ಇಸ್ಲಾಮಾಬಾದ್: ಕೋವಿಡ್-19ರ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಎಸೆದ ನೋಬಾಲ್ ಚಿತ್ರವನ್ನು ಪ್ರಕಟಿಸಿದ್ದ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಯ ಇಸ್ಲಾಮಾಬಾದ್ ಯುನೈಟೆಡ್ ತಂಡಕ್ಕೆ ಭಾರತದ ಅಭಿಮಾನಿಗಳು ದಿಟ್ಟ ತಿರುಗೇಟು ನೀಡಿದ್ದಾರೆ.
ಬುಮ್ರಾ ನೋಬಾಲ್ ಎಸೆತದ ಚಿತ್ರವನ್ನು ಟ್ವೀಟಿಸಿದ್ದ ಇಸ್ಲಾಮಾಬಾದ್ ಯುನೈಟೆಡ್, ಪಾಕ್ ಜನತೆ ಮನೆಯಿಂದ ಅನಗತ್ಯವಾಗಿ ಹೊರಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಂದೇಶ ಬರೆದಿತ್ತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಭಾರತದ ಅಭಿಮಾನಿಯೊಬ್ಬರು, 2010ರಲ್ಲಿ ಲಾರ್ಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಎದುರು ಪಾಕ್ ವೇಗಿ ಮೊಹಮದ್ ಆಮಿರ್ ಎಸೆದಿದ್ದ ನೋಬಾಲ್ ಚಿತ್ರವನ್ನು ಪ್ರಕಟಿಸಿದ್ದಾರೆ.
ಇದು ಆಮಿರ್ ಸ್ಪಾಟ್ ಫಿಕ್ಸಿಂಗ್ ಸಲುವಾಗಿ ಎಸೆದಿದ್ದ ನೋಬಾಲ್ ಎಸೆತವಾಗಿತ್ತು. ಇದಕ್ಕಾಗಿ ಆಮಿರ್ 5 ವರ್ಷ ನಿಷೇಧ ಶಿಕ್ಷೆಗೂ ಗುರಿಯಾಗಿದ್ದರು. ಈ ಹಿನ್ನೆಲೆಯಲ್ಲಿ, ‘ಯಾರು ಗೆರೆ ದಾಟದಿರಿ. ಎಲ್ಲರೂ ಮನೆಯೊಳಗೆ ನೆಮ್ಮದಿಯಾಗಿರಿ. ಇಲ್ಲವಾದರೆ 5 ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಟಾಂಗ್ ನೀಡಿದ್ದಾರೆ.