಿಸಲಿದ್ದಾರೆ. ಆಸ್ಟ್ರೇಲಿಯಾದ ಜೋ ಡಾವ್ಸ್ ಕೊನೆಯದಾಗಿ ಈ ಹುದ್ದೆ ನಿರ್ವಹಿಸಿದ್ದ ವಿದೇಶಿ ಆಟಗಾರ.