ಕ್ರೀಡೆ

ಇಂದಿನಿಂದ ಹಾಕಿ ಇಂಡಿಯಾ ಲೀಗ್ 2.0: ಏಳು ವರ್ಷಗಳ ಬಳಿಕ ಪುನರಾರಂಭ, ಅದ್ದೂರಿ ಆರಂಭೋತ್ಸವ

ರೌರ್ಕೆಲಾ: ಸತತ 2 ಒಲಿಂಪಿಕ್ಸ್‌ಗಳಲ್ಲಿ ಪದಕ ಸಾಧನೆಯೊಂದಿಗೆ ಪುಟಿದೆದ್ದಿರುವ ಭಾರತೀಯ ಹಾಕಿ, ತನ್ನ ಸುವರ್ಣಯುಗಕ್ಕೆ ಮರಳುವ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಪೂರಕವಾಗಿ ಏಳು ವರ್ಷಗಳ ವಿರಾಮದ ನಂತರ ಹಾಕಿ ಇಂಡಿಯಾ (ಎಚ್‌ಐ), ಐಪಿಎಲ್ ಮಾದರಿಯ ್ರಾಂಚೈಸಿ ಆಧಾರಿತ ಹಾಕಿ ಇಂಡಿಯಾ ಲೀಗ್ (ಎಚ್‌ಐಎಲ್) ಟೂರ್ನಿಯನ್ನು ಹೊಸ ಮಾದರಿಯಲ್ಲಿ ಪುನರಾರಂಭಗೊಳಿಸಲು ಸಜ್ಜಾಗಿದೆ. ಶನಿವಾರ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಎಸ್‌ಜಿ ಪೈಪರ್ಸ್‌ ಹಾಗೂ ಟೀಮ್ ಗೋನಾಸಿಕಾ (ವಿಶಾಖಪಟ್ಟಣ) ತಂಡಗಳು ಸೆಣಸಲಿವೆ. ಇದೇ ಮೊದಲ ಬಾರಿಗೆ ನಡೆಯಲಿರುವ ಮಹಿಳಾ ಆವೃತ್ತಿ ಜನವರಿ 12ರಂದು ರಾಂಚಿಯಲ್ಲಿ ಪ್ರಾರಂಭವಾಗಲಿದೆ.

ಎರಡು ಹಂತದಲ್ಲಿ ನಡೆಯಲಿರುವ ಪುರುಷರ ಲೀಗ್‌ನಲ್ಲಿ ಒಟ್ಟು 8 ತಂಡಗಳು ಸೆಣಸಾಟ ನಡೆಸಲಿವೆ. ಜ.18ರವರೆಗೆ ನಡೆಯಲಿರುವ ಮೊದಲ ಹಂತದ ಲೀಗ್‌ನಲ್ಲಿ ಟೂರ್ನಿಯ ಎಲ್ಲ 8 ತಂಡಗಳು ರೌಂಡ್ ರಾಬಿನ್ ಲೀಗ್‌ನಲ್ಲಿ ತಲಾ ಒಮ್ಮೆ ಎದುರಾಗಲಿವೆ. ಜ. 19ರಂದು ಎರಡನೇ ಹಂತ ಆರಂಭವಾಗಲಿದ್ದು, ಅಲ್ಲಿ 8 ತಂಡಗಳನ್ನು ತಲಾ 4ರಂತೆ 2 ಗುಂಪುಗಳಾಗಿ ವಿಭಾಗಿಸಲಾಗಿದೆ. ಎರಡನೇ ಹಂತದಲ್ಲಿ ಗುಂಪಿನ ಪ್ರತಿ ತಂಡಗಳು ಪರಸ್ಪರ ಒಮ್ಮೆ ಎದುರಾಗಲಿದ್ದು, ಅಗ್ರ 4 ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಜ.31ಕ್ಕೆ 2ನೇ ಹಂತ ಮುಕ್ತಾಯಗೊಳ್ಳಲಿದ್ದು, ಮೂರನೇ ಸ್ಥಾನದ ಪ್ಲೇಆಫ್ ಮತ್ತು ಫೈನಲ್ ಪಂದ್ಯ ಫೆ. 1ಕ್ಕೆ ನಿಗದಿಯಾಗಿವೆ.

ಭಾರತ ತಂಡದ ನಾಯಕ ಹರ್ಮಾನ್‌ಪ್ರೀತ್ ಸಿಂಗ್, ಮನ್‌ಪ್ರೀತ್ ಸಿಂಗ್, ಅಮಿತ್ ರೋಹಿದಾಸ್, ಪಿಆರ್ ಶ್ರೀಜೇಶ್, ಗುರ್ಜಂತ್ ಸಿಂಗ್, ಹಾರ್ದಿಕ್ ಸಿಂಗ್, ಲಲಿತ್ ಉಪಾಧ್ಯಾಯ 2013ರಿಂದ 2017ರವರೆಗೆ ನಡೆದ ಎಚ್‌ಐಎಲ್‌ನಲ್ಲಿ ಗಮನಸೆಳೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸ್ಥಾನ ಪಡೆದ ತಾರೆಯರಾಗಿದ್ದಾರೆ. 2026ರ ಏಷ್ಯನ್ ಗೇಮ್ಸ್ ಮತ್ತು 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಬಲಿಷ್ಠ ಭಾರತ ತಂಡ ಕಟ್ಟಲು ಈ ಟೂರ್ನಿ ನೆರವಾಗುವ ನಿರೀಕ್ಷೆ ಇದೆ.

ಬಹುಮಾನ ಮೊತ್ತ

ಚಾಂಪಿಯನ್ಸ್: ₹3 ಕೋಟಿ

ರನ್ನರ್ ಅಪ್: ₹1.5 ಕೋಟಿ

ಎ ಗುಂಪು : ಡೆಲ್ಲಿ ಎಸ್‌ಜಿ ಪೈಪರ್ಸ್‌, ಶ್ರಾಚಿ ರಾರ್ಹ ಬೆಂಗಾಲ್ ಟೈಗರ್ಸ್‌, ಸೂರ್ಮಾ ಹಾಕಿ ಕ್ಲಬ್, ಕಳಿಂಗ ಲ್ಯಾನ್ಸರ್.

ಬಿ ಗುಂಪು: ಟೀಮ್ ಗೋನಾಸಿಕಾ, ಹೈದರಾಬಾದ್ ತೂಾನ್ಸ್, ತಮಿಳುನಾಡು ಡ್ರಾೃಗನ್ಸ್, ಯುಪಿ ರುದ್ರಾಸ್.

ಟಾಪ್ ಆಟಗಾರರು

ಹರ್ಮಾನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್, ಅಭಿಷೇಕ್, ಶಂಶೀರ್ ಸಿಂಗ್ (ಭಾರತ), ಗೊನ್ಜಾಲೊ ಪೀಲಾಟ್(ಜರ್ಮನಿ), ಬ್ಲೇಕ್ ಗೋವರ್ಸ್‌ (ಆಸ್ಟ್ರೇಲಿಯಾ), ಥಿಯೆರಿ ಬ್ರಿಂಕ್‌ಮನ್ (ನೆದರ್ಲೆಂಡ್), ಜೆರೆಮಿ ಹೇವರ್ಡ್ (ಆಸ್ಟ್ರೇಲಿಯಾ), ಜಿಪ್ ಜಾನ್ಸೆನ್ (ನೆದರ್ಲೆಂಡ್), ವಿಕ್ಟರ್ ವೆಗ್ನೆಜ್ (ಬೆಲ್ಜಿಯಂ), ಲಾರ್ಸ್ ಬಾಲ್ಕ್ (ನೆದರ್ಲೆಂಡ್).

ಅದ್ದೂರಿ ಆರಂಭೋತ್ಸವ

ಟೂರ್ನಿಯ ಉದ್ಘಾಟನಾ ಪಂದ್ಯಕ್ಕೂ ಮುನ್ನ ಅದ್ದೂರಿ ಆರಂಭೋತ್ಸವ ಆಯೋಜಿಸಲಾಗಿದ್ದು, ಬಾಲಿವುಡ್ ತಾರೆಯರು ಹಾಗೂ ಜನಪ್ರಿಯ ಸಂಗೀತ ಕಲಾವಿದರು ವಿಜೃಂಭಣೆಯ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲಿದ್ದಾರೆ. ನಟಿ ಸಾರಾ ಅಲಿ ಖಾನ್, ಗಾಯಕ ಕಿಂಗ್ ಮತ್ತು ಶಿಯಾಮಕ್ ದಾವರ್ ಡಾನ್ಸ್ ಗ್ರೂಪ್ ವರ್ಣರಂಜಿತ ಸಮಾರಂಭದ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.

ಇಂದಿನ ಪಂದ್ಯ

ಡೆಲ್ಲಿ-ಗೋನಾಸಿಕಾ

ಆರಂಭ: ರಾತ್ರಿ 7

ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಡಿಡಿ ಸ್ಪೋರ್ಟ್ಸ್