ಬೆಂಗಳೂರು: ಯುವ ಆಲ್ರೌಂಡರ್‌ಎಲ್. ಮನ್ವಂತ್ ಕುಮಾರ್ (28 ರನ್,15 ಎಸೆತ, 2 ಬೌಂಡರಿ, 2 ಸಿಕ್ಸರ್ ಹಾಗೂ 33ಕ್ಕೆ 4 ವಿಕೆಟ್) ಭರ್ಜರಿ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಎದುರು ‘ತ್ರಿವಳಿ ಸೂಪರ್ ಓವರ್’ನಲ್ಲಿ ರೋಚಕ ಗೆಲುವು ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ನಾಯಕ ಮಯಾಂಕ್ ಅಗರ್ವಾಲ್ (54 ರನ್, 34 ಎಸೆತ, 9 ಬೌಂಡರಿ) ಮತ್ತು ವೇಗಿ ಲವೀಶ್ ಕೌಶಲ್ (17ಕ್ಕೆ 5) ಅಮೋಘ ನಿರ್ವಹಣೆ ನಡುವೆಯೂ ಬೆಂಗಳೂರು ಬ್ಲಾಸ್ಟರ್ಸ್ ತಂಡ ವೀರೋಚಿತ ಸೋಲು ಅನುಭವಿಸಿತು.
ಉದ್ಯಾನನಗರಿಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರೋಚಕ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಹುಬ್ಬಳ್ಳಿ, ಲವೀಶ್ ಕೌಶಲ್ ದಾಳಿಗೆ ತತ್ತರಿಸಿ ಭರ್ತಿ 20 ಓವರ್‌ಗಳಲ್ಲಿ 164 ರನ್‌ಗಳಿಗೆ ಆಲೌಟ್ ಆಯಿತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಬೆಂಗಳೂರಿಗೆ ಮಯಾಂಕ್ ಸಮಯೋಚಿತ ಬ್ಯಾಟಿಂಗ್ ಚೇಸಿಂಗ್‌ಗೆ ಬಲ ನೀಡಿದ ಹೊರತಾಗಿಯೂ ಭರ್ತಿ 20 ಓವರ್‌ಗಳಲ್ಲಿ 164 ರನ್‌ಗಳಿಗೆ ಸರ್ವಪತನ ಕಂಡಿತು. ಎಲ್‌ಆರ್ ಕುಮಾರ್ ಎಸೆದ ಅಂತಿಮ ಓವರ್‌ನಲ್ಲಿ 6 ರನ್ ಬೇಕಿದ್ದಾಗ ಮೊದಲ ಎಸೆತದಲ್ಲಿ ಬೌಂಡರಿಗಳಿಸಿದ ಜಿ.ನವೀನ್ (11) ಮರುಎಸೆತದಲ್ಲಿ ಔಟಾದರು. 3,4ನೇ ಎಸೆತದಲ್ಲಿ ಒಂದೂ ರನ್ ಪಡೆಯದ ಲವೀಶ್ ಕೌಶಲ್ (0) 5ನೇ ಎಸೆತದಲ್ಲಿ 1 ರನ್‌ಗಳಿಸಿ ರಿಟೈಡ್ ಹರ್ಟ್ ಆದರು. ಅಂತಿಮ ಎಸೆತದಲ್ಲಿ 1 ರನ್ ಅಗತ್ಯವಿದ್ದಾಗ ಕ್ರಾಂತಿ ಕುಮಾರ್ ಔಟಾದರು. ಇದರೊಂದಿಗೆ ಬೆಂಗಳೂರು ರೋಚಕ ಟೈ ಸಾಧಿಸಿದರೂ ಸೂಪರ್ ಓವರ್‌ನಲ್ಲಿ ಪಂದ್ಯ ಕೈಚೆಲ್ಲಿತು.
ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 164 (ತಿಪ್ಪಾರೆಡ್ಡಿ 7, ಮೊಹಮದ್ ತಾಹ 31, ಶ್ರೀಜಿತ್ 9, ಮನೀಷ್ ಪಾಂಡೆ 33, ಅನೀಶ್ವರ್ 30, ಮನ್ವಂತ್ 28, ಲವೀಶ್ ಕೌಶಲ್ 17ಕ್ಕೆ 5, ಕ್ರಾಂತಿ 33ಕ್ಕೆ 2). ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 164 (ಚೇತನ್ 0, ಮಯಾಂಕ್ 54, ನಿರಂಜನ್ 19, ಎಸ್.ರಕ್ಷಿತ್ 11, ಸೂರಜ್ 26,ಅನಿರುದ್ಧ 17, ಜಿ.ನವೀನ್ 23, ಮನ್ವಂತ್ 33ಕ್ಕೆ 4, ವಿದ್ವತ್ 35ಕ್ಕೆ 2).
ಪಂದ್ಯಶ್ರೇಷ್ಠ: ಎಲ್.ಮನ್ವಂತ್ ಕುಮಾರ್.
ತ್ರಿವಳಿ ಸೂಪರ್ ಥ್ರಿಲ್ಲರ್: ಪಂದ್ಯದ ವಿಜೇತರ ನಿರ್ಣಯಕ್ಕೆ ನಡೆದ ಮೊದಲ ಸೂಪರ್ ಓವರ್‌ನಲ್ಲಿ ಬೆಂಗಳೂರು 1 ವಿಕೆಟ್‌ಗೆ 10 ರನ್‌ಗಳಿಸಿತು. ಪ್ರತಿಯಾಗಿ ಮೊದಲ ಮೂರು ಎಸೆತದಲ್ಲಿ ಸಿಂಗಲ್ಸ್ ಕಸಿದ ನಾಯಕ ಮನೀಷ್ ಪಾಂಡೆ (8*) 4ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರೂ, ಅಂತಿಮವಾಗಿ ಹುಬ್ಬಳ್ಳಿ ವಿಕೆಟ್ ನಷ್ಟವಿಲ್ಲದೆ 10 ರನ್‌ಗಳಿಸಿ ಸಮಬಲ ಸಾಧಿಸಿತು. 2ನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ವಿಕೆಟ್ ನಷ್ಟವಿಲ್ಲದೆ 8 ರನ್‌ಗಳಿಸಿತು. ಇದಕ್ಕೆ ಪ್ರತಿಯಾಗಿ ಬೆಂಗಳೂರು ತಂಡ 1 ವಿಕೆಟ್‌ಗೆ 8 ರನ್ ಕಲೆಹಾಕಿ ಮತ್ತೆ ಸಮಬಲ ಸಾಧಿಸಿತು. ಮೂರನೇ ಸೂಪರ್ ಓವರ್‌ನಲ್ಲಿ ಬೆಂಗಳೂರು ನೀಡಿದ 13 ರನ್‌ಗಳ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ಟೈಗರ್ಸ್ ಪರ, ಕೊನೇ ಎಸೆತದಲ್ಲಿ ಬೌಂಡರಿ ಸಿಡಿಸಿ ಗೆಲ್ಲಿಸಿದ ಮನ್ವಂತ್ ಕುಮಾರ್ ಗೆಲುವಿನ ಹಿರೋ ಎನಿಸಿದರು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೂರು ಸೂಪರ್ ಓವರ್ ನಡೆದ ಮೊದಲ ದೃಷ್ಟಾಂತ ಇದಾಗಿದೆ. ಜನವರಿಯಲ್ಲಿ ಬೆಂಗಳೂರಿನಲ್ಲಿಯೇ ಭಾರತ ಹಾಗೂ ಅಪ್ಘಾನಿಸ್ತಾನ ನಡುವೆ ಅವಳಿ ಸೂಪರ್ ಪಂದ್ಯ ನಡೆದಿತ್ತು.