ಕ್ರೀಡೆ

ಜಿಂಬಾಬ್ವೆಗೆ ತೆರಳಿದ ಯುವ ಟೀಮ್ ಇಂಡಿಯಾ: ಮೊದಲೆರಡು ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ

ಮುಂಬೈ: ಜುಲೈ 6 ರಂದು ಆರಂಭಗೊಳ್ಳಲಿರುವ ಆತಿಥೇಯ ಜಿಂಬಾಬ್ವೆ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಗೆ ಎನ್‌ಸಿಎ ಮುಖ್ಯಸ್ಥ ಹಾಗೂ ಹಂಗಾಮಿ ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಯುವ ಟೀಮ್ ಇಂಡಿಯಾ ಹರಾರೆಗೆ ಮಂಗಳವಾರ ಪ್ರಯಾಣ ಬೆಳೆಸಿದೆ. ಆರಂಭಿಕ ಶುಭಮಾನ್ ಗಿಲ್ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್ ಚಾಂಪಿಯನ್ ತಂಡದ ಎಲ್ಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಋತುರಾಜ್ ಗಾಯಕ್ವಾಡ್ ಜತೆಯಾಗಿ ಐಪಿಎಲ್‌ನಲ್ಲಿ ಮಿಂಚಿದ ಯುವ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮ, ತುಷಾರ್ ದೇಶಪಾಂಡೆ, ಧ್ರುವ ಜುರೆಲ್ ಮೊದಲ ಬಾರಿಗೆ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದು, ಈ ಎಲ್ಲ ಆಟಗಾರರು ವಿಮಾನದಲ್ಲಿ ಪ್ರಯಾಣಿಸುತ್ತಿರುವ ಚಿತ್ರಗಳನ್ನು ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.

ಅಮೆರಿಕ ಚರಣದ ಟಿ20 ವಿಶ್ವಕಪ್‌ನ ಮೀಸಲು ಬಳಗದಲ್ಲಿದ್ದ ನಾಯಕ ಗಿಲ್ ಸದ್ಯ ಅಮೆರಿಕದಲ್ಲಿದ್ದು, ಅಲ್ಲಿಂದ ನೇರವಾಗಿ ಜಿಂಬಾಬ್ವೆಗೆ ತೆರಳಲಿದ್ದಾರೆ ಎನ್ನಲಾಗಿದೆ. ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿಯೂ ಮುಕ್ತಾಯಗೊಂಡಿರುವುದರಿಂದ, ಜಿಂಬಾಬ್ವೆ ಪ್ರವಾಸದಲ್ಲಿ ಟೀಮ್ ಇಂಡಿಯಾದ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ.

ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರ ನಿವೃತ್ತಿಯ ಬಳಿಕ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯೂ ಯುವ ಆಟಗಾರರಿಗೆ ಭವಿಷ್ಯದ ಟೀಮ್‌ಇಂಡಿಯಾದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಉತ್ತಮ ಅವಕಾಶ ಎನಿಸಿದೆ.

ಆಟಗಾರರ ಬದಲಾವಣೆ:ಜಿಂಬಾಬ್ವೆ ಪ್ರವಾಸಕ್ಕೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಹಾಗೂ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಮತ್ತು ಶಿವಂ ದುಬೆ ಬಾರ್ಬಡೋಸ್‌ನಿಂದ ತವರಿಗೆ ಆಗಮಿಸುವುದು ವಿಳಂಬವಾಗಿರುವುದರಿಂದ ಮೂವರು ಆಟಗಾರರಿಗೆ ಸರಣಿಯ ಮೊದಲೆರಡು ಪಂದ್ಯಗಳಿಂದ ವಿಶ್ರಾಂತಿ ನೀಡಿದ್ದು, ಅವರ ಬದಲಿಗೆ ಸಾಯಿ ಸುದುರ್ಶನ್, ಜಿತೇಶ್ ಶರ್ಮ ಹಾಗೂ ಹರ್ಷಿತ್ ರಾಣಾ ಆಟಗಾರರನ್ನು ಬಿಸಿಸಿಐ ಹೆಸರಿಸಿದೆ.

ಐದು ಪಂದ್ಯಗಳ ಟಿ20 ಸರಣಿ ಜುಲೈ 6ರಿಂದ ಆರಂಭವಾಗಲಿದ್ದು, ಜುಲೈ 7, 10, 13, 14ರಂದು ಪಂದ್ಯಗಳು ನಡೆಯಲಿವೆ. ಎಲ್ಲ ಪಂದ್ಯಗಳು ಹರಾರೆಯಲ್ಲಿ ನಿಗದಿಯಾಗಿವೆ.

ಭಾರತ ತಂಡ: ಶುಭಮಾನ್ ಗಿಲ್ (ನಾಯಕ), ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಅಭಿಷೇಕ್ ಶರ್ಮ, ರಿಂಕು ಸಿಂಗ್, ಜಿತೇಶ್ ಶರ್ಮ (ವಿ.ಕೀ), ಧ್ರುವ ಜುರೆಲ್ (ವಿ.ಕೀ),ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಆವೇಶ್ ಖಾನ್, ಖಲೀಲ್ ಅಹ್ಮದ್,ಹರ್ಷಿತ್ ರಾಣಾ, ಮುಕೇಶ್ ಕುಮಾರ್, ತುಷಾರ್ ದೇಶಪಾಂಡೆ.