ಕ್ರೀಡೆ

ಕನಸಿನ ಟ್ರೋಫಿ ಗೆಲುವಿಗೆ 9 ವರ್ಷ!: 2011ರಲ್ಲಿ ತವರಿನಲ್ಲೇ ವಿಶ್ವಕಪ್ ವಿಜಯೋತ್ಸವ, ಕೋಟಿ ಹೃದಯ ಗೆದ್ದ ಧೋನಿ ಸಿಕ್ಸರ್

ಇಡೀ ದೇಶವೇ ಈಗ ಲಾಕ್​ಡೌನ್​ನಿಂದಾಗಿ ಸ್ತಬ್ಧಗೊಂಡಿದೆ. ಆದರೆ 9 ವರ್ಷಗಳ ಹಿಂದೆ ಇದೇ ದಿನ ಇಡೀ ದೇಶವೇ ಕುಣಿದು ಸಂಭ್ರಮಿಸಿತ್ತು. 28 ವರ್ಷಗಳ ಕನಸು ತವರು ನೆಲದಲ್ಲೇ ನನಸಾದ ದಿನ. ಹೌದು, ಭಾರತ ತಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್​ನಲ್ಲಿ 2ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಗುರುವಾರಕ್ಕೆ 9 ವರ್ಷ ಪೂರ್ಣಗೊಂಡಿದೆ. 2011ರ ಏಪ್ರಿಲ್ 2ನೇ ತಾರೀಕು ಕೋಟಿ ಕೋಟಿ ಭಾರತೀಯ ಕನಸುಗಳು ರೆಕ್ಕೆ ಬಿಚ್ಚಿ ಹಾರಾಡಿದ ಸುದಿನ. ಕ್ರಿಕೆಟ್ ಇತಿಹಾಸದಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ. ಅಂಥ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಫೈನಲ್ ಪಂದ್ಯದ ಮೆಲುಕು ಇಲ್ಲಿದೆ.

ತಂಡದಲ್ಲಿ ಉಳಿದಿರುವ ಏಕೈಕ ವಿರಾಟ್

2011ರ ವಿಶ್ವಕಪ್ ತಂಡದಲ್ಲಿದ್ದ ಆಟಗಾರರ ಪೈಕಿ ಹಾಲಿ ನಾಯಕ ವಿರಾಟ್ ಕೊಹ್ಲಿ ಇಂದಿಗೂ 3 ಮಾದರಿಯಲ್ಲೂ ಭಾರತ ತಂಡದಲ್ಲಿ ಸಕ್ರಿಯವಾಗಿರುವ ಏಕೈಕ ಆಟಗಾರ. ತೆಂಡುಲ್ಕರ್, ಸೆಹ್ವಾಗ್, ಗಂಭೀರ್, ಯುವರಾಜ್, ಜಹೀರ್ ಖಾನ್, ನೆಹ್ರಾ ನಿವೃತ್ತಿ ಘೊಷಿಸಿದ್ದರೆ, ಸುರೇಶ್ ರೈನಾ, ಹರ್ಭಜನ್, ಪೀಯುಷ್ ಚಾವ್ಲಾ ಕೇವಲ ಐಪಿಎಲ್​ಗೆ ಸೀಮಿತವಾಗಿದ್ದಾರೆ. ಮುನಾಫ್ ಪಟೇಲ್ ಅಧಿಕೃತವಾಗಿ ನಿವೃತ್ತಿ ಹೇಳಬೇಕಿದೆ. ಶ್ರೀಶಾಂತ್ ಫಿಕ್ಸಿಂಗ್ ಪ್ರಕರಣದಿಂದ ನಿಷೇಧ ಶಿಕ್ಷೆಯಲ್ಲಿದ್ದಾರೆ. ಆರ್.ಅಶ್ವಿನ್ ಟೆಸ್ಟ್​ಗೆ ಸೀಮಿತವಾಗಿದ್ದಾರೆ. ಯೂಸುಫ್ ಪಠಾಣ್ ದೇಶೀಯ ಕ್ರಿಕೆಟ್​ನಲ್ಲಷ್ಟೇ ಇದ್ದಾರೆ.

ಟೀಮ್ ಇಂಡಿಯಾಗೆ ಮಾಲಿಂಗ ಶಾಕ್

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್​ಗೆ ಇಳಿದ ಶ್ರೀಲಂಕಾ, ಮಹೇಲ ಜಯವರ್ಧನೆ (103) ಶತಕದ ನೆರವಿನಿಂದ 6 ವಿಕೆಟ್​ಗೆ 274 ರನ್ ಪೇರಿಸಿತ್ತು. ಪ್ರಶಸ್ತಿ ಗೆಲ್ಲಬೇಕೆಂಬ ಒತ್ತಡ, ಸ್ಪರ್ಧಾತ್ಮಕ ಸವಾಲು ಬೆನ್ನಟ್ಟುವ ವಿಶ್ವಾಸದೊಂದಿಗೆ ಇನಿಂಗ್ಸ್ ಆರಂಭಿಸಿದ ಸ್ಟಾರ್ ಆರಂಭಿಕ ಜೋಡಿ ಸಚಿನ್ ತೆಂಡುಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್​ಗೆ ಲಸಿತ್ ಮಾಲಿಂಗ ಶಾಕ್ ನೀಡಿದರು. ಇನಿಂಗ್ಸ್​ನ 2ನೇ ಎಸೆತದಲ್ಲೇ ಸೆಹ್ವಾಗ್ ಎಲ್​ಬಿ ಬಲೆಗೆ ಬಿದ್ದರೆ, ಸಚಿನ್ 18 ರನ್ ಗಳಿಸಿ ಮಾಲಿಂಗ ಎಸೆತದಲ್ಲಿ ಕೀಪರ್ ಸಂಗಕ್ಕರಗೆ ಕ್ಯಾಚ್ ನೀಡಿದರು. ಬಳಿಕ ದೆಹಲಿ ಹುಡುಗರಾದ ಗಂಭೀರ್ ಹಾಗೂ ವಿರಾಟ್ ಕೊಹ್ಲಿ (35) 3ನೇ ವಿಕೆಟ್​ಗೆ 83 ರನ್ ಪೇರಿಸಿ ಚೇತರಿಕೆ ನೀಡಿದರು. ಈ ವೇಳೆ ದುಡುಕಿದ ಕೊಹ್ಲಿ, ದಿಲ್ಶಾನ್ ಹಿಡಿತ ಅದ್ಭುತ ಕ್ಯಾಚ್​ಗೆ ಬಲಿಯಾದರು. 22ನೇ ಓವರ್​ನಲ್ಲಿ 114ರನ್​ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತದ ಹಾದಿ ಕಠಿಣವಾಗಿಯೇ ಇತ್ತು.

2015, 2019ರಲ್ಲಿ ಸೆಮಿಫೈನಲ್​ನಲ್ಲೇ ನಿರಾಸೆ

2011ರ ವಿಶ್ವಕಪ್ ಗೆಲುವಿಗೆ ಮುನ್ನ ಭಾರತ ತಂಡ, 1987 ಮತ್ತು 1996ರಲ್ಲಿ ತವರಿನಲ್ಲೇ ಮುಗ್ಗರಿಸಿದ ನೋವು ಹೊಂದಿತ್ತು. ಬಳಿಕ 2003ರಲ್ಲಿ ಫೈನಲ್​ನಲ್ಲಿ ಎಡವಿತ್ತು. 2007ರಲ್ಲಂತೂ ಅವಮಾನಕರವಾಗಿ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಕೊನೆಗೆ 2011ರಲ್ಲಿ ತವರು ನೆಲದಲ್ಲಿ ಪ್ರಶಸ್ತಿ ಜಯಿಸಿದ ಬಳಿಕ 2015 ಹಾಗೂ 2019ರ ಏಕದಿನ ವಿಶ್ವಕಪ್​ನಲ್ಲಿ ಭಾರತ ಸೆಮಿಫೈನಲ್​ನಲ್ಲೇ ನಿರಾಸೆ ಅನುಭವಿಸಿದೆ. 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ, 2019ರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಶರಣಾಯಿತು. ಉತ್ತಮ ನಿರ್ವಹಣೆ ನಡುವೆಯೂ ಉಪಾಂತ್ಯದಲ್ಲೇ 2 ಬಾರಿಯೂ ಎಡವಿದೆ.

ಗಂಭೀರ್-ಧೋನಿ ಅಮೂಲ್ಯ ಜತೆಯಾಟ

ಯುವರಾಜ್ ಬದಲಿಗೆ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಕ್ರೀಸ್​ಗಿಳಿದ ನಾಯಕ ಧೋನಿ, ಗಂಭೀರ್ ಜತೆಗೂಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆತಂಕದಲ್ಲಿದ್ದ ಕೋಟ್ಯಂತರ ಅಭಿಮಾನಿಗಳ ಪಾಲಿಗೆ ಆರಾಧ್ಯದೈವವಾದರು. ಈ ಜೋಡಿ 4ನೇ ವಿಕೆಟ್​ಗೆ 109 ರನ್ ಪೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು. ದುರಾದೃಷ್ಟವಶಾತ್ ಗಂಭೀರ್ (97) ಥಿಸೆರಾ ಪೆರೇರಾ ಎಸೆತದಲ್ಲಿ ಬೌಲ್ಡ್ ಆದರು. ಕೇವಲ 3 ರನ್​ಗಳಿಂದ ಶತಕ ತಪ್ಪಿಸಿಕೊಂಡರು. 6ನೇ ಕ್ರಮಾಂಕದಲ್ಲಿ ಬಂದ ಯುವರಾಜ್ ಸಿಂಗ್ (21*ರನ್, 24 ಎಸೆತ, 2 ಬೌಂಡರಿ) ಹಾಗೂ ಧೋನಿ ಮುರಿಯದ 5ನೇ ವಿಕೆಟ್​ಗೆ ಬಿರುಸಿನ 54 ರನ್ ಕಲೆಹಾಕಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮರೆಯಲಾಗದ ಧೋನಿ ವಿನ್ನಿಂಗ್ ಸಿಕ್ಸರ್

ಯುವಿ-ಧೋನಿ ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ ಭಾರತ ಸುಲಭ ಗೆಲುವಿನತ್ತ ಸಾಗಿತು. ಈ ಜೋಡಿಯ ಹೋರಾಟದ ಫಲವಾಗಿ ಭಾರತಕ್ಕೆ ಗೆಲ್ಲಲು 11 ಎಸೆತಗಳಲ್ಲಿ 4 ರನ್ ಅವಶ್ಯಕತೆಯಿದ್ದ ವೇಳೆ ನಾಯಕ ಎಂಎಸ್ ಧೋನಿ ಲಾಂಗ್​ಆನ್​ನತ್ತ ಜಯದ ಸಿಕ್ಸರ್ ಸಿಡಿಸಿದರು. ಸುಮಾರು 3 ದಶಕಗಳಿಂದ ಕಾಯುತ್ತಿದ್ದ ಕೋಟಿ ಕೋಟಿ ಅಭಿಮಾನಿಗಳ ಪಾಲಿಗೆ ಹೀರೋ ಆದರು. ಅಜೇಯ 91 ರನ್​ಗಳಿಸಿದ ಧೋನಿ ಟೂರ್ನಿಯಲ್ಲಿ ತಮ್ಮ ವೈಯಕ್ತಿಕ ಅಧಿಕ ಮೊತ್ತ ದಾಖಲಿಸಿರುವುದರ ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಭಾರತ 6 ವಿಕೆಟ್​ಗಳಿಂದ ಜಯದ ನಗೆ ಬೀರಿದ ಕ್ಷಣ ಧೋನಿ-ಯುವಿ ತಬ್ಬಿಕೊಂಡು ಸಂಭ್ರಮಿಸಿದರು.

ಸೆಮೀಸ್​ನಲ್ಲಿ ಪಾಕ್ ಎದುರು ವಿಕ್ರಮ

ವಿಶ್ವ ಕ್ರಿಕೆಟ್​ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುದಿನ ಕದನ ಇಲ್ಲೂ ಮುಂದುವರಿದಿತ್ತು. 2007ರಲ್ಲಿ ಎರಡೂ ತಂಡಗಳು ಲೀಗ್ ಹಂತದಲ್ಲೇ ಮುಗ್ಗರಿಸಿದ್ದ ಹಿನ್ನೆಲೆಯಲ್ಲಿ ಎದುರಾಗಲು ಸಾಧ್ಯವಾಗಿರಲಿಲ್ಲ. ಪಂಜಾಬ್​ನ ಮೊಹಾಲಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಕ್ಕೆ ಭಾರತ ಹಾಗೂ ಪಾಕ್​ನ ಅಂದಿನ ಪ್ರಧಾನ ಮಂತ್ರಿಗಳಿಬ್ಬರು ಸಾಕ್ಷಿಯಾಗಿದ್ದರು. ಈ ಪಂದ್ಯಕ್ಕಾಗಿ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿತ್ತು. ಇದಕ್ಕೂ ಮೊದಲು ಭಾರತ ಅಹಮದಾಬಾದ್​ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಭಾರತ ಮಣಿಸಿತ್ತು. ಏಕದಿನ ವಿಶ್ವಕಪ್​ನಲ್ಲಿ (1999-2011) ಸತತ 27 ಗೆಲುವಿನ ಬಳಿಕ ಆಸೀಸ್ ಮೊದಲ ಸೋಲು ಕಂಡಿತು.

ತೆಂಡುಲ್ಕರ್​ರನ್ನು ಹೆಗಲಲ್ಲಿ ಹೊತ್ತು ಸಂಭ್ರಮ

ಪ್ರತಿಷ್ಠಿತ ಟ್ರೋಫಿಯನ್ನು ಅಂದಿನ ಐಸಿಸಿ ಚೇರ್ಮನ್ ಶರದ್ ಪವಾರ್ ಭಾರತ ತಂಡದ ನಾಯಕ ಧೋನಿಗೆ ಹಸ್ತಾಂತರಿಸಿದ್ದೇ ತಡ, ಸ್ಟೇಡಿಯಂನಲ್ಲಿ ನೆರೆದಿದ್ದ ಸುಮಾರು 35 ಸಾವಿರ ಪ್ರೇಕ್ಷಕರ ಸಮೂಹ ಒಂದೇ ಉಸಿರಿನಲ್ಲಿ ‘ಇಂಡಿಯಾ...ಇಂಡಿಯಾ..’ ಎಂದು ಕೂಗುವ ಮೂಲಕ ಜಯಘೊಷ ಮೊಳಗಿಸಿತು. ಬಳಿಕ ಹಲವು ಪ್ರಯತ್ನಗಳ ಬಳಿಕ ಕೊನೆಗೂ ವಿಶ್ವಕಪ್ ಗೆಲುವಿನ ಕನಸು ನನಸು ಮಾಡಿಕೊಂಡ ದಿಗ್ಗಜ ಸಚಿನ್ ತೆಂಡುಲ್ಕರ್​ರನ್ನು ಟೀಮ್ ಇಂಡಿಯಾ ಆಟಗಾರರು ಹೆಗಲಮೇಲೆ ಹೊತ್ತು ಇಡೀ ಮೈದಾನ ಸುತ್ತು ಹಾಕಿದ್ದರು. ತಂಡದ ಕೋಚ್ ಆಗಿದ್ದ ಗ್ಯಾರಿ ಕರ್ಸ್ಟನ್​ರನ್ನೂ ಹೆಗಲ ಮೇಲೆ ಹೊತ್ತು ಸುತ್ತಾಡಿದ್ದರು.

ಸ್ಟಾರ್​ನಲ್ಲಿ ಇಂದು ಮರುಪ್ರಸಾರ

ಭಾರತ-ಶ್ರೀಲಂಕಾ ನಡುವಿನ 2011ರ ವಿಶ್ವಕಪ್ ಫೈನಲ್ ಪಂದ್ಯ ಗುರುವಾರ ಸ್ಟಾರ್ ಸ್ಟೋರ್ಟ್ಸ್ ನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಮರುಪ್ರಸಾರವಾಗಲಿದೆ. ಬಳಿಕ ರಾತ್ರಿ 9.30ರಿಂದ ಪಂದ್ಯದ ಹೈಲೈಟ್ಸ್ ಪ್ರಸಾರವಾಗಲಿದೆ.