ಕ್ರೀಡೆ

ಈ 5 ಭಾರತೀಯ ಸ್ಟಾರ್​ ಕ್ರಿಕೆಟಿಗರಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಿಗೋದು ಬಹುತೇಕ ಡೌಟ್​! ಹೀಗಿದೆ ವರದಿ | Test

ನವದೆಹಲಿ: ಇತ್ತೀಚೆಗಷ್ಟೇ ನ್ಯೂಜಿಲೆಂಡ್​ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್​ ಸರಣಿಯನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ವಿಶ್ವ ಟೆಸ್ಟ್​ ಶ್ರೇಣಿಯ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಕಳೆದುಕೊಂಡಿತು. ದ್ವಿತೀಯ ಸ್ಥಾನಕ್ಕೆ ಕುಸಿದ ಟೀಮ್ ಇಂಡಿಯಾ, ಪ್ರಥಮ ಸ್ಥಾನವನ್ನು ಆಸ್ಟ್ರೇಲಿಯಾಗೆ ಬಿಟ್ಟುಕೊಟ್ಟಿತು. ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ, ಟೆಸ್ಟ್​ ಪಂದ್ಯಗಳನ್ನು (Test Team) ವಶಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ. ಒಂದೆಡೆ ಭಾರತಕ್ಕೆ ಸೋಲಿನ ಜತೆಗೆ ಸ್ಟಾರ್​ ಆಟಗಾರರಾದ ರೋಹಿತ್ ಮತ್ತು ವಿರಾಟ್​ ಕೊಹ್ಲಿಯ ಕಳಪೆ ಪ್ರದರ್ಶನ ತಂಡದ ಮೇಲೆ ದೊಡ್ಡ ಪರಿಣಾಮ ಬೀರಿದೆ.

ಪ್ರಸ್ತುತ ಮುಕ್ತಾಯಗೊಂಡ ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 3-0 ಅಂತರದಲ್ಲಿ ಸೋಲುಂಡಿದ ಟೀಮ್ ಇಂಡಿಯಾ, ಮುಂಬರುವ ಐದು ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗಬೇಕಿದೆ. ಈ ಹಿನ್ನಲೆ ತಂಡದಲ್ಲಿ ಬಲಿಷ್ಠತೆ ಕಾಣಬೇಕಿತ್ತು. ಆದರೆ, ಇದೀಗ ಕಳಪೆ ಪ್ರದರ್ಶನ ತೋರಿದ ಐವರು ಆಟಗಾರರ ಮೇಲೆ ಮ್ಯಾನೇಜ್​ಮೆಂಟ್​ಗೆ ಬೇಸರ ಎದುರಾಗಿದೆ. ಯಾರನ್ನು ತಂಡದಲ್ಲಿ ಆಡಿಸಬೇಕು? ಯಾರನ್ನು ಕೈಬಿಡಬೇಕು ಎಂಬುದು ಸದ್ಯ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಇದೆಲ್ಲದರ ಮಧ್ಯೆ ವರದಿಯೊಂದು, ಟೀಮ್ ಇಂಡಿಯಾದ ಈ ಐವರು ಆಟಗಾರರು ಮುಂಬರುವ ಟೆಸ್ಟ್​ ಸರಣಿಗೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಅನರ್ಹರಾಗಿದ್ದಾರೆ ಎಂದು ತಿಳಿಸಿದೆ.

ವಿರಾಟ್​ ಕೊಹ್ಲಿ

ಒಂದು ಕಾಲದಲ್ಲಿ ಭಾರತದ ಬ್ಯಾಟಿಂಗ್ ಲೈನ್‌ಅಪ್‌ನ ಬೆನ್ನೆಲುಬಾಗಿ ನಿಂತಿದ್ದ ವಿರಾಟ್ ಕೊಹ್ಲಿ, ಇದೀಗ ತಂಡದಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ವಿಶ್ವಾಸಾರ್ಹ ಬ್ಯಾಟರ್ ಮತ್ತು ಮಾಜಿ ಕ್ಯಾಪ್ಟನ್​ ಆಗಿ ಮಿಂಚಿರುವ ವಿರಾಟ್​, ಪ್ರಸ್ತುತ ಕಳಪೆ ಪ್ರದರ್ಶನ ತೋರುತ್ತಿರುವ ಹಿನ್ನಲೆ ಉತ್ತುಂಗದಿಂದ ದೂರವಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಉತ್ತಮ ಪ್ರದರ್ಶನ ತೋರದ ಕೊಹ್ಲಿ, ಕಿವೀಸ್​ ವಿರುದ್ಧದ ಟೆಸ್ಟ್​ನಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಕೊನೆಯ 10 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 245 ರನ್​ಗಳನ್ನು ಮಾತ್ರ ಕಲೆಹಾಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 93 ರನ್‌ ಗಳಿಸಿರುವುದು ಇಲ್ಲಿ ಗಮನಾರ್ಹ.

ರೋಹಿತ್ ಶರ್ಮ

ವೈಟ್-ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮ ಅವರ ಕೊಡುಗೆ ನಿಜಕ್ಕೂ ಪ್ರಶ್ನಾತೀತ ಎಂದೇ ಹೇಳಬಹುದು. ಹೆಡ್​ ಕೋಚ್ ಗೌತಮ್ ಗಂಭೀರ್ ಅವರ ಮುಂದಾಳತ್ವದಲ್ಲಿ ಆಡಿದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್​ ಸರಣಿಯಲ್ಲಿ ಸರಣಿ ಸೋತ ರೋಹಿತ್​, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಇದೇ ರೀತಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿಯೂ ಕ್ಯಾಪ್ಟನ್ ಆಟ ತೋರದ ಶರ್ಮ, ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 91 ರನ್​ ಗಳಿಸಿದ್ದಾರೆ. ಇದು ಅವರ ಕಳಪೆ ಪ್ರದರ್ಶನವನ್ನು ಎತ್ತಿಹಿಡಿದಿದ್ದು, ಮುಂದಿನ ಟೆಸ್ಟ್​ ಸರಣಿಯಲ್ಲಿ ಅವರ ಸ್ಥಾನವನ್ನು ಖಚಿತಪಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕು.

ಮೊಹಮ್ಮದ್​ ಸಿರಾಜ್​

ಟೆಸ್ಟ್ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅವರ ಉಪಸ್ಥಿತಿಯು ಕಳವಳಕ್ಕೆ ಕಾರಣವಾಗಿದೆ. ಟೆಸ್ಟ್ ಸರಣಿಯಲ್ಲಿ ತಮ್ಮ ಇರುವಿಕೆಯನ್ನು ಸಾಬೀತುಪಡಿಸದ ಸಿರಾಜ್​, ವೈಟ್​ ಬಾಲ್​ನಲ್ಲಿ ತೋರುವ ಪ್ರದರ್ಶನವನ್ನು ಇಲ್ಲಿ ಉಳಿಸಿಕೊಳ್ಳುತ್ತಿಲ್ಲ. ತಮ್ಮ ಪ್ರಭಾವಿ ಬೌಲಿಂಗ್​, ಕೋಪಿಷ್ಠ ನಡೆಗೆ ಹೆಚ್ಚು ಹೆಸರುವಾಸಿಯಾಗಿರುವ ಸಿರಾಜ್, ಕಳೆದ ಟೆಸ್ಟ್​ ಮ್ಯಾಚ್​ಗಳಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸುವಲ್ಲಿ ವಿಫರಾಗಿದ್ದಾರೆ. ಇದು ಮುಂದಿನ ಪಂದ್ಯಗಳಲ್ಲಿ ಅವರ ಆಯ್ಕೆಯನ್ನು ಖಚಿತಪಡಿಸುವುದು ಬಹುತೇಕ ಅನುಮಾನ ಎಂದು ವರದಿ ಹೇಳಿದೆ.

ರವಿಚಂದ್ರನ್​ ಅಶ್ವಿನ್​

ಭಾರತದ ಶ್ರೇಷ್ಠ ಸ್ಪಿನ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ರವಿಚಂದ್ರನ್​ ಅಶ್ವಿನ್​ ಇದೀಗ ತಮ್ಮ ಮುಂದಿನ ತಲೆಮಾರಿಗೆ ಸ್ಥಾನವನ್ನು ಪರೋಕ್ಷವಾಗಿ ಬಿಟ್ಟುಕೊಡುವಂತೆ ಕಾಣಿಸುತ್ತಿದೆ. ಇತ್ತೀಚೆಗೆ 500 ವಿಕೆಟ್‌ಗಳು ಮತ್ತು 100 ಟೆಸ್ಟ್ ಪಂದ್ಯಗಳನ್ನು ಪೂರ್ಣಗೊಳಿಸಿರುವ ಅಶ್ವಿನ್​, ಬ್ಯಾಟ್​ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಆರಂಭಿಕ ಬ್ಯಾಟರ್​ಗಳು ಕೈಕೊಟ್ಟರು ಸಹ ತಾವು ಮಾತ್ರ ನಿರೀಕ್ಷೆ ಮೀರಿದ ಪ್ರದರ್ಶನ ಕೊಟ್ಟು, ಕ್ರಿಕೆಟ್​ ಅಭಿಮಾನಿಗಳು ಮೆಚ್ಚುವಂತೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಆದಾಗ್ಯೂ, ಅವರ ದಾಖಲೆಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, 70% ಕ್ಕಿಂತ ಹೆಚ್ಚು ವಿಕೆಟ್‌ಗಳು ತವರು ನೆಲದಲ್ಲಿ ಬಂದಿವೆ. ಇಲ್ಲಿನ ಪಿಚ್‌ಗಳು ಅವರ ಕೌಶಲ್ಯಕ್ಕೆ ಅನುಕೂಲಕರವಾಗಿವೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಆಡಿದಾಗ, ಅಶ್ವಿನ್ ಪ್ರಭಾವವು ಗಮನಾರ್ಹವಾಗಿ ಕಡಿಮೆಯಾಗುತ್ತದೆ ಮತ್ತು ವಿಕೆಟ್​ ಕಬಳಿಸುವ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಕಾಣುತ್ತದೆ ಎಂದು ಹೇಳಲಾಗಿದೆ.

ಸರ್ಫರಾಜ್ ಖಾನ್​

ದೇಶೀಯ ಕ್ರಿಕೆಟ್​ನಲ್ಲಿ ಸರ್ಫರಾಜ್ ಖಾನ್ ದಾಖಲೆಯು ಅತ್ಯುತ್ತಮವಾಗಿದೆ. ಇದುವರೆಗಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರ ಪ್ರದರ್ಶನವು ಸ್ಟ್ರೈಕ್ ಮತ್ತು ಅನಿಯಮಿತವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿಯಲ್ಲಿ 0, 11, 9, 0 ಮತ್ತು 1 ಸ್ಕೋರ್‌ಗಳನ್ನು ಕಲೆಹಾಕಿದ ಖಾನ್​, ಕೇವಲ ಒಂದು ಇನ್ನಿಂಗ್ಸ್​ನಲ್ಲಿ 150 ರನ್​ ಗಳಿಸಿ, ನೋಡುಗರ ಹುಬ್ಬೇರಿಸಿದರು. ಆದರೆ, ಇದೊಂದು ಇನ್ನಿಂಗ್ಸ್​ ಟೆಸ್ಟ್​ ಫಾರ್ಮೆಟ್​ನಲ್ಲಿ ದೊಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ಕ್ರಿಕೆಟ್ ಲೆಕ್ಕಾಚಾರ. ಸದ್ಯದ ಮಟ್ಟಿಗೆ ಈ ಐದು ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುವುದು ಡೌಟ್ ಎಂದೇ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).