ಕೊಚ್ಚಿ: ಮುಂದಿನ ವರ್ಷದ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 5ನೇ ಆವೃತ್ತಿಗೆ ಪೂರ್ವಭಾವಿಯಾಗಿ ನಡೆದ ಮಹಿಳಾ ಕ್ರಿಕೆಟಿಗರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೆಲಿಯಾ ತಂಡದ ನಾಯಕಿ ಸೋಫಿ ಮೊಲಿನೆಕ್ಸ್ ಗರಿಷ್ಠ 1.10 ಕೋಟಿ ರೂಪಾಯಿಗಳ ಬಿಡ್ ಪಡೆದರು. ಬುಧವಾರ ನಡೆದ ಆಟಗಾರ್ತಿಯ ಲಿಲಾವಿನಲ್ಲಿ ಸೋಫಿ ಮೊಲಿನೆಕ್ಸ್ 1.10 ಕೋಟಿ ರೂಪಾಯಿಗಳಿಗೆ ಯುಪಿ ವಾರಿಯರ್ಸ್ ತಂಡ ಪಾಲಾದರೆ, ಎರಡನೇ ಗರಿಷ್ಠ ಬಿಡ್ ಪಡೆದ ಕಿರಣ್ ನವಗಿರೆ 75 ಲಕ್ಷ ರೂಪಾಯಿಗಳಿಗೆ ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದರು. ಕರ್ನಾಟಕದ 15 ವರ್ಷದ ಉಮಾ ಕಾಶ್ವಿ (ಡೆಲ್ಲಿ), ಆರಂಭಿಕ ಬ್ಯಾಟರ್ ವೃಂದಾ ದಿನೇಶ್ (ಆರ್ಸಿಬಿ) ಹಾಗೂ ಸಹನಾ ಪವಾರ್ (ಯುಪಿ ವಾರಿಯರ್ಸ್) ಮೂಲ ಬೆಲೆ 10 ಲಕ್ಷ ರೂಪಾಯಿಗಳಿಗೆ ಸೇಲಾದರು.
ಹಾಲಿ ಚಾಂಪಿಯನ್ ಆರ್ಸಿಬಿ ಹಾಗೂ ಯುಪಿ ವಾರಿಯರ್ಸ್ ತಂಡಗಳು ಸೋಫಿ ಮೊಲಿನೆಕ್ಸ್ ಸೇರ್ಪಡೆಗೆ ಭಾರಿ ಪೈಪೋಟಿ ನಡೆಸಿದವು. 1.5 ಕೋಟಿ ರೂಪಾಯಿವರೆಗೂ ನಿಕಟ ಹೋರಾಟ ನಡೆಸಿದ ಆರ್ಸಿಬಿ ನಂತರ ಹಿಂದೆಸರಿಯಿತು. ಸೋಫಿ ಮೊಲಿನೆಕ್ಸ್ 50 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದರು. ಎರಡು ಬಾರಿಯ ಚಾಂಪಿಯನ್ ಆರ್ಸಿಬಿ ತಂಡ, ಆಸೀಸ್ ಆಲ್ರೌಂಡರ್ ಜೆಸ್ ಜೋನಾಸೆನ್ (40 ಲಕ್ಷ), ತೇಜಲ್ ಹಸಬಿನ್ಸ್, ದ.ಆಫ್ರಿಕಾ ಕ್ಲೋನ್ ಟೆಯಾನ್(30 ಲಕ್ಷ) ಜತೆಗೆ ಕರ್ನಾಟಕದ ವಿಕೆಟ್ ಕೀಪರ್&ಬ್ಯಾಟರ್ ವೃಂದಾ ದಿನೇಶ್ರನ್ನು ಮೂಲ ಬೆಲೆಗೆ ಖರೀದಿಸಿತು.
ಭಾರತ ತಂಡದ ಅನುಭವಿ ಆಲ್ರೌಂಡರ್ ಸ್ನೇಹಾ ರಾಣಾ (30 ಲಕ್ಷ), ಆಸೀಸ್ ಆಲ್ರೌಂಡರ್ ಗ್ರೇಸ್ ಹ್ಯಾರಿಸ್ (30 ಲಕ್ಷ), ಆಶಾ ಶೋಭನಾ (30 ಲಕ್ಷ), ಸುಷ್ಮಾ ವರ್ಮ (30 ಲಕ್ಷ), ಕ್ಯಾಥರಿನ್ ಬೆಸ್, ಮನಲಿ ದಣಿ (ತಲಾ 10 ಲಕ್ಷ) ಯಪಿ ತಂಡ ಸೇರಿದರು. ಶ್ವೇತಾ ಸೆಹ್ರಾವತ್ (20 ಲಕ್ಷ), ಅತಾ ಭಗತ್, ಸನಿಕಾ ಚಲ್ಕೆ, ಲತಿಕಾ ಇನಾಮ್ದಾರ್,ದಿಶಾ ಕಸಟ್, ಭಾರತಿ ರಾವಲ್ (10 ಲಕ್ಷ) ಮಾಜಿ ಚಾಂಪಿಯನ್ ಮುಂಬೈ ತಂಡ ಕೂಡಿಕೊಂಡರು. ತಮಿಳುನಾಡಿನ ಜಿ.ಕಮಲಿನಿ (40 ಲಕ್ಷ), ಸಮೈರಾ ರಾವ್ (10 ಲಕ್ಷ) ಜತೆಗೆ ಐರ್ಲೆಂಡ್ನ ಓರ್ಲಾ ಪ್ರೆಂಡರ್ಗ್ಯಾಸ್ಟ್ (30 ಲಕ್ಷ) ಗುಜರಾತ್ ಜೈಂಟ್ಸ್ಗೆ ಹೊಸ ಸೇರ್ಪಡೆ ಎನಿಸಿದರು. ಮಿನಿ ಹರಾಜಿನಲ್ಲಿ ಐದು ಫ್ರಾಂಚೈಸಿಗಳು 7 ವಿದೇಶಿ ಸಹಿತ ಒಟ್ಟು 25 ಆಟಗಾರ್ತಿಯರನ್ನು ಖರೀದಿಸಿದವು.
ಡೆಲ್ಲಿ ಸೇರಿದ ಕನ್ನಡತಿ ಉಮಾ
ಬೌಲಿಂಗ್ ಆಲ್ರೌಂಡರ್ ಕರ್ನಾಟಕದ ಉಮಾ ಕಾಶ್ವಿ ಮೂಲ ಬೆಲೆ 10 ಲಕ್ಷ ರೂಪಾಯಿಗೆ ನಾಲ್ಕು ಬಾರಿ ಫೈನಲಿಸ್ಟ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದರು. ಉಮಾ ಡೆಲ್ಲಿ ತಂಡ ಸೇರಿದ 2ನೇ ಕನ್ನಡತಿ ಆಗಿದ್ದು, ನಿಕಿ ಪ್ರಸಾದ್ರನ್ನು ರಿಟೇನ್ ಮಾಡಿಕೊಳ್ಳಲಾಗಿತ್ತು. ಹರಾಜು ಪ್ರಕ್ರಿಯೆಯಲ್ಲಿ ಸೇಲಾದ ಅತಿ ಕಿರಿಯ ಮಹಿಳಾ ಕ್ರಿಕೆಟರ್ ಎನಿಸಿರುವ ಬಲಗೈ ಆಫ್ ಸ್ಪಿನ್ನರ್ ಉಮಾ, 19 ವಯೋಮಿತಿ ಭಾರತ ತಂಡ ಪರವೂ ಆಡಿದ್ದಾರೆ. ಹರಾಜಿನಲ್ಲಿದ್ದ ಒಟ್ಟು 8 ಕನ್ನಡತಿಯರ ಪೈಕಿ ಮೂವರು ಮಾತ್ರ (ಉಮಾ, ವೃಂದಾ, ಸಹಾನಾ) ಸೇಲಾದರು. ಶ್ರೇಯಾಂಕಾ ಪಾಟೀಲ್ (ಆರ್ಸಿಬಿ), ರಾಜೇಶ್ವರಿ ಗಾಯಕ್ವಾಡ್ (ಗುಜರಾತ್) ರಿಟೇನ್ ಆಗಿರುವ ಮತ್ತಿಬ್ಬರು ಕನ್ನಡತಿಯರು.