ಹ್ಯಾಮಿಲ್ಟನ್: ಕ್ಲೀನ್ಸ್ವೀಪ್ ಸಾಧಿಸುವ ಕನಸು ಆಕ್ಲೆಂಡ್ನಲ್ಲಿ ಭಗ್ನಗೊಂಡ ಬಳಿಕ ಭಾರತ ತಂಡ ಮತ್ತೆ ಗೆಲುವಿನ ಹಾದಿಗೆ ಮರಳಿ ಟಿ20 ಸರಣಿಯನ್ನು ಸಂಭ್ರಮದಿಂದ ಕೊನೆಗೊಳಿಸುವ ಹಂಬಲದಲ್ಲಿದೆ. ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ 5ನೇ ಹಾಗೂ ಅಂತಿಮ ಟಿ20 ಪಂದ್ಯ ಭಾನುವಾರ ಸೆಡ್ಡನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಶ್ರೇಯಸ್ ಅಯ್ಯರ್ ಪಡೆ ಗೆಲುವಿನ ಹಾದಿಗೆ ಮರಳಿ ಸರಣಿ ಗೆಲುವಿನ ಅಂತರವನ್ನು 4-1ಕ್ಕೆ ಏರಿಸಿಕೊಳ್ಳುವ ಅವಕಾಶ ಹೊಂದಿದೆ. ಈ ಗೆಲುವು ಭಾರತಕ್ಕೆ ಏಕದಿನ ಸರಣಿಗೆ ಮುನ್ನ ಆತ್ಮವಿಶ್ವಾಸವನ್ನೂ ತುಂಬಲಿದೆ.
ಸರಣಿ ಗೆಲುವಿನ ಬಳಿಕ ತುಸು ರಿಲ್ಯಾಕ್ಸ್ ಆದಂತಿರುವ ಭಾರತ ತಂಡ 4ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ನಿರಾಶಾದಾಯಕ ನಿರ್ವಹಣೆ ತೋರಿತ್ತು. ಮತ್ತೊಂದೆಡೆ ನ್ಯೂಜಿಲೆಂಡ್ ತಂಡ ಎರಡೂ ವಿಭಾಗಗಳಲ್ಲಿ ಪುಟಿದೆದ್ದಿತ್ತು. ಗ್ಲೆನ್ ಫಿಲಿಪ್ಸ್ ಹಾಲಿ ಸರಣಿಯಲ್ಲಿ ಭಾರತದ ಪಾಲಿಗೆ ಕಂಟಕ ಎನಿಸಿದ್ದು, ಅವರಿಗೆ ಕಡಿವಾಣ ಹೇರಬೇಕಾದ ಅಗತ್ಯವಿದೆ.
ಟೀಮ್ ನ್ಯೂಸ್:
ಭಾರತ: ಆಕ್ಲೆಂಡ್ನಲ್ಲಿ ಬೃಹತ್ ಮೊತ್ತದ ಚೇಸಿಂಗ್ ವೇಳೆ ಭಾರತ ತಂಡ ವೈಭವ್ ಸೂರ್ಯವಂಶಿ ಅವರನ್ನು ಮಿಸ್ ಮಾಡಿಕೊಂಡಿತ್ತು. ಇಶಾನ್ ಕಿಶನ್ ಫಿಟ್ ಆಗಿ ಮರಳಿದ್ದರಿಂದ ವೈಭವ್ ಹೊರಬಿದ್ದಿದ್ದರು. ಇದೀಗ ಅಂತಿಮ ಪಂದ್ಯಕ್ಕೆ ಮತ್ತೆ ಅವರು ತಂಡಕ್ಕೆ ಮರಳಿದರೆ, ಸಂಜು ಸ್ಯಾಮ್ಸನ್ ಹೊರಬೀಳುವ ಸಾಧ್ಯತೆ ಇದೆ. ನಿತೀಶ್ ರೆಡ್ಡಿಗೆ ವಿಶ್ರಾಂತಿ ನೀಡಿದರೆ, ಶಿವಂ ದುಬೆ ಕಣಕ್ಕಿಳಿಯಬಹುದು. ಪ್ರಿನ್ಸ್ ಯಾದವ್ ಬದಲಿಗೆ ಭುವನೇಶ್ವರ್ ಮತ್ತೆ ಮರಳುವ ಸಾಧ್ಯತೆಯೂ ಇದೆ.
ನ್ಯೂಜಿಲೆಂಡ್: ಗಾಯದ ಸಮಸ್ಯೆಯಿಂದಾಗಿ ನ್ಯೂಜಿಲೆಂಡ್ ತಂಡದ ಆಡುವ 11ರ ಬಳಗ ಸರಣಿಯಲ್ಲಿ ಬದಲಾಗುತ್ತಲೇ ಬಂದಿದೆ. ಇದೀಗ ಭಾರತ ವಿರುದ್ಧ ತವರಿನಲ್ಲಿ 10 ಟಿ20 ಪಂದ್ಯಗಳ ಬಳಿಕ ಗೆಲುವಿನ ಹಾದಿಗೆ ಮರಳಿರುವ ನ್ಯೂಜಿಲೆಂಡ್ ಅದೇ ಕಾಂಬಿನೇಷನ್ ಉಳಿಸಿಕೊಳ್ಳುವ ನಿರೀಕ್ಷೆ ಇದೆ.
*ಆರಂಭ: ಮಧ್ಯಾಹ್ನ 12.30
*ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್.
ಬೌಲಿಂಗ್ ವಿಭಾಗದ ಚಿಂತೆ
ಸರಣಿಯ ಮೊದಲ 3 ಪಂದ್ಯಗಳಲ್ಲೂ ಭಾರತದ ಬೌಲಿಂಗ್ ನಿರ್ವಹಣೆ ಸಾಧಾರಣವಾಗಿತ್ತು. ಆದರೆ ಬ್ಯಾಟಿಂಗ್ ವಿಭಾಗದ ಭರ್ಜರಿ ಚೇಸಿಂಗ್ನಿಂದಾಗಿ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ 4ನೇ ಟಿ20 ಪಂದ್ಯದಲ್ಲಿ ಬೃಹತ್ ಮೊತ್ತ ಬಿಟ್ಟುಕೊಟ್ಟು ಪರಾಭವಗೊಂಡ ಬಳಿಕ ಭಾರತ ತಂಡದ ಬೌಲಿಂಗ್ ವಿಭಾಗದ ಸಮಸ್ಯೆ ದೊಡ್ಡದಾಗಿ ಕಾಣಿಸುತ್ತಿದೆ. ನಿಜಕ್ಕಾದರೆ ಭಾರತದ ಬೌಲಿಂಗ್ ವಿಭಾಗದ ದೌರ್ಬಲ್ಯ ಕಳೆದ ತವರಿನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲೂ ಎದ್ದುಕಂಡಿತ್ತು. ಆಗ ವಿಂಡೀಸ್ ಬ್ಯಾಟರ್ಗಳು ಸರಾಗವಾಗಿ ರನ್ಪ್ರವಾಹ ಹರಿಸಿದ್ದರು. ಕಿವೀಸ್ ಪ್ರವಾಸದ ಸರಣಿಗೆ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸೇರ್ಪಡೆಯಿಂದ ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಲಭಿಸುವ ನಿರೀೆ ಇಡಲಾಗಿತ್ತು. ಆದರೆ ಇದು ಹುಸಿಯಾಗಿದ್ದು, ಮೊದಲ 3 ಪಂದ್ಯಗಳ ದುಬಾರಿ ಬೌಲಿಂಗ್ ಬಳಿಕ ಭುವಿ 4ನೇ ಪಂದ್ಯದಿಂದ ಹೊರಬಿದ್ದಿದ್ದರು. ಇದರಿಂದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಮೇಲೆ ಬೌಲಿಂಗ್ ವಿಭಾಗ ಹೆಚ್ಚು ಅವಲಂಬಿತವಾಗಿದೆ. ಕಳೆದ ಪಂದ್ಯದಲ್ಲಿ ಮಯಾಂಕ್ ಯಾದವ್ ಕೂಡ ಉತ್ತಮ ದಾಳಿ ನಡೆಸಿದ್ದರು. ಆದರೆ ಆಲ್ರೌಂಡರ್ಗಳಾದ ನಿತೀಶ್ ರೆಡ್ಡಿ, ನಮನ್ ಧೀರ್ ಮತ್ತು ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ದುಬಾರಿಯಾಗುತ್ತಿದ್ದಾರೆ. ಇದರಿಂದಾಗಿ ಭಾರತ ಈ ಬಾರಿ ತಜ್ಞ ಸ್ಪಿನ್ನರ್ಗಳಾದ ಕುಲದೀಪ್ ಯಾದವ್ ಅಥವಾ ವರುಣ್ ಚಕ್ರವರ್ತಿಗೆ ಮಣೆ ಹಾಕಬಹುದೇ ಎಂಬ ಕುತೂಹಲವಿದೆ.
ಶ್ರೇಯಸ್ ರನ್ಬರ
ತವರಿನ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನಿರ್ವಹಣೆ ಸಮಾಧಾನಕರವಾಗಿಲ್ಲ. ಕಳೆದ 8 ಇನಿಂಗ್ಸ್ಗಳಲ್ಲಿ ಅವರು ಕ್ರಮವಾಗಿ 40, 1, 16, 22, 42, 7, 5, 22 ರನ್ ಗಳಿಸಿದ್ದಾರೆ. ಇದರಿಂದಾಗಿ ತಂಡದ ಕೆಳಕ್ರಮಾಂಕ ಮತ್ತು ಆಲ್ರೌಂಡರ್ಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ಇನ್ನು ಸಂಜು ಸ್ಯಾಮ್ಸನ್ ಕೂಡ ಮೊದಲ ಪಂದ್ಯದ ಬಳಿಕ ಲಯ ತಪ್ಪಿದಂತಿದ್ದಾರೆ. ವೈಭವ್ ಸೂರ್ಯವಂಶಿ ಬದಲಿಗೆ ಸ್ಥಾನ ಪಡೆದ ಇಶಾನ್ ಕಿಶನ್ ಲಯ ಕಂಡುಕೊಳ್ಳಬೇಕಿದೆ. ಉಪನಾಯಕ ತಿಲಕ್ ವರ್ಮ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದಿದ್ದರೂ, ಉಪಯುಕ್ತ ನಿರ್ವಹಣೆಯನ್ನೇ ತೋರುತ್ತಿದ್ದಾರೆ.
ಪಿಚ್ ರಿಪೋರ್ಟ್
ಸೆಡ್ಡನ್ ಪಾರ್ಕ್ ಮೈದಾನವೂ ಹೈಸ್ಕೋರಿಂಗ್ ತಾಣವಾಗಿ ಗುರುತಿಸಲ್ಪಟ್ಟಿದೆ. ಹೀಗಾಗಿ ಸರಣಿಯ ಕೊನೇ ಪಂದ್ಯದಲ್ಲೂ ರನ್ಪ್ರವಾಹ ಮುಂದುವರಿಯುವ ನಿರೀಕ್ಷೆ ಇಡಬಹುದು. ಭಾರತ ಇಲ್ಲಿ ಆಡಿದ ಹಿಂದಿನ 2 ಪಂದ್ಯಗಳಲ್ಲೂ 170 ಪ್ಲಸ್ ಮೊತ್ತ ಪೇರಿಸಿತ್ತು.
*2: ಭಾರತ ತಂಡ ಹ್ಯಾಮಿಲ್ಟನ್ನಲ್ಲಿ ಇದುವರೆಗೆ ಆಡಿರುವ 2 ಟಿ20 ಪಂದ್ಯಗಳಲ್ಲಿ 1ರಲ್ಲಿ ಸೋತು, 1ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ ಇಲ್ಲಿ ಆಡಿರುವ 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆದ್ದು, 3ರಲ್ಲಿ ಸೋತಿದೆ.
ಮೊದಲ 3 ಏಕದಿನಕ್ಕೂ ನಬಿ ಸೇರ್ಪಡೆ
ಜಮ್ಮು-ಕಾಶ್ಮೀರದ ವೇಗಿ ಅಕಿಬ್ ನಬಿ ನ್ಯೂಜಿಲೆಂಡ್ ಪ್ರವಾಸದ ಮೊದಲ 3 ಏಕದಿನ ಪಂದ್ಯಗಳಿಗೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಕನ್ನಡಿಗ ಪ್ರಸಿದ್ಧಕೃಷ್ಣ ಸ್ಥಾನವನ್ನು ಅವರು ತುಂಬಲಿದ್ದಾರೆ. ನಬಿ ಈಗಾಗಲೆ ಸರಣಿಯ ಕೊನೇ 2 ಪಂದ್ಯಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ನವೆಂಬರ್ 4ರಿಂದ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ನಬಿ ಕಳೆದ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧ ಗುವಾಹಟಿಯಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.