ಡೆಲ್ಲಿ ಕ್ಯಾಪಿಟಲ್ಸ್​ ಆಟಗಾರ್ತಿ ಲಿಜೆಲ್ಲೆ ಲೀ 
WPL

ಔಟ್​ or ನಾಟೌಟ್​... ಮೈದಾನದಲ್ಲೇ ಅಂಪೈರ್​ ಜತೆ ಜಗಳಕ್ಕಿಳಿದ ಡೆಲ್ಲಿ ಆಟಗಾರ್ತಿಗೆ ಐಸಿಸಿ ಬಿಗ್​ ಶಾಕ್​! Lizelle Lee

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಪ್ರೀಮಿಯರ್ ಲೀಗ್ 2026 ಪಂದ್ಯಾವಳಿ ದಿನದಿಂದ ದಿನಕ್ಕೆ ಭರ್ಜರಿ ಮನರಂಜನೆ ನೀಡುತ್ತಿದೆ
  • ಆರ್​ಸಿಬಿ ತಂಡ ಸತತ 5 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ
  • ಉಳಿದ ತಂಡಗಳು ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮ ಪಡುತ್ತಿವೆ
Lizelle Lee : ಮಹಿಳಾ ಪ್ರೀಮಿಯರ್ ಲೀಗ್ 2026 (WPL) ಪಂದ್ಯಾವಳಿ ದಿನದಿಂದ ದಿನಕ್ಕೆ ಭರ್ಜರಿ ಮನರಂಜನೆಯನ್ನು ನೀಡುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಈಗಾಗಲೇ 13 ಪಂದ್ಯಗಳು ಪೂರ್ಣಗೊಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ತಂಡ, ಸತತ 5 ಪಂದ್ಯಗಳನ್ನು ಗೆದ್ದು ಪ್ಲೇಆಫ್‌ಗೆ ಎಂಟ್ರಿ ಕೊಟ್ಟಿದೆ. ಉಳಿದ ತಂಡಗಳು ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಾಕಷ್ಟು ಶ್ರಮ ಪಡುತ್ತಿವೆ.
ನಿನ್ನೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈ ವಿರುದ್ಧ ವಿರೋಚಿತ ಗೆಲುವು ದಾಖಲಿಸಿತು. ಅದೇ ಸಮಯದಲ್ಲಿ ಒಂದು ಘಟನೆ ಭಾರೀ ಚರ್ಚೆಗೆ ಗ್ರಾಸವಾಯಿತು. ಅದೇನೆಂದರೆ, ಡೆಲ್ಲಿ ಆಟಗಾರ್ತಿ ಲಿಜೆಲ್ಲೆ, ಅಂಪೈರ್​ ಜತೆ ಜಗಳವಾಡಿದ್ದು. ಹೀಗಾಗಿ, ಲಿಜೆಲ್ಲೆ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ( ICC ) ಭಾರಿ ದಂಡ ವಿಧಿಸಿದೆ. ಲಿಜೆಲ್ಲೆ ಮೇಲೆ ಶೇ. 10 ರಷ್ಟು ಪಂದ್ಯ ಶುಲ್ಕ ಕಡಿತಗೊಳಿಸಲು ಐಸಿಸಿ ಆದೇಶಿಸಿದೆ. ಇದರೊಂದಿಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸಹ ಹಾಕಿದೆ.
ಸಂಪೂರ್ಣ ವಿಷಯಕ್ಕೆ ಬರುವುದಾದರೆ, ನಿನ್ನೆ ವಡೋದರಾದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ರೋಚಕ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಡೆಲ್ಲಿ ಆಟಗಾರ್ತಿ ಲಿಜೆಲ್ಲೆ ಲೀ ವಿವಾದಾತ್ಮಕವಾಗಿ ಸ್ಟಂಪ್ ಔಟ್ ಆದರು. ಡೆಲ್ಲಿ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಮುಂಬೈನ ಅಮನ್ ಜ್ಯೋತ್ ಕೌರ್ 11ನೇ ಓವರ್ ಬೌಲ್ ಮಾಡಿದರು. ಈ ವೇಳೆ ಲಿಜೆಲ್ಲೆ, ವೈಡ್ ಬಾಲ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಮಿಸ್​ ಆಗಿ ಕೀಪಿಂಗ್​ ಮಾಡುತ್ತಿದ್ದ ರಾಹಿಲಾ ಫಿರ್ದೌಸ್ ಕೈ ಸೇರಿತು. ಈ ವೇಳೆ ರಾಹಿಲಾ, ತಕ್ಷಣ ಸ್ಟಂಪೌಟ್​ ಮಾಡಿದರು. ಇದರೊಂದಿಗೆ, ಮೂರನೇ ಅಂಪೈರ್ ಲಿಜೆಲ್ಲೆ ಅವರನ್ನು ಸ್ಟಂಪ್ ಔಟ್ ಎಂದು ಘೋಷಿಸಿದರು.
ಆದರೆ, ಲಿಜೆಲ್ಲೆ ಪ್ರಕಾರ ಅದು ಔಟ್​ ಅಲ್ಲ. ಕೀಪರ್​ ಸ್ಟಂಪೌಟ್​ ಮಾಡುವ ಮುನ್ನವೇ ತಮ್ಮ ಬ್ಯಾಟ್ ಅನ್ನು ಕ್ರೀಸ್​ನಲ್ಲಿ ಇಡಲಾಗಿತ್ತು ಮತ್ತು ತನ್ನ ಕಾಲು ಇನ್ನೂ ಕ್ರೀಸ್‌ನಲ್ಲಿತ್ತು ಎಂಬುದು ಅವರ ವಾದ. ನಾನು ಔಟ್​ ಆಗಿಲ್ಲ ಎಂದು ಲಿಜೆಲ್ಲೆ, ಫೀಲ್ಡ್ ಅಂಪೈರ್ ಜೊತೆ ವಾಗ್ವಾದ ನಡೆಸಿದರು. ಆದಾಗ್ಯೂ, ಮೂರನೇ ಅಂಪೈರ್ ನಿರ್ಧಾರದಿಂದಾಗಿ ಅವರು ಪೆವಿಲಿಯನ್ ಸೇರಿದರು. ಅಷ್ಟರಲ್ಲಾಗಲೇ ಲೆಜೆಲ್ಲೆ ಅವರು 28 ಎಸೆತಗಳಲ್ಲಿ 46 ರನ್ ಗಳಿಸಿದ್ದರು. ಅರ್ಧಶತಕದಿಂದ ವಂಚಿತರಾದ ಬೆನ್ನಲ್ಲೇ ಲಿಜೆಲ್ಲೆ ನಿರಾಶೆಯಿಂದ ಡ್ರೆಸ್ಸಿಂಗ್ ಕೋಣೆಗೆ ಹೋದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಸ್ಟಂಪಿಂಗ್ ವಿವಾದದ ಹಿನ್ನೆಲೆಯಲ್ಲಿ ಮೂರನೇ ಅಂಪೈರ್ ಕರೆ ನೀಡಿದರೂ ದೆಹಲಿ ಆಟಗಾರ್ತಿ ಲಿಜೆಲ್ಲೆ ಲೀ ಜಗಳವಾಡಿದ್ದು ಇದೀಗ ವಿವಾದವಾಗಿದೆ. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆ. ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್​ 2.2ರ ಉಲ್ಲಂಘನೆಯಾಗಿದ್ದು, ಅವರ ಪಂದ್ಯ ಶುಲ್ಕದ ಶೇ. 10 ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ಅನ್ನು ನೀಡಲಾಗಿದೆ.
ಆದಾಗ್ಯೂ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ವಿರುದ್ಧ ರೋಚಕ ಗೆಲುವು ದಾಖಲಿಸಿತು. ನಾಯಕಿ ಜೆಮಿಮಾ ರೊಡ್ರಿಗಸ್ (37 ಎಸೆತ, ಅಜೇಯ 51 ರನ್​) ಅವರ ಅರ್ಧ ಶತಕದ ನೆರವಿನಿಂದ ಡೆಲ್ಲಿ ತಂಡ ಗೆಲುವಿನ ಲಯಕ್ಕೆ ಮರಳಿತು, (ಏಜೆನ್ಸೀಸ್​).