ಕ್ರೀಡೆ

ಬಾಂಗ್ಲಾದೇಶಕ್ಕೆ ಸೋಲುಣಿಸಿದ ನೆದರ್ಲೆಂಡ್: ಶಕೀಬ್ ಪಡೆ ಸೆಮೀಸ್ ಆಸೆ ಭಗ್ನ !

ಕೋಲ್ಕತ: ನೆದರ್ಲೆಂಡ್ ತಂಡ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಅಚ್ಚರಿಯ ಲಿತಾಂಶದೊಂದಿಗೆ ತನ್ನ ಕನಸಿನ ಓಟವನ್ನು ಮುಂದುವರಿಸಿದೆ. ನಾಯಕ ಸ್ಕಾಟ್ ಎಡ್ವರ್ಡ್ಸ್ (68 ರನ್, 89 ಎಸೆತ, 6 ಬೌಂಡರಿ) ಹೋರಾಟಯುತ ಅರ್ಧಶತಕ ಹಾಗೂ ವೇಗಿ ಪೌಲ್ ವಾನ್ ಮಿಕೆರನ್ (23ಕ್ಕೆ 4) ಮಾರಕ ದಾಳಿಯ ನೆರವಿನಿಂದ ಡಚ್ಚರ ತಂಡ, ಬಾಂಗ್ಲಾದೇಶ ಎದುರು 87 ರನ್‌ಗಳಿಂದ ಗೆಲುವು ದಾಖಲಿಸಿದೆ. 2ನೇ ಜಯದೊಂದಿಗೆ ನೆದರ್ಲೆಂಡ್ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರೆ, ಬಾಂಗ್ಲಾ 9ನೇ ಸ್ಥಾನಕ್ಕೆ ಕುಸಿದಿದೆ.

ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ನಡೆದ ಹಾಲಿ ಆವೃತ್ತಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ನೆದರ್ಲೆಂಡ್, ಸ್ಕಾಟ್ ಎಡ್ವರ್ಡ್ಸ್ -ಸೈಬ್ರಾಂಡ್ ಎಂಗಲ್ ಬ್ರೆಕ್ಟ್ (35) ಜತೆಯಾಟದ ಆಸರೆಯಿಂದ ಭರ್ತಿ 50 ಓವರ್‌ಗಳಲ್ಲಿ 229 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಮೀಕೆರನ್ ಹಾಗೂ ಇತರ ಬೌಲರ್‌ಗಳ ಶಿಸ್ತು ಬದ್ದ ದಾಳಿಗೆ ನಲುಗಿದ ಬಾಂಗ್ಲಾ 42.2 ಓವರ್‌ಗಳಲ್ಲಿ 142 ರನ್‌ಗಳಿಗೆ ಸರ್ವಪತನ ಕಂಡಿತು. ಇದು ಶಕೀಬ್ ಅಲ್ ಹಸನ್ ಪಡೆಗೆ 5ನೇ ಸೋಲಾಗಿದ್ದು, ಅಧಿಕೃತವಾಗಿ ಸೆಮೀಸ್ ಆಸೆ ಕೈಚೆಲ್ಲಿದ ಮೊದಲ ತಂಡವೆನಿಸಿದೆ.

ನೆದರ್ಲೆಂಡ್: 50 ಓವರ್‌ಗಳಲ್ಲಿ 229 (ವಿಕ್ರಮ್‌ಜಿತ್ 3, ವೆಸ್ಲಿ 41, ಅಕೆರ್‌ಮನ್ 15, ಸ್ಕಾಟ್ ಎಡ್ವರ್ಡ್ಸ್ 68, ಡಿಲೀಡೆ 17, ಸೈಬ್ರಾಂಡ್ 35, ವಾನ್ ಬೀಕ್ 23, ಮುಸ್ತಾಫಿಜುರ್ 36ಕ್ಕೆ2, ಮೆಹಿದಿ 40ಕ್ಕೆ2, ಟಸ್ಕಿನ್ 43ಕ್ಕೆ2).

ಬಾಂಗ್ಲಾದೇಶ: 42.2 ಓವರ್‌ಗಳಲ್ಲಿ 142 (ಲಿಟನ್ 3, ತಂಜಿದ್ 15, ಮೆಹದಿ ಹಸನ್ 35,ಶಕೀಬ್ 5, ಮಹಮುದುಲ್ಲಾ 20, ಮುಸ್ತಾಫಿಜುರ್ 20, ವಾನ್ ಮೀಕೆರನ್ 23ಕ್ಕೆ4, ಡಿ ಲೀಡೆ 25ಕ್ಕೆ2). ಪಂದ್ಯಶ್ರೇಷ್ಠ: ಪೌಲ್ ವಾನ್ ಮೀಕೆರನ್