ಕ್ರೀಡೆ

ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಎಬಿಡಿ ವಿಶೇಷ ಸಂದೇಶ

ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆನಿಸಿದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ಶುಕ್ರವಾರ ವಿದಾಯ ಪ್ರಕಟಿಸಿದರು. ಇದರೊಂದಿಗೆ ‘ಮಿಸ್ಟರ್ 360 ಡಿಗ್ರಿ’ ಖ್ಯಾತಿಯ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಟವನ್ನೂ ನಿಲ್ಲಿಸಿದ್ದಾರೆ. ಮೊದಲ ಆವೃತ್ತಿಯಿಂದಲೇ ಐಪಿಎಲ್‌ನಲ್ಲಿ ಆಡುತ್ತಿದ್ದ ಎಬಿಡಿ, 2011ರಲ್ಲಿ ಆರ್‌ಸಿಬಿ ತಂಡ ಸೇರಿದ ಬಳಿಕ ಕರ್ನಾಟಕದ ಜನತೆಯಿಂದ ವಿಶೇಷ ಪ್ರೀತಿಗೆ ಪಾತ್ರರಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಜತೆಗೆ ಹಲವಾರು ಅಮೋಘ ಜತೆಯಾಟಗಳನ್ನು ಆಡಿರುವ ಎಬಿಡಿಗೆ ಬೆಂಗಳೂರು 2ನೇ ತವರೂರು ಎನಿಸಿದೆ. ಹೀಗಾಗಿ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳನ್ನು ಅವರು ವಿಶೇಷವಾಗಿ ನೆನಪಿಸಿಕೊಂಡಿದ್ದಾರೆ.

‘11 ವರ್ಷಗಳ ಕಾಲ ಆರ್‌ಸಿಬಿ ತಂಡದ ಪರ ಆಡಿ ಅಪಾರ ಯಶಸ್ಸು, ಪ್ರೀತಿ ಪಡೆದಿರುವೆ. ಆರ್‌ಸಿಬಿ ಜತೆಗಿನ ನನ್ನ ಒಡನಾಟ ಮುಂದೆಯೂ ಮುಂದುವರಿಯಲಿದೆ. ಆರ್‌ಸಿಬಿ ತಂಡದ ಎಲ್ಲ ಸದಸ್ಯರೂ ನನಗೆ ಕುಟುಂಬ ಇದ್ದಂತೆ. ನಾನೀಗ ಅರ್ಧ ಭಾರತೀಯನಾಗಿರುವೆ ಮತ್ತು ಆ ಬಗ್ಗೆ ಹೆಮ್ಮೆ ಇದೆ’ ಎಂದಿದ್ದಾರೆ. ಕೊಹ್ಲಿ ಬಳಿಕ ಆರ್‌ಸಿಬಿ ಪರ 2ನೇ ಅತ್ಯಧಿಕ ರನ್ ಗಳಿಸಿದ ಹೆಗ್ಗಳಿಕೆ ಅವರದಾಗಿದೆ.

‘ಆರ್‌ಸಿಬಿ ಮ್ಯಾನೇಜ್‌ಮೆಂಟ್, ನನ್ನ ಗೆಳೆಯ ವಿರಾಟ್ ಕೊಹ್ಲಿ, ಸಹ-ಆಟಗಾರರು, ಕೋಚ್‌ಗಳು, ತರಬೇತಿ ಸಿಬ್ಬಂದಿ, ಅಭಿಮಾನಿಗಳು ಮತ್ತು ಸಂಪೂರ್ಣ ಆರ್‌ಸಿಬಿ ಕುಟುಂಬಕ್ಕೆ ನಾನು ಧನ್ಯವಾದ ಹೇಳುವೆ. ಇಷ್ಟು ವರ್ಷಗಳ ಕಾಲ ನನ್ನ ಮೇಲಿಟ್ಟ ನಂಬಿಕೆ ಮತ್ತು ನೀಡಿರುವ ಬೆಂಬಲಕ್ಕೆ ಋಣಿಯಾಗಿರುವೆ. ಆರ್‌ಸಿಬಿ ಜತೆಗಿನ ನನ್ನ ಜರ್ನಿ ಸ್ಮರಣೀಯವಾದುದು. ಜೀವನವಿಡೀ ಸಂಭ್ರಮಿಸಬಹುದಾದ ಸ್ಮರಣೀಯ ನೆನಪುಗಳನ್ನು ನೀಡಿದ್ದೀರಿ. ಆರ್‌ಸಿಬಿ ತಂಡಕ್ಕೆ ಮುಂದೆಯೂ ನನ್ನ ಬೆಂಬಲವಿರಲಿದೆ. ನಾನೆಂದಿಗೂ ಆರ್‌ಸಿಬಿಯನ್ ಆಗಿರುವೆ’ ಎಂದಿದ್ದಾರೆ.

ಆರ್‌ಸಿಬಿ ಪರ ಎಬಿಡಿ ಸಾಧನೆ

ಪಂದ್ಯ: 156

ಇನಿಂಗ್ಸ್: 144

ರನ್: 4,491

ಗರಿಷ್ಠ: 133*

ಸರಾಸರಿ: 41.20

100/50: 2/37

ಸಿಕ್ಸರ್: 238

ಸ್ಟ್ರೈಕ್‌ರೇಟ್: 158.63