ಪ್ರಶಸ್ತಿಯೊಂದಿಗೆ ವಿಜೇತರು  ಏಜೆನ್ಸಿ
ಕ್ರೀಡೆ

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವಾಗೆ ಭರ್ಜರಿ ಗೆಲುವು!

ಜೆಕೆ ಟೈರ್ ಸಹಯೋಗದಲ್ಲಿ ನಡೆದ ಇಂಡಿಯನ್ ರೇಸಿಂಗ್ ಫೆಸ್ಟಿವಲ್, ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ (BIC) ರೋಚಕ ರೇಸಿಂಗ್ ವಾರಾಂತ್ಯವನ್ನು ಕಂಡಿತು. ಭಾನುವಾರದ ರೇಸ್‌ಗಳನ್ನು 20,000ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದರು

ಬೆಂಗಳೂರು: ಜೆಕೆ ಟೈರ್ ಸಹಯೋಗದಲ್ಲಿ ನಡೆದ ಇಂಡಿಯನ್ ರೇಸಿಂಗ್ ಫೆಸ್ಟಿವಲ್, ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ (BIC) ರೋಚಕ ರೇಸಿಂಗ್ ವಾರಾಂತ್ಯವನ್ನು ಕಂಡಿತು. ಭಾನುವಾರದ ರೇಸ್‌ಗಳನ್ನು 20,000ಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದರು. ಇದೇ ವೇಳೆ ಫೆಸ್ಟಿವಲ್ ತನ್ನ 100ನೇ ರೇಸ್ ಅನ್ನು ಪೂರ್ಣಗೊಳಿಸಿತು. ಈ ಐತಿಹಾಸಿಕ IRL ರೇಸ್‌ನಲ್ಲಿ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ರುಹಾನ್ ಆಳ್ವ ಗೆಲುವು ಸಾಧಿಸಿದರು. F4 ಇಂಡಿಯನ್ ಚಾಂಪಿಯನ್‌ಶಿಪ್‌ನಲ್ಲಿ ಸ್ಪೀಡ್ ಡೆಮನ್ಸ್ ದೆಹಲಿ ತಂಡದ ಕೃಷಯ್ ಗುಟ್ಟೆ ತಮ್ಮ ಚೊಚ್ಚಲ ಗೆಲುವು ದಾಖಲಿಸಿದರು.

ಶನಿವಾರ ನಡೆದ IRL ರೇಸ್‌ನಲ್ಲಿ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್ ತಂಡದ ಅಮನ್ ನಾಗ್‌ದೇವ್ 12.302 ಸೆಕೆಂಡ್‌ಗಳ ಅಂತರದಿಂದ ಗೆದ್ದರು. ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡದ ಎಮಿಲ್ ಹೆಲ್ದರ್‌ಯಾರ್ಡ್ ಮತ್ತು ಜೆಮ್ಮಾ ಮೂರ್ ಎರಡು ಮತ್ತು ಮೂರನೇ ಸ್ಥಾನ ಪಡೆದರು. ನಾಗ್‌ದೇವ್ 1:57.791 ಸಮಯದಲ್ಲಿ ವೇಗದ ಲ್ಯಾಪ್ ದಾಖಲಿಸಿದರು. ಮೊದಲ F4 ರೇಸ್‌ನಲ್ಲಿ ನ್ಟಿಯಿಸೊ ಮಬುಂಡಾ, ಆರನ್ ಮೆಹ್ತಾ ಅವರನ್ನು 0.827 ಸೆಕೆಂಡ್‌ಗಳಿಂದ ಹಿಂದಿಕ್ಕಿ ಗೆದ್ದರು. ಎಂಜೊ ರುಜುಗಿರೊ ಮೂರನೇ ಸ್ಥಾನ ಪಡೆದರೆ, ಲುವಿವೆ ಸಂಬುದುಲಾ ನಾಲ್ಕನೇ ಸ್ಥಾನ ಪಡೆದರು.

ಭಾನುವಾರದ ಮೊದಲ F4 ರೇಸ್‌ನಲ್ಲಿ ಐದನೇ ಸ್ಥಾನದಿಂದ ಆರಂಭಿಸಿದ ಮೆಹ್ತಾ, 6.751 ಸೆಕೆಂಡ್‌ಗಳ ಮುನ್ನಡೆಯೊಂದಿಗೆ ಗೆದ್ದರು. ಮಬುಂಡಾ ಎರಡನೇ ಮತ್ತು ಅಹಮದಾಬಾದ್ ಅಪೆಕ್ಸ್ ರೇಸರ್ಸ್ ತಂಡದ ಅರ್ಜುನ್ ಛೇಡಾ ಮೂರನೇ ಸ್ಥಾನ ಪಡೆದರು. ಅಂತಿಮ F4 ರೇಸ್‌ನಲ್ಲಿ ಮಬುಂಡಾ ಮೊದಲು ಗುರಿ ತಲುಪಿದರೂ, ಫಾಲ್ಸ್ ಸ್ಟಾರ್ಟ್‌ಗಾಗಿ ವಿಧಿಸಿದ 10 ಸೆಕೆಂಡ್ ಪೆನಾಲ್ಟಿಯಿಂದಾಗಿ ಗುಟ್ಟೆಗೆ ಗೆಲುವು ಲಭಿಸಿತು. ಮಬುಂಡಾ ಎರಡನೇ, ಛೇಡಾ ಮೂರನೇ ಸ್ಥಾನ ಪಡೆದರೆ, ಸಂಬುದುಲಾ ಮತ್ತೊಂದು 10 ಸೆಕೆಂಡ್ ಪೆನಾಲ್ಟಿಯಿಂದಾಗಿ ಐದನೇ ಸ್ಥಾನಕ್ಕೆ ಇಳಿದರು.

100ನೇ IRL ರೇಸ್‌ನಲ್ಲಿ ರುಹಾನ್ ಆಳ್ವ ಗೆಲುವು ಸಾಧಿಸಿದರೆ, ಗೋವಾ ಏಸಸ್ ಜೆಎ ರೇಸಿಂಗ್ ತಂಡದ ರೌಲ್ ಹೈಮನ್ ಎರಡನೇ ಮತ್ತು ಸ್ಪೀಡ್ ಡೆಮನ್ಸ್ ದೆಹಲಿ ತಂಡದ ದಿವ್ಯ್ ನಂದನ್ ಮೂರನೇ ಸ್ಥಾನ ಪಡೆದರು. ರೇಸ್‌ನ ಕೊನೆಯ ಹಂತದಲ್ಲಿ ಸೇಫ್ಟಿ ಕಾರ್ ಪ್ರವೇಶಿಸಿದ ಕಾರಣ ಸ್ಪರ್ಧೆಯನ್ನು ಮೊದಲೇ ಮುಗಿಸಲಾಯಿತು.

ವಾರಾಂತ್ಯದಲ್ಲಿ ಭಾರತದ ಖ್ಯಾತ ಡ್ರಿಫ್ಟರ್ ಸನಮ್ ಸೆಖೋನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಗೌರವ್ ಗಿಲ್ ಅವರ ಕಾರು ಸ್ಟಂಟ್ ಹಾಗೂ ಡ್ರಿಫ್ಟಿಂಗ್ ಪ್ರದರ್ಶನವೂ ಪ್ರೇಕ್ಷಕರನ್ನು ರಂಜಿಸಿತು.

ಈ ವಿಭಾಗದಲ್ಲಿ ಮೆಕೊ ರೇಸಿಂಗ್ ತಂಡದ ಧ್ರುವ್ ಗೋಸ್ವಾಮಿ ಎರಡೂ ರೇಸ್‌ಗಳಲ್ಲಿ ಗೆದ್ದರು. ಮೊದಲ ರೇಸ್‌ನಲ್ಲಿ ಮೀರಾ ಎರ್ಡಾ ಮತ್ತು ಮೊನಿತ್ ಕುಮಾರನ್ ಶ್ರೀನಿವಾಸನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಎರಡನೇ ರೇಸ್‌ನಲ್ಲಿ ಚೆತನ್ ಸುರಿನೇನಿ ಮತ್ತು ಶತವೀರ್ ಶೆಟ್ಟಿ ಕ್ರಮವಾಗಿ 0.471 ಮತ್ತು 0.564 ಸೆಕೆಂಡ್‌ಗಳ ಅಂತರದಲ್ಲಿ ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು. 25 ಚಾಲಕರು ಭಾಗವಹಿಸಿದ್ದ ಈ ವಿಭಾಗದಲ್ಲಿ ಆರ್ಯ ಸಿಂಗ್ 2:25.247 ಸಮಯದೊಂದಿಗೆ ಎರಡನೇ ರೇಸ್‌ನ ವೇಗದ ಲ್ಯಾಪ್ ದಾಖಲಿಸಿದರು.

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಸೀಸನ್ ಫಿನಾಲೆ ಡಿಸೆಂಬರ್ 5 ಮತ್ತು 6ರಂದು ನವಿ ಮುಂಬೈನಲ್ಲಿ ನಡೆಯಲಿದೆ. ಇಂಡಿಯನ್ ರೇಸಿಂಗ್ ಲೀಗ್ ಮತ್ತು F4 ಇಂಡಿಯನ್ ಚಾಂಪಿಯನ್‌ಶಿಪ್‌ನ ರಾತ್ರಿ ರೇಸ್‌ಗಳೊಂದಿಗೆ 2026ರ ಸೀಸನ್ ಮುಕ್ತಾಯಗೊಳ್ಳಲಿದೆ.