ಕ್ರೀಡೆ

ಕ್ರಿಕೆಟ್​ಗೆ ಆರ್​.ಅಶ್ವಿನ್​ ವಿದಾಯ; ಭಾರತದ ಪರ ಟೆಸ್ಟ್ ಆಡಿದ 5 ಹಿರಿಯ ಕ್ರಿಕೆಟಿಗರು ಇವರೇ ನೋಡಿ | Indian Cricketers

Indian Cricketers: ಇಂದು ದಿ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮಳೆಗೆ ಡ್ರಾ ಆದ ಬೆನ್ನಲ್ಲೇ ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿಯನ್ನು ಘೋಷಿಸಿದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ಕೊನೆಯಲ್ಲಿ ಅಶ್ವಿನ್​ ಅವರು ತಮ್ಮ ನಿರ್ಧಾರಗಳನ್ನು ಮಾಧ್ಯಮದವರ ಮುಂದೆ ಪ್ರಕಟಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದೇ ತಡ ಜಾಲತಾಣಗಳಲ್ಲಿ ಅಶ್ವಿನ್​ ಅವರ ಕೊಡುಗೆಯನ್ನು ಸ್ಮರಿಸಿ, ಮೆಚ್ಚುಗೆ ಸಲ್ಲಿಸಲಾಯಿತು.

ಬ್ರಿಸ್ಬೇನ್​ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದೇ ವೇಳೆ ನಿವೃತ್ತಿ ಘೋಷಣೆ ಮಾಡಿದ ಅಶ್ವಿನ್​, ಪಂದ್ಯದ ನಡುವೆ ಸ್ಟೇಡಿಯಂನಲ್ಲಿ ವಿರಾಟ್​ ಕೊಹ್ಲಿ ಅವರನ್ನು ತಬ್ಬಿಕೊಂಡು ಭಾವುಕರಾದರು. 38ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಅಶ್ವಿನ್​, ತಮ್ಮ ನಿವೃತ್ತಿಗೆ ವಯಸ್ಸು ಕೂಡ ಒಂದು ಕಾರಣ ಎಂಬುದನ್ನು ಒತ್ತಿ ಹೇಳಿದರು. ವರದಿಗಳ ಪ್ರಕಾರ, ಭಾರತದ ಪರ ಟೆಸ್ಟ್ ಕ್ರಿಕೆಟ್​ ಆಡಿದ ಹಿರಿಯ ಆಟಗಾರರ ಪಟ್ಟಿಯಲ್ಲಿ ಐವರು ಭಾರತೀಯ ಕ್ರಿಕೆಟಿಗರು ಮೊದಲ ಐದು ಸ್ಥಾನವನ್ನು ಅಲಂಕರಿಸಿದ್ದಾರೆ. ಯಾರು ಆ ದಿಗ್ಗಜ ಕ್ರಿಕೆಟಿಗರು ಎಂಬ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

1. ವಿನೂ ಮಂಕಡ್ - 41 ವರ್ಷ 305 ದಿನಗಳು

ಹಿರಿಯ ಕ್ರಿಕೆಟಿಗ ವಿನೂ ಮಂಕಡ್ ತಮ್ಮ ಕಾಲದ ಅತ್ಯುತ್ತಮ ಸ್ಪಿನ್ನಿಂಗ್ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿ ಟೀಮ್ ಇಂಡಿಯಾ ಪರ ಮಿಂಚಿದವರು. 1946ರಲ್ಲಿ ತಮ್ಮ 29ನೇ ವಯಸ್ಸಿನಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದರು. 13 ವರ್ಷಗಳ ಕಾಲ ತಂಡವನ್ನು ಪ್ರತಿನಿಧಿಸಿದ ವಿನೂ, ತಮ್ಮ ಕೊನೆಯ ಪಂದ್ಯವನ್ನು 41 ವರ್ಷ ವಯಸ್ಸಿನಲ್ಲಿ ಆಡಿ, ನಿವೃತ್ತಿ ಘೋಷಿಸಿದರು.

2. ಸಿ.ಕೆ.ನಾಯುಡು - 40 ವರ್ಷ 289 ದಿನಗಳು

ಟೀಮ್ ಇಂಡಿಯಾದ ಮೊದಲ ನಾಯಕರಾಗಿ ಆಯ್ಕೆಗೊಂಡಿದ್ದ ದಿಗ್ಗಜ ಕ್ರಿಕೆಟಿಗ ಸಿ.ಕೆ ನಾಯುಡು, 1932ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ನಾಲ್ಕು ವರ್ಷಗಳ ಸುದೀರ್ಘ ವೃತ್ತಿಜೀವನದ ನಂತರ 40 ವರ್ಷ 289 ದಿನಗಳ ವಯಸ್ಸಿನಲ್ಲಿ ಕ್ರಿಕೆಟ್​ಗೆ ಗುಡ್​ಬೈ ಹೇಳಿದರು.

3. ಸಚಿನ್ ತೆಂಡೂಲ್ಕರ್ - 40 ವರ್ಷ 204 ದಿನಗಳು

ಕ್ರಿಕೆಟ್‌ನಲ್ಲಿ ಸುದೀರ್ಘ ವೃತ್ತಿಜೀವನದ ದಾಖಲೆಯನ್ನು ಹೊಂದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್​ ತೆಂಡೂಲ್ಕರ್​, 1989ರಲ್ಲಿ 16ನೇ ವಯಸ್ಸಿನಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್​ ಎಂಟ್ರಿಕೊಟ್ಟರು. 2013ರಲ್ಲಿ ಸಚಿನ್ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು 40ನೇ ವಯಸ್ಸಿನಲ್ಲಿ ತಮ್ಮ ತವರಾದ ವಾಂಖೆಡೆ ಸ್ಟೇಡಿಯಂನಲ್ಲಿ ಆಡಿದರು.

4. ರಾಹುಲ್ ದ್ರಾವಿಡ್ - 39 ವರ್ಷ 13 ದಿನ

ವಿಶ್ವದ ಅತ್ಯುತ್ತಮ ಟೆಸ್ಟ್ ಬ್ಯಾಟರ್‌ಗಳಲ್ಲಿ ಒಬ್ಬರಾದ 'ಗ್ರೇಟ್​ ವಾಲ್​ ಆಫ್​ ಇಂಡಿಯಾ' ಎಂದೇ ಖ್ಯಾತರಾದ ರಾಹುಲ್ ದ್ರಾವಿಡ್ 1996ರಲ್ಲಿ 23ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದರು. ಟೆಸ್ಟ್​ ಕ್ರಿಕೆಟ್​ನಲ್ಲಿ ಅದ್ಭುತ ಬ್ಯಾಟಿಂಗ್​ ಮಾಡುತ್ತಿದ್ದ ದ್ರಾವಿಡ್​, 2012ರಲ್ಲಿ 39ನೇ ವಯಸ್ಸಿನಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದರು.

5. ಎರಪಳ್ಳಿ ಪ್ರಸನ್ನ - 38 ವರ್ಷ 163 ದಿನಗಳು

ಅಂದಿನ ಕಾಲಕ್ಕೆ ಭಾರತದ ಹೆಸರಾಂತ ಸ್ಪಿನ್ನರ್ ಆಗಿದ್ದ ಪ್ರಸನ್ನ ಅವರು 1962ರಲ್ಲಿ 22ನೇ ವಯಸ್ಸಿನಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದರು. 1978ರಲ್ಲಿ 38ನೇ ವಯಸ್ಸಿನಲ್ಲಿ ತಮ್ಮ ಕೊನೆಯ ಟೆಸ್ಟ್​ ಪಂದ್ಯವನ್ನು ಆಡುವ ಮೂಲಕ ಕ್ರಿಕೆಟ್​ಗೆ ಭಾವುಕ ವಿದಾಯ ಹೇಳಿದರು,(ಏಜೆನ್ಸೀಸ್).