ಶ್ರೇಯಸ್​ ಅಯ್ಯರ್​ ಏಜೆನ್ಸಿ
ಕ್ರೀಡೆ

ಇಂದು ಹೈದರಾಬಾದ್​ನಲ್ಲಿ 4ನೇ ಟಿ20: ಸರಣಿ ಗೆಲುವಿನ ತವಕದಲ್ಲಿ ಟೀಮ್​ ಇಂಡಿಯಾ

ಸರಣಿ ಜೀವಂತವಿಡಲು ವಿಂಡೀಸ್​ ಹೋರಾಟ

ಹೈದರಾಬಾದ್​: ಬ್ಯಾಟರ್​ಗಳ ಆರ್ಭಟದ ನಡುವೆ ಕಳೆದ ಪಂದ್ಯದಲ್ಲಿ ಬೌಲರ್​ಗಳಿಂದಲೂ ಸುಧಾರಿತ ನಿರ್ವಹಣೆ ಕಂಡಿರುವ ಭಾರತ ತಂಡ, ಪ್ರವಾಸಿ ವೆಸ್ಟ್​ ಇಂಡೀಸ್​ ವಿರುದ್ಧ ಬುಧವಾರ ನಡೆಯಲಿರುವ 4ನೇ ಟಿ20 ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಈ ಮೂಲಕ ಬೆಂಗಳೂರಿನಲ್ಲಿ ಶನಿವಾರ ನಿಗದಿಯಾಗಿರುವ ಅಂತಿಮ ಪಂದ್ಯಕ್ಕೆ ಮೊದಲೇ ಟಿ20 ಸರಣಿ ವಶಪಡಿಸಿಕೊಳ್ಳುವ ಅವಕಾಶ ಶ್ರೇಯಸ್​ ಅಯ್ಯರ್​ ಬಳಗದ ಮುಂದಿದೆ. ವೆಸ್ಟ್​ ಇಂಡೀಸ್​ ತಂಡ ಸರಣಿ ಜೀವಂತವಿಡಲು ಹೋರಾಡಲಿದೆ.

ಹೈದರಾಬಾದ್​ನಲ್ಲೂ ರನ್​ಮಳೆ ಮುಂದುವರಿಯುವ ನಿರೀಕ್ಷೆ ಇದ್ದು, ಮತ್ತೊಮ್ಮೆ ಬ್ಯಾಟರ್​ಗಳ ನಿರ್ವಹಣೆ ಪ್ರಮುಖ ಪಾತ್ರ ನಿರ್ವಹಿಸಲಿದೆ. ಸಂಜು ಸ್ಯಾಮ್ಸನ್​, ಅಭಿಷೇಕ್​ ವರ್ಮ ಮತ್ತು ಇಶಾನ್​ ಕಿಶನ್​ ಸರಣಿಯಲ್ಲಿ ಭರ್ಜರಿ ಆಟವಾಡುತ್ತಿದ್ದು, ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೂ ಕಳೆದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ಕುಸಿತ ಭಾರತಕ್ಕೆ ನಿರೀತ ಮೊತ್ತ ಕಲೆಹಾಕಲು ಅಡ್ಡಿಯಾಗಿತ್ತು. ನಿತೀಶ್​ ಕುಮಾರ್​ ರೆಡ್ಡಿ, ನಮನ್​ ಧೀರ್​ ಬ್ಯಾಟಿಂಗ್​ನಲ್ಲೂ ಮಿಂಚುವ ಅಗತ್ಯವಿದೆ.

ಮತ್ತೊಂದೆಡೆ ವಿಂಡೀಸ್​ ಕೂಡ ಸರಣಿಯಲ್ಲಿ ಭಾರತಕ್ಕೆ ಬಹುತೇಕ ಸರಿಸಮನಾದ ಬ್ಯಾಟಿಂಗ್​ ಆರ್ಭಟ ಪ್ರದರ್ಶಿಸಿದೆ. ನಾಯಕ ಶೈ ಹೋಪ್​ 182ರ ಸ್ಟ್ರೆ$ಕ್​ ರೇಟ್​ನಲ್ಲಿ 182 ರನ್​ ಸಿಡಿಸಿದ್ದರೆ, ಶೆರ್ಫಾನ್​​ ರುದರ್​ಫೋರ್ಡ್​ 189ರ ಸ್ಟ್ರೆ$ಕ್​ರೇಟ್​ನಲ್ಲಿ 12 ಸಿಕ್ಸರ್​ಗಳ ಸಹಿತ 172 ರನ್​ ಬಾರಿಸಿದ್ದಾರೆ. ಆದರೆ ಸತತ 2 ಬಾರಿಯ ಟಿ20 ವಿಶ್ವ ಚಾಂಪಿಯನ್​ ಭಾರತವನ್ನು ಮಣಿಸಬೇಕಾದರೆ ವಿಂಡೀಸ್​ ಸರ್ವಾಂಗೀಣ ನಿರ್ವಹಣೆ ತೋರುವುದು ಅಗತ್ಯವಾಗಿದೆ.

*3: ಭಾರತ ತಂಡ ಹೈದರಾಬಾದ್​ನಲ್ಲಿ ಇದುವರೆಗೆ ಆಡಿರುವ 3 ಟಿ20 ಪಂದ್ಯಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿದೆ. ವಿಂಡೀಸ್​ 2019ರಲ್ಲಿ ಇಲ್ಲಿ ಆಡಿದ ಟಿ20ಯಲ್ಲಿ ಭಾರತಕ್ಕೆ ಶರಣಾಗಿತ್ತು.

ಟೀಮ್​ ನ್ಯೂಸ್​

ಭಾರತ: ಸ್ಪಿನ್ನರ್​ ಕುಲದೀಪ್​ ಯಾದವ್​ ಬದಲಿಗೆ ಹೆಚ್ಚುವರಿ ವೇಗಿಯಾಗಿ ಪ್ರಿನ್ಸ್​ ಯಾದವ್​ರನ್ನು ಕಣಕ್ಕಿಳಿಸಿದ ಭಾರತದ ನಡೆ ಇಂದೋರ್​ನಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಭಾರತ ಕಳೆದ ಪಂದ್ಯದ ಗೆಲುವಿನ ಕಾಂಬಿನೇಷನ್​ ಅನ್ನೇ ಉಳಿಸಿಕೊಳ್ಳುವ ನಿರೀೆ ಇದೆ.

ವೆಸ್ಟ್​ ಇಂಡೀಸ್​: ರಾಂಚಿಯಲ್ಲಿ ಬೌಲಿಂಗ್​ ವೇಳೆ ಗಾಯಗೊಂಡಿದ್ದ ಆಲ್ರೌಂಡರ್​ ರೊಮಾರಿಯೊ ಶೆರ್ಡ್​ ಕಳೆದ ಪಂದ್ಯ ತಪ್ಪಿಸಿಕೊಂಡಿದ್ದರು. ಈ ಬಾರಿ ಅವರು ಮರಳಿ ಕಣಕ್ಕಿಳಿಯುವ ಬಗ್ಗೆ ಸ್ಪಷ್ಟತೆ ಇಲ್ಲ.

ಆರಂಭ: ರಾತ್ರಿ 7.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಮತ್ತೆ ರನ್​ಮಳೆ ನಿರೀಕ್ಷೆ

ಹಾಲಿ ಸರಣಿಯ ರನ್​ಪ್ರವಾಹ ಹೈದರಾಬಾದ್​ನ ಆರ್​ಜಿಐ ಸ್ಟೇಡಿಯಂನಲ್ಲೂ ಮುಂದುವರಿಯುವ ನಿರೀೆ ಇದೆ. ಐಪಿಎಲ್​ನಲ್ಲಿ ಇಲ್ಲಿ ನಡೆದ ಪಂದ್ಯಗಳಲ್ಲಿ 250 ಪ್ಲಸ್​ ಮೊತ್ತವೂ ಸರಾಗವಾಗಿ ಬಂದ ನಿದರ್ಶನಗಳಿವೆ. ಭಾರತದಲ್ಲಿ ಟಿ20 ಪಂದ್ಯಗಳಲ್ಲಿ ದಾಖಲಾಗಿರುವ ಅಗ್ರ 8 ಮೊತ್ತಗಳಲ್ಲಿ 4 ಇದೇ ಮೈದಾನದಲ್ಲಿ ಬಂದಿವೆ. 2024ರಲ್ಲಿ ಬಾಂಗ್ಲಾ ಎದುರು ಇಲ್ಲಿ ನಡೆದ ಪಂದ್ಯದಲ್ಲಿ ಭಾರತ 300ರ ಸನಿಹ (297/6) ಬಂದಿತ್ತು. ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ತಂಡ ಗೆದ್ದಿದ್ದರೂ, ಇಬ್ಬನಿ ಸಮಸ್ಯೆ ಕಾಡುವ ಸಾಧ್ಯತೆ ಇರುವುದರಿಂದ ಇಲ್ಲಿ ಮತ್ತೊಮ್ಮೆ ಟಾಸ್​ ಗೆದ್ದ ತಂಡ ಫೀಲ್ಡಿಂಗ್​ ಆರಿಸಿಕೊಳ್ಳುವ ಸಾಧ್ಯತೆ ಇದೆ.