ಆರ್​ಸಿಬಿ ಟ್ರೋಫಿ ಗೆಲುವಿನ ಸಂಭ್ರಮ SOURCE
WPL

WPL 2027: ಹಾಲಿ ಚಾಂಪಿಯ್ ಆರ್‌ಸಿಬಿ ತಂಡದಿಂದ ಸ್ಟಾರ್ ಆಲ್ರೌಂಡರ್ ರಿಲೀಸ್, ನಾಲ್ವರು ಕನ್ನಡತಿಯರು ರಿಟೇನ್

ಐದನೇ ಆವೃತ್ತಿಗೆ ರಿಟೇನ್ ಆಟಗಾರ್ತಿಯರ ಪಟ್ಟಿ ಪ್ರಕಟ

ನವದೆಹಲಿ: ಐದನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲುೃಪಿಎಲ್) ಕ್ರಿಕೆಟಿಗರ ಹರಾಜು ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಎಲ್ಲ ಐದು ಫ್ರಾಂಚೈಸಿಗಳು ರಿಟೇನ್ ಆಟಗಾರ್ತಿಯರ ಪಟ್ಟಿ ಪ್ರಕಟಿಸಿವೆ. ವೈಯಕ್ತಿಕ ಕಾರಣಗಳಿಂದ ಕಳೆದ ಆವೃತ್ತಿ ತಪ್ಪಿಸಿಕೊಂಡಿದ್ದ ಸ್ಟಾರ್ ಆಲ್ರೌಂಡರ್ ಎಲ್ಲಿಸ್ ಪೆರ್ರಿ 2027ರ ಆವೃತ್ತಿಗೆ ಲಭ್ಯವಿರಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ ಅವರನ್ನು ಉಳಿಸಿಕೊಂಡಿದೆ.

ಮುಂದಿನ ವರ್ಷದ ಜನವರಿ 14ರಿಂದ ಫೆಬ್ರವರಿ 7ರವರೆಗೆ ನಡೆಯಲಿರುವ ಟೂರ್ನಿಗೆ ಮುನ್ನ ಅಕ್ಟೋಬರ್ 28ರಂದು ಕೊಚ್ಚಿಯಲ್ಲಿ ಡಬ್ಲುೃಪಿಎಲ್ ಮಿನಿ ಹರಾಜು ನಿಗದಿಯಾಗಿದೆ. ಐದು ಫ್ರಾಂಚೈಸಿಗಳು 23 ವಿದೇಶಿ ತಾರೆಗಳ ಸಹಿತ ಒಟ್ಟು 63 ಕ್ರಿಕೆಗರನ್ನು ಉಳಿಸಿಕೊಂಡಿವೆ. ರಿಟೇನ್ ಪಟ್ಟಿ ಅಂತಿಮಗೊಳಿಸಲು ಸೋಮವಾರ ಅಂತಿಮ ದಿನವಾಗಿತ್ತು. ವಿದೇಶಿ ಕೋಟಾ ಸೇರಿ 27 ಸ್ಥಾನಗಳಿಗೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಯುಪಿ ವಾರಿಯರ್ಸ್‌ ಗರಿಷ್ಠ 3.65 ಕೋಟಿ ರೂ. ಬಜೆಟ್ ಹೊಂದಿದೆ.

ಆರ್‌ಸಿಬಿ 4, ಯುಪಿ ವಾರಿಯರ್ಸ್‌ 9, ಹಾಲಿ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್, ಎರಡು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಲಾ ಆರು ಹಾಗೂ ಗುಜರಾತ್ ಜೈಂಟ್ಸ್ 4 ಸ್ಥಾನ ಭರ್ತಿಗೊಳಿಸಲು ಹರಾಜಿನಲ್ಲಿ ಪೈಪೋಟಿ ನಡೆಸಲಿವೆ. ಆರ್‌ಸಿಬಿ ಆಲ್ರೌಂಡರ್ ಗ್ರೇಸ್ ಹ್ಯಾರಿಸ್, ಡಿ. ಹೇಮಲತಾ, ಗೌತಮಿ ನಾಯ್ಕ, ಲಿನ್ಸೆ ಸ್ಮಿತ್‌ರನ್ನು ಬಿಡುಗಡೆ ಮಾಡಿದೆ. ಆಟಗಾರ್ತಿಯರ ರಿಟೇನ್ ನಂತರ ಮುಂಬೈ ಇಂಡಿಯನ್ಸ್ ₹1 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ₹1.1 ಕೋಟಿ, ಗುಜರಾತ್ ₹1.25 ಕೋಟಿ ಹಾಗೂ ಯುಪಿ ವಾರಿಯರ್ಸ್‌ ₹3.65 ಕೋಟಿ ಬಜೆಟ್ ಉಳಿಸಿಕೊಂಡಿವೆ.

ಆರ್‌ಸಿಬಿ ರಿಟೇನ್ ಪಟ್ಟಿ: ಸ್ಮತಿ ಮಂದನಾ, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಪ್ರತ್ಯೂಷಾ ಕುಮಾರ್, ಆರುಂಧತಿ ರೆಡ್ಡಿ, ಪೂಜಾ ವಸಕರ್, ರಾಧಾ ಯಾದವ್, ಪ್ರೇಮಾ ರಾವತ್, ಸಯಾಲಿ ಸತ್ಗರೆ. ವಿದೇಶಿ: ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೊಲ್, ಲಾರೆನ್ ಬೆಲ್, ನಡೀನ್ ಡಿ ಕ್ಲರ್ಕ್. ಬಜೆಟ್: ವೆಚ್ಚ: ₹13.85 ಕೋಟಿ; ಉಳಿಕೆ: ₹1.15 ಕೋಟಿ.

ಪ್ರತ್ಯೂಷಾ, ಶ್ರೇಯಾಂಕಾ ರಿಟೇನ್

ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಕನ್ನಡತಿಯರಾದ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್, ವಿಕೆಟ್ ಕೀಪರ್-ಬ್ಯಾಟರ್ ಪ್ರತ್ಯೂಷಾ ಕುಮಾರ್‌ರನ್ನು ಉಳಿಸಿಕೊಂಡಿದೆ. ನಿಕ್ಕಿ ಪ್ರಸಾದ್ (ಡೆಲ್ಲಿ), ರಾಜೇಶ್ವರಿ ಗಾಯಕ್ವಾಡ್ (ಗುಜರಾತ್) ರಿಟೇನ್ ಆಗಿರುವ ಇನ್ನಿಬ್ಬರು ಕನ್ನಡತಿಯರು.