ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ
- ಜಗತ್ತಿನಲ್ಲೆ ಅತಿ ದೊಡ್ಡ ಕ್ರಿಕೆಟ್ ಅಭಿಮಾನಿ ಬಳಗವನ್ನು ಹೊಂದಿರುವ ಕನ್ನಡಿಗರ ಹೆಮ್ಮೆಯ ಆರ್‌ಸಿಬಿ
- ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಜಯಿಸಿದ ಕನ್ನಡ ತಂಡ
- ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದ ಸ್ಮೃತಿ ಮಂಧಾನ ಪಡೆ
Smriti Mandhana : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2026ನೇ ಸಾಲಿನ ಮಹಿಳಾ ಪ್ರೀಮಿಯರ್ ಲೀಗ್ ( WPL ) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗುರುವಾರ (ಫೆ.05) ವಡೋದರಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. 204 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರು ಅದ್ಭುತ ಆಟವಾಡಿದರು. 41 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 87 ರನ್ ಗಳಿಸಿದರು.
ಆರ್‌ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಸ್ಮೃತಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಇದಿಷ್ಟು ಪಂದ್ಯದ ವಿಚಾರವಾದರೆ, ಇದರ ಹಿಂದೆ ಇನ್ನೊಂದು ರೋಚಕ ಸಂಗತಿ ಇದೆ. ಅದೇನೆಂದರೆ, ತೀವ್ರ ಜ್ವರದಿಂದ ಬಳಲುತ್ತಿದ್ದರೂ ಸ್ಮೃತಿ ಮಂಧಾನ ಅವರು ನಿನ್ನೆಯ ಪಂದ್ಯವನ್ನು ಆಡಿದರು. ಈ ಸಂಗತಿಯನ್ನು ಆರ್‌ಸಿಬಿ ಮುಖ್ಯ ತರಬೇತುದಾರ ಮಲೋಲನ್ ರಂಗರಾಜನ್ ಬಹಿರಂಗಪಡಿಸಿದ್ದಾರೆ.
ವಾಸ್ತವವಾಗಿ, ಮಂಧಾನ ಜ್ವರದಿಂದ ಬಳಲುತ್ತಿದ್ದರು. ಆದರೆ, ಅದು ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ನಾನು ಅವರ ಜೊತೆ ಮಾತನಾಡಿದಾಗ, ಅವರು, ತೊಂದರೆ ಇಲ್ಲ, ನಾನು ಆಡುತ್ತೇನೆ ಎಂದು ಹೇಳಿದರು. ಫೈನಲ್ ಪಂದ್ಯದಲ್ಲಿ ಮಂಧಾನ ಅವರ ಇನ್ನಿಂಗ್ಸ್ ಬಗ್ಗೆ ವಿವರಿಸಲು ತಮ್ಮಲ್ಲಿ ಪದಗಳೇ ಇಲ್ಲ. ಕಳೆದ ಕೆಲವು ವರ್ಷಗಳಿಂದ ಸ್ಮೃತಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಚೆಂಡನ್ನು ಸರಿಯಾದ ಸಮಯಕ್ಕೆ ಸರಿಯಾಗಿ ನಿಭಾಯಿಸುತ್ತಿದ್ದಾರೆ. ಅಗತ್ಯವಿದ್ದಾಗ ಆಕ್ರಮಣಕಾರಿ ಆಟವನ್ನು ಸಹ ಆಡುತ್ತಿದ್ದಾರೆ ಎಂದು ಹೇಳಿದರು.
ಮಂಧಾನ ಅವರು ತನ್ನ ಬ್ಯಾಟಿಂಗ್ ಸುಧಾರಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆಕೆ ಓರ್ವ ಮಹಾನ್ ಬುದ್ಧಿಜೀವಿ, ಅದಕ್ಕಾಗಿಯೇ ಆಕೆ ಜೀವನದಲ್ಲಿ ಇಷ್ಟೊಂದು ಯಶಸ್ಸನ್ನು ಸಾಧಿಸಿದ್ದಾಳೆ ಎಂದು ಮಲೋಲನ್ ರಂಗರಾಜನ್ ತಿಳಿಸಿದರು. ಒಂದು ವೇಳೆ ಸ್ಮೃತಿ ಮಂಧಾನ, ಕೋಚ್ ಹೇಳಿದ ಮಾತಿಗೆ ಯೆಸ್ ಅಂದಿದ್ದರೆ ಇಂದು ಆರ್‌ಸಿಬಿ ಕಪ್ ಗೆಲ್ಲುತ್ತಿರಲಿಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿದೆ.
ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 203 ರನ್ ಗಳಿಸಿತು. ಡೆಲ್ಲಿ ಪರ ನಾಯಕಿ ಜೆಮಿಮಾ ರೊಡ್ರಿಗಸ್ (57), ಲಾರಾ ವೋಲ್ವಾರ್ಡ್ (44), ಲಿಜೆಲ್ಲೆ ಲೀ (37) ಮತ್ತು ಚಿನೆಲ್ಲೆ ಹೆನ್ರಿ (ಔಟಾಗದೆ 35 ರನ್) ಗರಿಷ್ಠ ಸ್ಕೋರರ್‌ಗಳಾಗಿದ್ದರು. ಆರ್‌ಸಿಬಿ ಬೌಲರ್‌ಗಳಲ್ಲಿ ಸಯಾಲಿ ಸತ್‌ಘರೆ, ನಾಡಿನ್ ಡಿ ಕ್ಲರ್ಕ್ ಮತ್ತು ಅರುಂಧತಿ ರೆಡ್ಡಿ ತಲಾ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಆರ್‌ಸಿಬಿ ಪರ, ಸ್ಮೃತಿ ಮಂಧಾನ (87 ರನ್, 41 ಎಸೆತ, 12 ಬೌಂಡರಿ, 3 ಸಿಕ್ಸರ್) ಮತ್ತು ಜಾರ್ಜಿಯಾ ವಾಲ್ (79 ರನ್, 54 ಎಸೆತ,. 14 ಬೌಂಡರಿ) ಉತ್ತಮ ಪ್ರದರ್ಶನ ನೀಡಿದರು. ಇದರ ಪರಿಣಾಮ ಆರ್‌ಸಿಬಿ ತಂಡ 19.4 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 204 ರನ್‌ಗಳ ಬೃಹತ್ ಗುರಿಯನ್ನು ತಲುಪಿತು. ದೆಹಲಿ ಬೌಲರ್‌ಗಳ ಪರ ಚಿನೆಲ್ಲೆ ಹೆನ್ರಿ ಎರಡು ವಿಕೆಟ್ ಪಡೆದರು. ನಂದಿನಿ ಶರ್ಮಾ ಮತ್ತು ಮಿನ್ನುಮಣಿ ತಲಾ ಒಂದು ವಿಕೆಟ್ ಪಡೆದರು, (ಏಜೆನ್ಸೀಸ್).