ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭರ್ಜರಿ ರನ್ಮಳೆ ಸುರಿದಿರುವ ಭಾರತ ಮತ್ತು ಪ್ರವಾಸಿ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯ ನಿರ್ಣಾಯಕ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಮಳೆ ಭೀತಿಯ ನಡುವೆ ಉದ್ಯಾನನಗರಿಯ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ. ಚುಟುಕು ಕ್ರಿಕೆಟ್ ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಹಾಲಿ ಸರಣಿಯಲ್ಲಿ ವಿಂಡೀಸ್ ತಂಡ ನಿರೀಕ್ಷೆಗಿಂತ ಅಧಿಕ ನಿಕಟ ಪ್ರತಿಸ್ಪರ್ಧೆಯೊಡ್ಡಿದ್ದು, 2-2 ಸಮಬಲ ಸಾಧಿಸಿದೆ. ಹೀಗಾಗಿ ನಿರ್ಣಾಯಕ ಪಂದ್ಯದಲ್ಲಿ ಸರಣಿ ವಶಪಡಿಸಿಕೊಳ್ಳಲು ಶ್ರೇಯಸ್ ಅಯ್ಯರ್ ಪಡೆ ತನ್ನ ಪೂರ್ಣ ಸಾಮರ್ಥ್ಯದ ನಿರ್ವಹಣೆ ತೋರುವುದು ಅಗತ್ಯವಾಗಿದೆ. ಕಳೆದ ವರ್ಷದ ಕಾಲ್ತುಳಿತ ದುರಂತದ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವೊಂದಕ್ಕೆ ಆತಿಥ್ಯ ವಹಿಸಿಕೊಳ್ಳುತ್ತಿದೆ.
ಹೈದರಾಬಾದ್ನಲ್ಲಿ ವಿಂಡೀಸ್ಗೆ ಬೃಹತ್ ಮೊತ್ತ ಬಿಟ್ಟುಕೊಟ್ಟಿದ್ದ ಭಾರತ, ಚೇಸಿಂಗ್ನಲ್ಲಿ ಎಡವಿತ್ತು. ಸಂಜು ಸ್ಯಾಮ್ಸನ್-ಅಭಿಷೇಕ್ ಶರ್ಮ ವೈಯಕ್ತಿಕವಾಗಿ ಹೆಚ್ಚಿನ ರನ್ ಗಳಿಸುತ್ತಿದ್ದರೂ, ಜೋಡಿಯಾಗಿ ದೊಡ್ಡ ಜತೆಯಾಟದ ಆರಂಭ ಒದಗಿಸಲು ಶಕ್ತರಾಗಿಲ್ಲ. ಇಶಾನ್ ಕಿಶನ್, ನಾಯಕ ಶ್ರೇಯಸ್ ಅಯ್ಯರ್, ಉಪನಾಯಕ ತಿಲಕ್ ವರ್ಮ ಸ್ಥಿರ ನಿರ್ವಹಣೆ ತೋರಬೇಕಿದ್ದರೆ, ನಮನ್ ಧೀರ್ ಬ್ಯಾಟಿಂಗ್ನಲ್ಲೂ ಮಿಂಚಬೇಕಿದೆ. ಚಿನ್ನಸ್ವಾಮಿ ಸ್ಟೇಡಿಯಂ ಸಾಂಪ್ರದಾಯಿಕವಾಗಿ ಬ್ಯಾಟಿಂಗ್ ಸ್ನೇಹಿ ಎನಿಸಿದ್ದು, ಭಾರತದ ಬೌಲರ್ಗಳಿಗೆ ಇದು ಮತ್ತಷ್ಟು ಸವಾಲೊಡ್ಡಲಿದೆ. ಅನನುಭವಿ ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಸೇರ್ಪಡೆ ಬಲ ತುಂಬುವ ನಿರೀೆ ಇದೆ. ಎದುರಾಳಿ ನಾಯಕ ಶೈ ಹೋಪ್ ಮತ್ತು ಶೆಾರ್ನ್ ರುದರ್ಫೋರ್ಡ್ ಜತೆಗೆ ಆರ್ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್ಗೆ ಭಾರತೀಯ ಬೌಲರ್ಸ್ ಕಡಿವಾಣ ಹಾಕಿದರೆ ಅರ್ಧ ಪಂದ್ಯ ಗೆದ್ದಂತೆ ಆಗಲಿದೆ.
ಟೀಮ್ ನ್ಯೂಸ್
ಭಾರತ: ಅರ್ಷದೀಪ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಇದು ಭಾರತಕ್ಕೆ ಚಿಂತೆಯ ವಿಷಯವಲ್ಲ. ಯಾಕೆಂದರೆ ಅನುಭವಿ ವೇಗಿ ಭುವನೇಶ್ವರ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭುವಿ 2012ರಲ್ಲಿ ಬೆಂಗಳೂರಿನಲ್ಲೇ ಟಿ20 ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇದೀಗ ಅವರ ಪುನರಾಗಮನವೂ ಬೆಂಗಳೂರಿನಲ್ಲೇ ಆದರೆ ವಿಶೇಷವಾಗಿರಲಿದೆ. ಉಳಿದಂತೆ ಭಾರತ ತಂಡದಲ್ಲಿ ಬೇರಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.
ವೆಸ್ಟ್ ಇಂಡೀಸ್: ಸತತ ವೈಫಲ್ಯ ಕಾಣುತ್ತಿದ್ದ ಕಮಿಲಿ ಪೂರನ್ ಬದಲಿಗೆ ಜೆವೆಲ್ ಆಂಡ್ರ್ಯೋ ಕಣಕ್ಕಿಳಿಸಿದ ವಿಂಡೀಸ್ ತಂಡದ ನಡೆ ಕಳೆದ ಪಂದ್ಯದಲ್ಲಿ ಯಶಸ್ಸು ಕಂಡಿತ್ತು. ರೊಮಾರಿಯೊ ಶೆರ್ಡ್ ಕೂಡ ಗಾಯದಿಂದ ಚೇತರಿಸಿಕೊಂಡು ಮರಳಿದ್ದು ಬಲ ಹೆಚ್ಚಿಸಿತ್ತು. ಹೀಗಾಗಿ ವಿಂಡೀಸ್ ಗೆಲುವಿನ ಕಾಂಬಿನೇಷನ್ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್
ಅರ್ಷದೀಪ್ಗೆ ಗಾಯ, ಭುವನೇಶ್ವರ್ಗೆ ಸ್ಥಾನ
ಮುಂಬರುವ ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಇದೀಗ ಅದಕ್ಕೆ ಮೊದಲೇ ವೆಸ್ಟ್ ಇಂಡೀಸ್ ವಿರುದ್ಧದ 5ನೇ ಹಾಗೂ ಕೊನೇ ಪಂದ್ಯಕ್ಕೂ ಸೇರ್ಪಡೆಯಾಗಿದ್ದಾರೆ. ಎಡಗೈ ವೇಗಿ ಅರ್ಷದೀಪ್ ಸಿಂಗ್ ಭುಜ ನೋವಿನಿಂದ ಬಳಲುತ್ತಿರುವುದು ಇದಕ್ಕೆ ಕಾರಣವಾಗಿದೆ. ಅರ್ಷದೀಪ್ 4ನೇ ಟಿ20 ಪಂದ್ಯದ ವೇಳೆ ಈ ಗಾಯಕ್ಕೊಳಗಾಗಿದ್ದು, ಕೊನೇ ಟಿ20ಗೆ ಫಿಟ್ ಆಗುವುದು ಅನುಮಾನವೆನಿಸಿದೆ. ಅವರ ಬೌಲಿಂಗ್ ಮಾಡುವ ಭುಜಕ್ಕೇ ಗಾಯವಾಗಿರುವುದರಿಂದ ಚೇತರಿಕೆಗೆ ಕನಿಷ್ಠ 3 ವಾರ ಬೇಕಾಗಬಹುದು ಎನ್ನಲಾಗಿದೆ. ಹೀಗಾಗಿ 36 ವರ್ಷದ ಭುವಿ ಕಿವೀಸ್ ಪ್ರವಾಸಕ್ಕೆ ಮುನ್ನ ಬೆಂಗಳೂರಿನಲ್ಲೇ ಭಾರತ ತಂಡವನ್ನು ಕೂಡಿಕೊಂಡಿದ್ದಾರೆ. ಭುವಿ 4 ವರ್ಷಗಳ ಭಾರತ ತಂಡಕ್ಕೆ ಮರಳಿದ್ದಾರೆ. 2022ರ ನ.22ಕ್ಕೆ ನೇಪಿಯರ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಕೊನೆಯದಾಗಿ ಭಾರತ ಪರ ಟಿ20 ಪಂದ್ಯ ಆಡಿದ್ದರು. ಭಾರತ ಪರ 87 ಟಿ20ಯಲ್ಲಿ 90 ವಿಕೆಟ್ ಕಬಳಿಸಿರುವ ಭುವಿ, ಬೆಂಗಳೂರಿನಲ್ಲಿ ಆರ್ಸಿಬಿ ಪರವಾಗಿಯೂ ಹೆಚ್ಚಿನ ಪಂದ್ಯ ಆಡಿರುವ ಅನುಭವ ಹೊಂದಿರುವುದು ಕೂಡ ಭಾರತಕ್ಕೆ ಲಾಭದಾಯಕವೆನಿಸಿದೆ. ಸದ್ಯ ಬೆಂಗಳೂರಿನ ಮೋಡ ಕವಿದ ವಾತಾವರಣದಲ್ಲಿ "ಸ್ವಿಂಗ್ ಕಿಂಗ್' ಇನ್ನಷ್ಟು ಹೆಚ್ಚು ಪರಿಣಾಮಕಾರಿ ಆಗುವ ನಿರೀಕ್ಷೆ ಇದೆ.
2 ವರ್ಷಗಳ ಬಳಿಕ ಬೆಂಗಳೂರಲಿ...
ಕಳೆದ ವರ್ಷ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ ಚಿನ್ನಸ್ವಾಮಿ ಸ್ಟೇಡಿಯಂ ಭಾರತ ತಂಡದ ಕಳೆದ ಸಾಲಿನ ತವರು ಋತುವಿನ ವೇಳೆ ಪಂದ್ಯ ಆತಿಥ್ಯದ ಅವಕಾಶದಿಂದ ವಂಚಿತವಾಗಿತ್ತು. ಇದೀಗ ಕೊನೆಗೂ 2 ವರ್ಷಗಳ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದರ ಆತಿಥ್ಯಕ್ಕೆ ಸಜ್ಜಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನ ಜನಸಂದಣಿ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಗಳ ಅಭಿವೃದ್ಧಿಯ ಬಳಿಕ ಹಾಲಿ ವರ್ಷ ಐಪಿಎಲ್ ವೇಳೆ ಆರ್ಸಿಬಿ ಮತ್ತೆ ಆಡಿತ್ತು. ಆದರೆ ಭಾರತ ತಂಡ, 2024ರ ಅಕ್ಟೋಬರ್ನಲ್ಲಿ (16-20) ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಇದೇ ಮೊದಲ ಬಾರಿ ಬೆಂಗಳೂರಿನಲ್ಲಿ ಪಂದ್ಯ ಆಡಲಿದೆ. 2024ರ ಜನವರಿ 17ಕ್ಕೆ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಕೊನೇ ಟಿ20 ಪಂದ್ಯ ಆಡಿತ್ತು.
*8: ಭಾರತ ತಂಡ ಬೆಂಗಳೂರಿನಲ್ಲಿ ಈ ಹಿಂದೆ ಆಡಿರುವ 8 ಟಿ20 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 3ರಲ್ಲಿ ಸೋತಿದ್ದರೆ, 1 ರದ್ದಾಗಿದೆ. ವಿಂಡೀಸ್ 2016ರ ಟಿ20 ವಿಶ್ವಕಪ್ನಲ್ಲಿ ಲಂಕಾ ವಿರುದ್ಧ ಇಲ್ಲಿ ಆಡಿತ್ತು. ಬೆಂಗಳೂರಿನಲ್ಲಿ ಭಾರತದ ವಿರುದ್ಧ ವಿಂಡೀಸ್ಗೆ ಇದು ಮೊದಲ ಟಿ20 ಆಗಿದೆ.
ಪಿಚ್ ವರದಿಯಲಿ...
ಸರಣಿಯ ಕಳೆದ 3 ಪಂದ್ಯಗಳಲ್ಲಿ ಉಭಯ ತಂಡಗಳೂ 200 ಪ್ಲಸ್ ಮೊತ್ತ ಕಲೆಹಾಕಿದ್ದು, ಬೆಂಗಳೂರಿನಲ್ಲೂ ರನ್ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಯಾಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಈಗಾಗಲೆ ಬ್ಯಾಟಿಂಗ್ ಸ್ವರ್ಗವಾಗಿ ಗುರುತಿಸಲ್ಪಟ್ಟಿದೆ. ಆದರೆ ಕಳೆದ 2 ದಿನಗಳಿಂದ ಉದ್ಯಾನನಗರದಲ್ಲಿ ಮಳೆಯಾಗುತ್ತಿರುವುದು ಪಿಚ್ ವರ್ತನೆಯಲ್ಲಿ ಬದಲಾವಣೆ ತಂದರೆ ಅಚ್ಚರಿ ಇಲ್ಲ. ಪಿಚ್ ಹೆಚ್ಚಿನ ಸಮಯ ಹೊದಿಕೆಯಿಂದ ಮುಚ್ಚಿರಲ್ಪಟ್ಟಿರುವ ಕಾರಣ, ಹೆಚ್ಚಿನ ತೇವಾಂಶದಿಂದಾಗಿ ವೇಗಿಗಳಿಗೆ ಹೆಚ್ಚಿನ ನೆರವು ಒದಗಿಸುವ ಸಾಧ್ಯತೆಯೂ ಇದೆ. ಇದು ಬ್ಯಾಟರ್ಗಳ ಅಬ್ಬರಕ್ಕೆ ಕಡಿವಾಣ ಹೇರಲಿದೆ. ಟಾಸ್ ಮತ್ತೊಮ್ಮೆ ನಿರ್ಣಾಯಕ ಪಾತ್ರವಹಿಸಲಿದೆ.
ಮಳೆ ಭೀತಿಯಲಿ...
ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ಮಳೆಯಾಗಿದ್ದು, ಶನಿವಾರವೂ ಮಳೆ ಮುಂದುವರಿಯುವ ನಿರೀಕ್ಷೆ ಹೆಚ್ಚಿದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಶನಿವಾರ ಸಂಜೆ ಮತ್ತು ರಾತ್ರಿಯೇ ಮಳೆಯಾಗುವ ಸಾಧ್ಯತೆ ಶೇ.55ರಿಂದ 75ರಷ್ಟಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆ ಹೆಚ್ಚಿದೆ. ಆದರೆ, ಓವರ್ ಕಡಿತಗೊಂಡರೂ, ಲಿತಾಂಶ ಬಾರದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮಳೆ ಭೀತಿಯಿಂದಾಗಿ ಪ್ರೇಕ್ಷಕರ ಉತ್ಸಾಹವೂ ಕುಗ್ಗಿದ್ದು, ಶುಕ್ರವಾರದವರೆಗೂ ಟಿಕೆಟ್ಗಳು ಸಂಪೂರ್ಣ ಮಾರಾಟವಾಗಿಲ್ಲ.
*98: ಸರಣಿಯಲ್ಲಿ ಇದುವರೆಗೆ 98 ಸಿಕ್ಸರ್ಗಳು ಸಿಡಿದಿದ್ದು, ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ನಡುವಿನ ದ್ವಿಪಯ ಸರಣಿಯಲ್ಲಿ 120 ಸಿಕ್ಸರ್ ಸಿಡಿದಿರುವುದು ಹಾಲಿ ದಾಖಲೆ. ಇದನ್ನು ಮುರಿಯಲು ಬೆಂಗಳೂರಿನಲ್ಲಿ 23 ಸಿಕ್ಸರ್ ಬರಬೇಕಿದೆ.
24 ವರ್ಷಗಳ ಭದ್ರಕೋಟೆ ಕಾಯ್ದುಕೊಳ್ಳುವ ತವಕದಲಿ
ಭಾರತ ತಂಡ ಕಳೆದ 24 ವರ್ಷಗಳಿಂದ ವಿಂಡೀಸ್ ವಿರುದ್ಧ ತವರಿನಲ್ಲಿ ಯಾವ ಮಾದರಿಯ ಸರಣಿಯಲ್ಲೂ ಸೋಲದ ಬಲಿಷ್ಠ ದಾಖಲೆ ಹೊಂದಿದೆ. 2002ರಲ್ಲಿ ಕೊನೆಯದಾಗಿ ವಿಂಡೀಸ್ ತಂಡ ಭಾರತದಲ್ಲಿ ಕಾರ್ಲ್ ಹೂಪರ್ ಸಾರಥ್ಯದಲ್ಲಿ ಏಕದಿನ ಸರಣಿ ಗೆದ್ದಿತ್ತು. ನಂತರದ ಎಲ್ಲ ಸರಣಿಗಳಲ್ಲೂ ಭಾರತವೇ ಗೆದ್ದಿದೆ.