ನ್ಯೂಯಾರ್ಕ್: ಒಲಿಂಪಿಕ್ಸ್‌ನಲ್ಲಿ ಪ್ರತಿ ಕ್ರೀಡಾಪಟುವಿನ ಕನಸು. ಎಂಥಾ ಸವಾಲಿನ ನಡುವೆಯೂ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಆಸೆಯನ್ನು ಕೈಬಿಡುವುದಿಲ್ಲ. ಈ ಮಾತಿಗೆ ಈಗ ಅಮೆರಿಕದ ಅಥ್ಲೀಟ್ ಲಿಂಡ್‌ಸೇ ಪ್ಲಾಚ್ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದ್ದಾರೆ. ಯಾಕೆಂದರೆ ಅವರು 18 ವಾರದ ಗರ್ಭಿಣಿಯಾಗಿರುವ ನಡುವೆಯೂ ಅಮೆರಿಕದ ಒಲಿಂಪಿಕ್ಸ್ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡು ಎಲ್ಲರ ಹುಬ್ಬೇರಿಸಿದ್ದಾರೆ.
ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಪೂರ್ವಭಾವಿ ಇತ್ತೀಚೆಗೆ ಅಮೆರಿಕದ ಅಥ್ಲೆಟಿಕ್ಸ್ ತಂಡದ ಆಯ್ಕೆಗೆ ಟ್ರಯಲ್ಸ್ ಆಯೋಜನೆಗೊಂಡಿತ್ತು. 31 ವರ್ಷದ ಲಿಂಡ್‌ಸೇ ಪ್ಲಾಚ್ ಹೆಪ್ಟಾಥ್ಲಾನ್‌ನ 100 ಮೀಟರ್ ಹರ್ಡಲ್ಸ್, ಹೈಜಂಪ್, ಶಾಟ್ ಪುಟ್, 200 ಮೀಟರ್ ಓಟ, ಲಾಂಗ್ ಜಂಪ್ ಮತ್ತು ಜಾವೆಲಿನ್ ಎಸೆತಗಳಲ್ಲಿ ಪಾಲ್ಗೊಂಡು ಗಮನಸೆಳೆದರು. ಗರ್ಭಿಣಿಯಾಗಿರುವ ನಡುವೆಯೂ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ವೈದ್ಯರಿಂದ ಅನುಮತಿ ಪಡೆದುಕೊಂಡಿದ್ದೆ ಎಂದೂ ಅವರು ತಿಳಿಸಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಆಸೆಯಿಂದ 3ನೇ ಬಾರಿಗೆ ಅಮೆರಿಕ ತಂಡದ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಂಡ ಲಿಂಡ್‌ಸೇ ಪ್ಲಾಚ್, ತಾಯಂದಿರು ಎಷ್ಟು ಬಲಿಷ್ಠವಾಗಿರುತ್ತಾರೆ ಎಂದು ತೋರಿಸುವ ಜತೆಗೆ, ತಮ್ಮ ಕ್ರೀಡಾ ಜೀವನವನ್ನು ತಾವಾಗಿಯೇ ಕೊನೆಗೊಳಿಸಬೇಕು, ಬೇರೆ ಯಾರ ಒತ್ತಡದಿಂದಲೂ ಅದು ಕೊನೆಗೊಳ್ಳಬಾರದು ಎಂಬ ಉದ್ದೇಶದಿಂದಲೂ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 18 ಮಂದಿಯಲ್ಲಿ 15ನೇ ಸ್ಥಾನ ಪಡೆದ ಕಾರಣ ಅವರ ಒಲಿಂಪಿಕ್ಸ್ ಕನಸು ಭಗ್ನಗೊಂಡಿತು. ಆದರೆ ಅವರ ಸ್ಫೂರ್ತಿ ಬತ್ತಲಿಲ್ಲ.
ಅಂದಹಾಗೆ ಗರ್ಭಿಣಿಯರು ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ದೃಷ್ಟಾಂತಗಳೂ ಇವೆ. 2004ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಜರ್ಮನಿಯ ಬಿಲ್ಗಾರ್ತಿ ಕೊರ್ನೆಲಿಯಾ ಪೊಹಿ 30 ವಾರದ ಗರ್ಭಿಣಿಯಾಗಿದ್ದರು. ಇಟಲಿಯ ಸ್ಪೀಡ್ ಸ್ಕೇಟರ್ ಮಾರ್ಟಿನಾ ವಲ್ಸೆಪಿನಾ 2014ರ ಸೋಚಿ ವಿಂಟರ್ ಗೇಮ್ಸ್‌ನಲ್ಲಿ ಪಾಲ್ಗೊಂಡಾಗ ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊಂದಿದ್ದರು ಮತ್ತು ಅವರು ಕಂಚಿನ ಪದಕವನ್ನೂ ಜಯಿಸಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು 3ನೇ ಬಾರಿ ಚಿನ್ನದ ಪದಕ ಜಯಿಸಿದ ಅಮೆರಿಕದ ಬೀಚ್ ವಾಲಿಬಾಲ್ ಆಟಗಾರ್ತಿ ಕೆರ‌್ರಿ ವಾಲ್ಶ್ ಜೆನ್ನಿಂಗ್ಸ್ ಆಗ 5 ವಾರದ ಗರ್ಭಿಣಿಯಾಗಿದ್ದರು. ಆದರೆ ಈ ಬಾರಿ ಕರೊನಾ ವೈರಸ್ ಹಾವಳಿಯಿಂದಾಗಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಗರ್ಭಿಣಿಯರು ಪಾಲ್ಗೊಳ್ಳುವುದು ಸುರಕ್ಷಿತವಲ್ಲವೆನಿಸಿದೆ. ಹೀಗಾಗಿ ಕ್ರೀಡಾಪಟುಗಳಿಗೆ ತಮ್ಮ ಮಕ್ಕಳ ಜತೆಗೆ ಟೋಕಿಯೊ ಒಲಿಂಪಿಕ್ಸ್‌ಗೆ ತೆರಳಲು ಅವಕಾಶ ನೀಡಲಾಗಿಲ್ಲ. ಕೇವಲ ಮೊಲೆ ಹಾಲುಣಿಸುವ ತಾಯಂದಿರು ಮಾತ್ರ ಮಕ್ಕಳ ಜತೆಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದೂ ಕ್ರೀಡಾಗ್ರಾಮದಲ್ಲಿ ಅವರು ತಂಗುವಂತಿಲ್ಲ. ಪ್ರತ್ಯೇಕ ಹೋಟೆಲ್‌ನಲ್ಲಿ ನೆಲೆಸಬೇಕಾಗಿದೆ.