ಕ್ರೀಡೆ

ನೆಟ್​ ಬೌಲರ್​ಗಳು ಬೇಕಾಗಿದ್ದಾರೆ! ಭಾರತೀಯರಿಗಾಗಿ ನೆದರ್ಲೆಂಡ್​ ತಂಡದಿಂದ ವಿಶೇಷ ಅವಕಾಶ...

ಆಮ್​ಸ್ಟರ್​ಡ್ಯಾಂ: ಮುಂಬರುವ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ನೆದರ್ಲೆಂಡ್​ ತಂಡಕ್ಕೆ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ. ಇದರಲ್ಲಿ ನೆಟ್​ ಬೌಲರ್​ಗಳಾಗಿ ಕಾಣಿಸಿಕೊಳ್ಳುವ ಮೂಲಕ ತಂಡದ ಅಭ್ಯಾಸಕ್ಕೆ ನೆರವಾಗುವ ಅವಕಾಶವನ್ನು ಭಾರತದ ಬೌಲರ್​ಗಳಿಗೆ ನೆದರ್ಲೆಂಡ್​ ಕ್ರಿಕೆಟ್​ ಮಂಡಳಿ ಕಲ್ಪಿಸಿದೆ. ಇದರನ್ವಯ "ನೆಟ್​ ಬೌಲರ್​ಗಳು ಬೇಕಾಗಿದ್ದಾರೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಕೂಡ ಪ್ರಕಟಿಸಲಾಗಿದೆ.

ಸೆಪ್ಟೆಂಬರ್​ 20ರಿಂದ 24ರವರೆಗೆ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್​ಸಿಎ ಮೈದಾನದಲ್ಲಿ 5 ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಇದರಲ್ಲಿ ಪಾಲ್ಗೊಳ್ಳಲು ಓರ್ವ ಎಡಗೈ ವೇಗಿ, ಓರ್ವ ಬಲಗೈ ವೇಗಿ, ಓರ್ವ ಮಿಸ್ಟರಿ ಸ್ಪಿನ್ನರ್​ ಮತ್ತು ಓರ್ವ ಎಡಗೈ ಸ್ಪಿನ್ನರ್​ ಬೇಕಾಗಿದ್ದಾರೆ ಎಂದು ತಿಳಿಸಲಾಗಿದೆ. ಅಲ್ಲದೆ, ನೆಟ್​ ಬೌಲರ್​ ಆಗಲು ಬಯಸುವ ವೇಗಿಗಳು ಗಂಟೆಗೆ 120 ಕಿಲೋಮೀಟರ್​ ವೇಗದಲ್ಲಿ ಮತ್ತು ಸ್ಪಿನ್ನರ್​ಗಳು ಗಂಟೆಗೆ 80 ಕಿಲೋಮೀಟರ್​ ವೇಗದಲ್ಲಿ ಬೌಲಿಂಗ್​ ಮಾಡುವ ಸಾಮರ್ಥ್ಯ ಹೊಂದಿರಬೇಕೆಂದು ಮಾನದಂಡ ನಿಗದಿಪಡಿಸಲಾಗಿದೆ.

ಆಸಕ್ತರು ತಮ್ಮ ಬೌಲಿಂಗ್​ ವಿಡಿಯೋಗಳನ್ನು ಕಳುಹಿಸುವ ಮೂಲಕ ಅರ್ಜಿ ಸಲ್ಲಸಬಹುದು. ಶಿಬಿರದ ವೇಳೆ ಅವರ ಪ್ರಯಾಣ, ವಸತಿ ಮತ್ತು ಊಟದ ವೆಚ್ಚವನ್ನು ಭರಿಸಲಾಗುವುದು. ಅಭ್ಯರ್ಥಿ 18 ವರ್ಷ ಮೇಲ್ಪಟ್ಟಿರಬೇಕು ಮತ್ತು ಭಾರತೀಯ ನಿವಾಸಿ ಆಗಿರಬೇಕೆಂದು ವಿವರಿಸಲಾಗಿದೆ.