ಚೆನ್ನೈ: ಇಂಡಿಯನ್ ಚೆಸ್ ಫೆಡರೇಷನ್ ಮತ್ತು ತಮಿಳುನಾಡು ಸರ್ಕಾರ ಆಯೋಜಿಸಿರುವ 44ನೇ ಚೆಸ್ ಒಲಿಂಪಿಯಾಡ್ನಲ್ಲಿ 'ಯುನೈಟೆಡ್ ಸ್ಟೇಟ್ಸ್' ಚೆಸ್ ತಂಡ ಪಾಲ್ಗೊಂಡಿದ್ದು, ಚೆನ್ನೈನ ಯು.ಎಸ್. ಕಾನ್ಸಲ್ ಜನರಲ್ ಜುಡಿತ್ ರೇವಿನ್ ಸ್ವಾಗತಿಸಿದ್ದಾರೆ.
ಇಂಡಿಯನ್ ಚೆಸ್ ಫೆಡರೇಷನ್ ಮತ್ತು ತಮಿಳುನಾಡು ಸರ್ಕಾರ ಆಯೋಜಿಸಿರುವ ಚೆಸ್ ಒಲಿಂಪಿಯಾಡ್ಗೆ ಜು.28ರಂದು ಚಾಲನೆ ಸಿಗಲಿದ್ದು, ಆ.9ರ ವರೆಗೂ ಪಂದ್ಯ ನಡೆಯಲಿದೆ. ಆಟಗಾರರನ್ನು ಸ್ವಾಗತಿಸಿದ ಯು.ಎಸ್. ಕಾನ್ಸಲ್ ಜನರಲ್, ಕೆಲಕಾಲ ಮಾತುಕತೆ ನಡೆಸಿ ಶುಭಕೋರಿದರು.
ಜುಡಿತ್ ರೇವಿನ್ ಮಾತನಾಡಿ, ಚೆನ್ನೈನಲ್ಲಿನ ಚೆಸ್ ಒಲಿಂಪಿಯಾಡ್ನಲ್ಲಿ ನೀವೆಲ್ಲ ಯುನೈಟೆಡ್ ಸ್ಟೇಟ್ಸ್ ಪ್ರತಿನಿಧಿಸುತ್ತಿರುವುದಕ್ಕೆ ನಾನು ಬಹಳ ಹೆಮ್ಮೆ ಪಡುತ್ತೇನೆ. ಯು.ಎಸ್.(ಯುನೈಟೆಡ್ ಸ್ಟೇಟ್ಸ್) ಮತ್ತು ಭಾರತ ನಡುವಿನ ಆಳವಾದ ಬಾಂಧವ್ಯ ನಿಮ್ಮಂತಹ ಕ್ರೀಡಾ ರಾಜತಾಂತ್ರಿಕರಿಂದ ಜನರಿಂದ ಜನರಿಗೆ ಸಂಪರ್ಕಗಳಿಂದ ಬೆಸೆದುಕೊಂಡಿದೆ. ಯು.ಎಸ್. ಮತ್ತು ಭಾರತ ಬಾಂಧವ್ಯಗಳ 75ನೇ ವಾರ್ಷಿಕೋತ್ಸದ ಸಂದರ್ಭದಲ್ಲಿ ಚೆಸ್ ಒಲಿಂಪಿಯಾಡ್ ಚೆನ್ನೈನಲ್ಲಿ ನಡೆಯುತ್ತಿದೆ. ಇದನ್ನು ನೋಡುವುದೇ ಒಂದು ಸೌಭಾಗ್ಯ ಎಂದರು.
ಮುಕ್ತ ವಿಭಾಗದಲ್ಲಿ ಯು.ಎಸ್. ತಂಡದ ನಾಯಕ ಜಾನ್ ಡೊನಾಲ್ಡ್ಸನ್ ಮಾತನಾಡಿ, ಚೆನ್ನೈನಲ್ಲಿ ನಡೆಯುತ್ತಿರುವ 44ನೇ ಚೆಸ್ ಒಲಿಂಪಿಯಾಡ್ನಲ್ಲಿ ಸ್ಪರ್ಧಿಸುವುದು ಗೌರವದ ವಿಷಯ. ಭಾರತವು ಚೆಸ್ ಜನ್ಮಸ್ಥಾನ ಎಂದು ಹಲವರಿಂದ ಪರಿಗಣಿಸಲ್ಪಟ್ಟಿದೆ. ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಕಾರ್ಯಕ್ರಮ ಇಲ್ಲಿ ನಡೆಯುತ್ತಿರುವುದು ನಿಜಕ್ಕೂ ಸೂಕ್ತವಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಈ ಒಲಿಂಪಿಯಾಡ್ ಆಯೋಜಿಸಲು ಮುಂದೆ ಬಂದ ಇಂಡಿಯನ್ ಚೆಸ್ ಫೆಡರೇಷಸ್ಗೆ ಆಭಾರಿಯಾಗಿದ್ದೇನೆ. ಚೆನ್ನೈನಲ್ಲಿ ಈ ವರ್ಷ ತುರುಸಿನ ಸ್ಪರ್ಧೆಯನ್ನು ನಿರೀಕ್ಷಿಸುತ್ತೇವೆ ಎಂದರು.
ಜಾನ್ ಡೊನಾಲ್ಡ್ಸನ್ ಅವರ ಅಭಿಪ್ರಾಯಗಳನ್ನು ಪುನರುಚ್ಛರಿಸಿದ ಯು.ಎಸ್. ಮಹಿಳಾ ತಂಡದ ನಾಯಕಿ ಮೆಲಿಕ್ಸೆಟ್ ಖಚಿಯನ್, ಮೊಟ್ಟಮೊದಲ ಬಾರಿಗೆ ಒಲಿಂಪಿಯಾಡ್ ಆಯೋಜಿಸಿದ ಭಾರತವನ್ನು ಅಭಿನಂದಿಸಿದರು. ಭಾರತವು ಸದೃಢವಾದ ಚೆಸ್ ಸಂಪ್ರದಾಯಗಳ ದೇಶ. ಐದು ಬಾರಿ ವಿಶ್ವ ಚಾಂಪಿಯನ್ ಆದ ವಿಶ್ವನಾಥನ್ ಆನಂದ್ ಅವರ ದೇಶ ಭಾರತ. ಚೆನ್ನೈ ಕೂಡ ಸುದೀರ್ಘ ಚೆಸ್ ಇತಿಹಾಸ ಹೊಂದಿದೆ. 2013ರಲ್ಲಿ ಚೆನ್ನೈ ವಿಶ್ವನಾಥನ್ ಆನಂದ್- ಮ್ಯಾಗ್ನಸ್ ಕಾರ್ಲ್ಸೆನ್ ನಡುವಿನ ವಿಶ್ವ ಚಾಂಪಿಯನ್ಶಿಪ್ ಪಂದ್ಯವನ್ನು ಮೊಟ್ಟ ಮೊದಲ ಬಾರಿಗೆ ಆಯೋಜಿಸಿತ್ತು. ಭಾರತವು ಇತ್ತೀಚಿನ ದಿನಗಳಲ್ಲಿ ವಿಶ್ವ ಚೆಸ್ನಲ್ಲಿ ಹಲವು ಚೆಸ್ ಸ್ಪರ್ಧೆಗಳನ್ನು ಆಯೋಜಿಸುವಲ್ಲಿ ಮುಂಚೂಣಿಯಲ್ಲಿದೆ. ನಮ್ಮ ಯು.ಎಸ್. ತಂಡವು ಈ ವರ್ಲ್ಡ್ ಚೆಸ್ ಒಲಿಂಪಿಯಾಡ್ನ ಭಾಗವಾಗಲು ಮತ್ತು ಉತ್ತಮ ಪ್ರದರ್ಶನ ನೀಡಲು ಉತ್ಸುಕವಾಗಿದೆ ಎಂದರು.
ಜಾನ್ ಡೊನಾಲ್ಡ್ಸನ್ ಅವರ ನಾಯಕತ್ವದ ಯು.ಎಸ್. ತಂಡವು ಮುಕ್ತ ವಿಭಾಗದ ಸ್ಪರ್ಧೆಯಲ್ಲಿರುವ 187 ತಂಡಗಳಲ್ಲಿ ಮೊದಲ ಸ್ಥಾನದಲ್ಲಿದೆ. ತಂಡದಲ್ಲಿ ಗ್ರಾಂಡ್ಮಾಸ್ಟರ್(ಜಿಎಂ) ಫ್ಯಾಬಿಯನೊ ಕರುಆನಾ, ಜಿಎಂ ಲೇವನ್ ಅರೋನಿಯನ್, ಜಿಎಂ ವೆಸ್ಲೀ ಸೊ, ಜಿಎಂ ಲೀನನಿಯರ್ ಡೊಮಿಂಗ್ಯುಜ್ ಮತ್ತು ಜಿಎಂ ಸ್ಯಾಮ್ ಶಂಕ್ಲಾಂಡ್ ಇದ್ದಾರೆ. ಜಿಎಂ ರಾಬರ್ಟ್ ಹೆಸ್ ಈ ತಂಡದ ತರಬೇತುದಾರ.
ಮಹಿಳಾ ವಿಭಾಗದಲ್ಲಿ ಮೆಲಿಕ್ಸೆಟ್ ಖಚಿಯನ್ ಅವರ ನೇತೃತ್ವ ಹೊಂದಿರುವ ಯು.ಎಸ್. ತಂಡವು ನಾಯಕಿ 162 ತಂಡಗಳಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಜಿಎಂ ಐರಿನಾ ಕ್ರಶ್, ಐಎಂ ಕ್ಯಾರಿಸ್ಸಾ ಯಿಪ್, ಐಎಂ ಅನ್ನಾ ಜಟೋನ್ಸ್ಕಿಹ್, ವಿಮೆನ್ ಗ್ರಾಂಡ್ಮಾಸ್ಟರ್ ತತೆವ್, ಅಬ್ರಹಮ್ಯಂ ಮತ್ತು ಡಬ್ಲ್ಯುಜಿಎಂ ಗುಲ್ರುಕ್ಬಿಗಿಮ್, ಟೊಖಿರ್ಜೊನೊವಾ ಮಹಿಳೆಯರ ತಂಡದಲ್ಲಿದ್ದು, ಜಿಎಂ ಅಲೆಜಾಂಡ್ರೊ ರಮಿರೆಜ್ ತರಬೇತುದಾರರಾಗಿದ್ದಾರೆ.