ಬೆಂಗಳೂರು: ಭಾರತದ ಮಹಿಳಾ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ ಶನಿವಾರಕ್ಕೆ 50 ವರ್ಷ ಪೂರ್ಣಗೊಂಡಿದೆ. 1976ರ ಅಕ್ಟೋಬರ್ 31ರಿಂದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಭಾರತ ತಂಡ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಆಡಿತ್ತು. ಕನ್ನಡತಿ ಶಾಂತಾ ರಂಗಸ್ವಾಮಿ ಸಾರಥ್ಯದಲ್ಲಿ ಆಡಿದ ಆ ತ್ರಿದಿನ ಪಂದ್ಯದಲ್ಲಿ ಭಾರತ ತಂಡ ಡ್ರಾ ಸಾಧಿಸಿತ್ತು. ಪಂದ್ಯಕ್ಕೆ 22 ಸಾವಿರ ಪ್ರೇಕ್ಷಕರು ಹಾಜರಾಗಿದ್ದರು. ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಶಾಂತಾ ರಂಗಸ್ವಾಮಿ ಸಿಡಿಸಿದ ಸಿಕ್ಸರ್ ಬಿದ್ದ ಸ್ಟ್ಯಾಂಡ್ ಈಗ ಅವರದೇ ಹೆಸರು ಹೊಂದಿರುವುದು ವಿಶೇಷವಾಗಿದೆ.
1934ರಲ್ಲಿ ಆಸ್ಟ್ರೆಲಿಯಾ-ಇಂಗ್ಲೆಂಡ್ ನಡುವೆ ಬ್ರಿಸ್ಬೇನ್ನಲ್ಲಿ ಮಹಿಳೆಯರ ಚೊಚ್ಚಲ ಟೆಸ್ಟ್ ಪಂದ್ಯ ನಡೆದ 42 ವರ್ಷಗಳ ಬಳಿಕ ಭಾರತದ ಮಹಿಳೆಯರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮೊದಲ ದಿನ 78.4 ಓವರ್ಗಳಲ್ಲಿ 274 ರನ್ಗಳಿಗೆ ಆಲೌಟ್ ಆಗಿತ್ತು. ಶುಭಾಂಗಿ ಕುಲಕರ್ಣಿ 48 ರನ್ಗಳಿಗೆ 5 ವಿಕೆಟ್ ಕಬಳಿಸಿದ್ದರು. 2ನೇ ದಿನ ಭಾರತ ತಂಡ ಶೋಭಾ ಪಂಡಿತ್ ಗಳಿಸಿದ 69 ಮತ್ತು ಶಾಂತಾ ರಂಗಸ್ವಾಮಿ ಗಳಿಸಿದ 74 ರನ್ ನೆರವಿನಿಂದ 6 ವಿಕೆಟ್ಗೆ 269 ರನ್ ಗಳಿಸಿತು. ಅಂತಿಮ ದಿನ ಮತ್ತೆ ಇನಿಂಗ್ಸ್ ಮುಂದುವರಿಸದೆ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ವಿಂಡೀಸ್ 2ನೇ ಇನಿಂಗ್ಸ್ನಲ್ಲಿ 64.5 ಓವರ್ಗಳಲ್ಲಿ 7 ವಿಕೆಟ್ಗೆ 175 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರಿಂದ ಗೆಲುವಿಗೆ 181 ರನ್ ಗುರಿ ಪಡೆದ ಭಾರತ, 17 ಓವರ್ಗಳಲ್ಲಿ 1 ವಿಕೆಟ್ಗೆ 30 ರನ್ ಗಳಿಸಿ ಡ್ರಾ ಸಾಧಿಸಿತು.
ಈ ಪಂದ್ಯಕ್ಕೆ ಮುನ್ನ ಭಾರತ 1975ರಲ್ಲಿ ಆಸ್ಟ್ರೆಲಿಯಾ, ನ್ಯೂಜಿಲೆಂಡ್ಗೂ ತೆರಳಿ ತ್ರಿದಿನ ಪಂದ್ಯಗಳನ್ನು ಆಡಿದ್ದರೂ, ಅದಕ್ಕೆ ಅಧಿಕೃತ ಟೆಸ್ಟ್ ಮಾನ್ಯತೆ ನೀಡಲಾಗಿರಲಿಲ್ಲ. ಭಾರತದ ಮಹಿಳೆಯರು ಕಳೆದ 5 ದಶಕಗಳಲ್ಲಿ ಇದುವರೆಗೆ 42 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ, ಮೊದಲ ಪಂದ್ಯ ಈಗಲೂ ಅವಿಸ್ಮರಣೀಯವೆನಿಸಿದೆ.
ಶಾಂತಾಗೆ ರೇಷ್ಮೆ ಸೀರೆ ಗಿಫ್ಟ್!
ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಿದ ಚೊಚ್ಚಲ ಟೆಸ್ಟ್ನಲ್ಲಿ ಶಾಂತಾ ರಂಗಸ್ವಾಮಿ 74 ರನ್ ಗಳಿಸಿದ್ದರು. ಅಲ್ಲದೆ ಅವರು ಸಿಡಿಸಿದ ಸಿಕ್ಸರ್ ಎಲ್ಲರ ಮನಗೆದ್ದಿತ್ತು. ಇದಕ್ಕಾಗಿ ಅವರಿಗೆ ಪಂದ್ಯದ ಬಳಿಕ ರೇಷ್ಮೆ ಸೀರೆ ಉಡುಗೊರೆ ನೀಡಲಾಗಿತ್ತು.