ಕ್ರೖೆಸ್ಟ್ಚರ್ಚ್: ಆತಿಥೇಯ ನ್ಯೂಜಿಲೆಂಡ್ ತಂಡದ ಪ್ರಬಲ ನಿರ್ವಹಣೆ ಎದುರು ಮತ್ತೊಮ್ಮೆ ಮುಗ್ಗರಿಸಿದ ಪ್ರವಾಸಿ ಭಾರತ ತಂಡ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್ಗಳಿಂದ ಶರಣಾಯಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯಲ್ಲಿ ಭಾರತ 0-2ರಿಂದ ಸೋಲು ಕಂಡಿತು. ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಭಾರತಕ್ಕಿದು ಸತತ 2ನೇ ಸೋಲು ಮತ್ತು ಮೊದಲ ಸರಣಿ ಸೋಲಾಗಿದೆ.
ಟಿ20 ಸರಣಿಯಲ್ಲಿ 5-0 ಕ್ಲೀನ್ ಸ್ವೀಪ್ ಸಾಧನೆಯೊಂದಿಗೆ ಕಿವೀಸ್ ಪ್ರವಾಸವನ್ನು ಆರಂಭಿಸಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ 0-3ರಿಂದ ವೈಟ್ವಾಷ್ ಮುಖಭಂಗಕ್ಕೀಡಾಗಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ ಆತಿಥೇಯರ ವೇಗದ ದಾಳಿಗೆ ತತ್ತರಿಸಿದ ವಿರಾಟ್ ಕೊಹ್ಲಿ ಬಳಗ ನ್ಯೂಜಿಲೆಂಡ್ ಪ್ರವಾಸವನ್ನು ನಿರಾಶಾ ದಾಯಕವಾಗಿ ಮುಗಿಸಿದೆ.
ಹ್ಯಾಗ್ಲೆ ಓವಲ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯ ದಲ್ಲಿ ಭಾರತ ನೀಡಿದ 132 ರನ್ ಗೆಲುವಿನ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ, 36 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಕಿವೀಸ್ ವೇಗದ ದಾಳಿಗೆ ತತ್ತರಿಸಿದ ಭಾರತ ತಂಡ ಬೆಳಗ್ಗೆ ಒಂದು ಗಂಟೆಗೂ ಕಡಿಮೆ ಅವಧಿಯಲ್ಲಿ ಕೇವಲ 124 ರನ್ಗಳಿಗೆ 2ನೇ ಇನಿಂಗ್ಸ್ ಮುಗಿಸಿತ್ತು. ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ನಡುವೆಯೂ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಲು ವಿಫಲವಾಯಿತು.
ಆತಿಥೇಯ ವೇಗಿಗಳ ಸವಾಲನ್ನು ದಿಟ್ಟವಾಗಿ ಎದುರಿಸಲು ವಿಫಲವಾದ ವಿಶ್ವ ನಂ. 1 ಟೆಸ್ಟ್ ತಂಡವಾಗಿರುವ ಭಾರತ, ಕೇವಲ ಎರಡೂವರೆ ದಿನಗಳಲ್ಲೇ ಶರಣಾಯಿತು. ವೇಗಿ ಮೊಹಮದ್ ಶಮಿ ಬ್ಯಾಟಿಂಗ್ ವೇಳೆ ಆದ ಗಾಯದಿಂದಾಗಿ ಭೋಜನ ವಿರಾಮದ ಬಳಿಕ ಬೌಲಿಂಗ್ಗೆ ಇಳಿಯಲಿಲ್ಲ. ಕಿವೀಸ್ ಮೊದಲ ಇನಿಂಗ್ಸ್ನಲ್ಲಿ ಬಾಲಂಗೋಚಿಗಳನ್ನು ಬೇಗನೆ ಕಟ್ಟಿ ಹಾಕಿ ಭಾರತ ತಂಡ 60-80 ರನ್ಗಳ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದ್ದರೆ, ಸವಾಲಿನ ಗುರಿ ನೀಡಿ ಪಂದ್ಯ ವಶಪಡಿಸಿಕೊಳ್ಳುವ ಉತ್ತಮ ಅವಕಾಶ ಲಭಿಸುತ್ತಿತ್ತು. ಸೋಲಿನ ನಡುವೆ ಭಾರತ ತಂಡ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದರೆ, ನ್ಯೂಜಿಲೆಂಡ್ ತಂಡ 180 ಅಂಕದೊಂದಿಗೆ 3ನೇ ಸ್ಥಾನಕ್ಕೇರಿದೆ.
ಸೋಮವಾರ ಬೆಳಗ್ಗೆ 6 ವಿಕೆಟ್ಗೆ 90 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಹತ್ತೇ ಓವರ್ಗಳಲ್ಲಿ 34 ರನ್ ಸೇರಿಸಿ ಕೊನೇ 4 ವಿಕೆಟ್ ಕಳೆದುಕೊಂಡಿತು. ಕ್ರಮವಾಗಿ 5 ಮತ್ತು 1 ರನ್ನಿಂದ ದಿನದಾಟ ಆರಂಭಿಸಿದ ಹನುಮ ವಿಹಾರಿ ಮತ್ತು ರಿಷಭ್ ಪಂತ್ ದಿನದ 3ನೇ ಓವರ್ನಲ್ಲೇ ಬೇರ್ಪಟ್ಟರು. ಇದರಿಂದ ಭಾರತ ಕನಿಷ್ಠ ಸ್ಪರ್ಧಾತ್ಮಕ ಮೊತ್ತದ ಸವಾಲನ್ನಾದರೂ ನಿಗದಿಪಡಿಸುವ ಅವಕಾಶವನ್ನು ಕೈಚೆಲ್ಲಿತು. ವಿಹಾರಿ ಮತ್ತು ಪಂತ್ ಇಬ್ಬರೂ ವಿಕೆಟ್ ಕೀಪರ್ ವಾಟ್ಲಿಂಗ್ ಕ್ಯಾಚ್ ನೀಡಿ ಕ್ರಮವಾಗಿ ಸೌಥಿ ಮತ್ತು ಪಂತ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿದರು. ಬಳಿಕ ಆಲ್ರೌಂಡರ್ ರವೀಂದ್ರ ಜಡೇಜಾ (16*) ಕಿವೀಸ್ಗೆ ಸವಾಲಾಗಿ ನಿಲ್ಲುವ ಪ್ರಯತ್ನ ನಡೆಸಿದರೂ, ಬಾಲಂಗೋಚಿಗಳಿಂದ ಅವರಿಗೆ ಸಮರ್ಥ ಬೆಂಬಲ ಸಿಗಲಿಲ್ಲ. ತಂಡದ ಮೊತ್ತವನ್ನು 120ರ ಗಡಿ ದಾಡಿಸಲುವಲ್ಲಿ ಮಾತ್ರ ಜಡೇಜಾ ಯಶ ಕಂಡರು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಔಟಾದಾಗ ಕೊಹ್ಲಿ ಆಕ್ರಮಣಕಾರಿ ವರ್ತನೆಯ ಸಂಭ್ರಮ ತೋರಿದ್ದರು. ಪಂದ್ಯದ ಬಳಿಕ ಕಿವೀಸ್ ಪತ್ರಕರ್ತರು ಈ ಬಗ್ಗೆ ಪ್ರಶ್ನೆ ಕೇಳಿದಾಗ ಕೊಹ್ಲಿ ಗರಂ ಆದರು. ‘ನಿಮಗೆ ಉತ್ತರ ಬೇಕೆಂದಿದ್ದರೆ ಉತ್ತಮ ಪ್ರಶ್ನೆಯೊಂದಿಗೆ ಬರಬೇಕು. ವಿವಾದ ಸೃಷ್ಟಿಸಬೇಕೆಂದಿದ್ದರೆ ಇದು ಸರಿಯಾದ ಸ್ಥಳವಲ್ಲ. ಪಂದ್ಯದ ರೆಫ್ರಿ (ರಂಜನ್ ಮದುಗಲೆ) ನಾನು ಮಾತನಾಡಿದ್ದೇನೆ. ಅವರಿಗೆ ನನ್ನ ವರ್ತನೆಯಿಂದ ಏನೂ ತೊಂದರೆ ಇಲ್ಲ’ ಎಂದು ಕೊಹ್ಲಿ ಕಿಡಿಕಾರಿದರು.
ಸಾಧಾರಣ ಸವಾಲಿಗೆ ಪ್ರತಿಯಾಗಿ ಕಿವೀಸ್ ತಂಡ ದಿಟ್ಟ ಆರಂಭವನ್ನೇ ಪಡೆಯಿತು. ಆರಂಭಿಕರಾದ ಟಾಮ್ ಲಾಥಮ್ (52 ರನ್, 74 ಎಸೆತ, 10 ಬೌಂಡರಿ) ಮತ್ತು ಟಾಮ್ ಬ್ಲಂಡೆಲ್ (55 ರನ್, 113 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕ ಸಿಡಿಸಿದ್ದಲ್ಲದೆ, ಮೊದಲ ವಿಕೆಟ್ಗೆ ಶತಕದ ಜತೆಯಾಟವಾಡುವ ಮೂಲಕ ಭಾರತೀಯರಿಗೆ ತಿರುಗೇಟು ನೀಡಲು ಅವಕಾಶವಿಲ್ಲದಂತೆ ಮಾಡಿದರು. ಲಾಥಮ್ ಅವರನ್ನು ಔಟ್ ಮಾಡುವ ಮೂಲಕ ಉಮೇಶ್ ಯಾದವ್ ಭಾರತಕ್ಕೆ ಮೊದಲ ಯಶ ತಂದುಕೊಟ್ಟರು. ಬೆನ್ನಲ್ಲೇ ನಾಯಕ ಕೇನ್ ವಿಲಿಯಮ್ಸನ್ ಮತ್ತು ಬ್ಲಂಡೆಲ್ ವಿಕೆಟ್ಗಳನ್ನು ಬುಮ್ರಾ ಸತತ 2 ಎಸೆತಗಳಲ್ಲಿ ಕಬಳಿಸಿದರು. ಆದರೆ ಅಷ್ಟರಲ್ಲಾಗಲೇ ಸಾಕಷ್ಟು ತಡವಾಗಿತ್ತು. ಹೀಗಾಗಿ ಕಿವೀಸ್ ಚೇಸಿಂಗ್ಗೆ ಯಾವುದೇ ಅಡ್ಡಿಯಾಗಲಿಲ್ಲ. ಮುರಿಯದ 4ನೇ ವಿಕೆಟ್ಗೆ ರಾಸ್ ಟೇಲರ್ (5*) ಮತ್ತು ಹೆನ್ರಿ ನಿಕೋಲ್ಸ್ (5*) 11 ರನ್ ಜತೆಯಾಟವಾಡಿ ಚಹಾ ವಿರಾಮಕ್ಕೂ ಮೊದಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸೋಲಿಗೆ ಯಾವುದೇ ನೆಪ ಹೇಳುವುದಿಲ್ಲ. ಆದರೆ ಈ ಟೆಸ್ಟ್ ಸರಣಿಯಲ್ಲಿ ನಾವು ಬಯಸಿದ ಆಟ ಆಡಲು ಸಾಧ್ಯವಾಗಲಿಲ್ಲ. ಬೌಲರ್ಗಳಿಗೆ ಆಕ್ರಮಣ ನಡೆಸಲು ಸಾಧ್ಯವಾಗುವಂಥ ಮೊತ್ತವನ್ನು ಬ್ಯಾಟ್ಸ್ಮನ್ಗಳು ಪೇರಿಸಲಿಲ್ಲ. ಟಾಸ್ ಗೆದ್ದಿದ್ದರೆ ನಮಗೆ ಹೆಚ್ಚು ಬಲ ಸಿಗುತ್ತಿತ್ತು. | ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕ
18: ಸರಣಿಯಲ್ಲಿ ಭಾರತ ತಂಡ ಪ್ರತಿ ವಿಕೆಟ್ಗೆ 18.05ರ ಸರಾಸರಿಯಲ್ಲಿ ರನ್ ಗಳಿಸಿತು. ಇದು ಯಾವುದೇ ಸರಣಿಯಲ್ಲಿ ಭಾರತದ 3ನೇ ಕೆಟ್ಟ ನಿರ್ವಹಣೆಯಾಗಿದೆ. 2002-03ರ ಕಿವೀಸ್ ಪ್ರವಾಸದಲ್ಲಿ ಪ್ರತಿ ವಿಕೆಟ್ಗೆ 13.37 ರನ್ ಬಂದಿದ್ದರೆ, 1969-70ರಲ್ಲಿ ಕಿವೀಸ್ ವಿರುದ್ಧದ ತವರಿನ ಸರಣಿಯಲ್ಲಿ ಪ್ರತಿ ವಿಕೆಟ್ಗೆ 16.61 ರನ್ ಗಳಿಸಿತ್ತು.
04: ಸರಣಿಯ 4 ಇನಿಂಗ್ಸ್ಗಳಲ್ಲಿ ಭಾರತೀಯರಿಂದ ಒಟ್ಟಾರೆ 4 ಅರ್ಧಶತಕಗಳಷ್ಟೇ ದಾಖಲಾದವು. ಕೊಹ್ಲಿ ಸರಣಿಯ 4 ಇನಿಂಗ್ಸ್ಗಳಿಂದ ಒಟ್ಟು ಗಳಿಸಿದ್ದು 38 ರನ್ ಮಾತ್ರ.
58: ಸರಣಿಯಲ್ಲಿ ಭಾರತದ ಬ್ಯಾಟ್ಸ್ಮನ್ನ (ಮಯಾಂಕ್) ಗರಿಷ್ಠ ಗಳಿಕೆ 58 ರನ್. 2002-03ರ ಕಿವೀಸ್ ಪ್ರವಾಸದಲ್ಲಿ ಕೊನೆಯದಾಗಿ ಭಾರತದ ಬ್ಯಾಟ್ಸ್ಮನ್ ಶತಕ ಬಾರಿಸಿರಲಿಲ್ಲ.
ಭಾರತ ಪ್ರಥಮ ಇನಿಂಗ್ಸ್: 242
ನ್ಯೂಜಿಲೆಂಡ್ ಪ್ರಥಮ ಇನಿಂಗ್ಸ್: 235
ಭಾರತ ದ್ವಿತೀಯ ಇನಿಂಗ್ಸ್: 46 ಓವರ್ಗಳಲ್ಲಿ 124 (ಭಾನುವಾರ 6 ವಿಕೆಟ್ಗೆ 90)
ಹನುಮ ವಿಹಾರಿ ಸಿ ವಾಟ್ಲಿಂಗ್ ಬಿ ಸೌಥಿ 9
ರಿಷಭ್ ಪಂತ್ ಸಿ ವಾಟ್ಲಿಂಗ್ ಬಿ ಬೌಲ್ಟ್ 4
ರವೀಂದ್ರ ಜಡೇಜಾ ಔಟಾಗದೆ 16
ಮೊಹಮದ್ ಶಮಿ ಸಿ ಬ್ಲಂಡೆಲ್ ಬಿ ಸೌಥಿ 5
ಜಸ್ಪ್ರೀತ್ ಬುಮ್ರಾ ರನೌಟ್ (ಬೌಲ್ಟ್/ಕೇನ್) 4
ಇತರ: 21. ವಿಕೆಟ್ ಪತನ: 6-89, 7-97, 8-97, 9-108. ಬೌಲಿಂಗ್: ಟಿಮ್ ಸೌಥಿ 11-2-36-3, ಟ್ರೆಂಟ್ ಬೌಲ್ಟ್ 14-4-28-4, ಕೈಲ್ ಜೇಮಿಸನ್ 8-4-18-0, ಕಾಲಿನ್ ಡಿ ಗ್ರಾಂಡ್ಹೋಮ್ 5-3-3-1, ನೀಲ್ ವ್ಯಾಗ್ನರ್ 8-1-18-1.
ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 36 ಓವರ್ಗಳಲ್ಲಿ 3 ವಿಕೆಟ್ಗೆ 132 (ಗುರಿ: 132 ರನ್)
ಟಾಮ್ ಲಾಥಮ್ ಸಿ ಪಂತ್ ಬಿ ಉಮೇಶ್ 52
ಟಾಮ್ ಬ್ಲಂಡೆಲ್ ಬಿ ಬುಮ್ರಾ 55
ವಿಲಿಯಮ್ಸನ್ ಸಿ ರಹಾನೆ ಬಿ ಬುಮ್ರಾ 5
ರಾಸ್ ಟೇಲರ್ ಔಟಾಗದೆ 5
ಹೆನ್ರಿ ನಿಕೋಲ್ಸ್ ಔಟಾಗದೆ 5
ಇತರ: 10. ವಿಕೆಟ್ ಪತನ: 1-103, 2-112, 3-121. ಬೌಲಿಂಗ್: ಬುಮ್ರಾ 13-2-39-2, ಉಮೇಶ್ ಯಾದವ್ 14-3-45-1, ಶಮಿ 3-1-11-0, ರವೀಂದ್ರ ಜಡೇಜಾ 5-0-24-0, ಕೊಹ್ಲಿ 1-0-4-0.
ಪಂದ್ಯಶ್ರೇಷ್ಠ: ಕೈಲ್ ಜೇಮಿಸನ್
ಸರಣಿಶ್ರೇಷ್ಠ: ಟಿಮ್ ಸೌಥಿ
ಭಾರತಕ್ಕೆ ಮುಂದಿನ ಸರಣಿ: ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ: 3 ಏಕದಿನ ಪಂದ್ಯ ·ಮೊದಲ ಪಂದ್ಯ: ಮಾರ್ಚ್ 12 ·ಎಲ್ಲಿ: ಧರ್ಮಶಾಲಾ