ಡೆಹ್ರಾಡೂನ್: ಬೆಟ್ಟಗಳ ರಾಜ್ಯ ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಬೇಟೆ ಮುಂದುವರಿಸಿರುವ ಕರ್ನಾಟಕ, ಕೂಟದ 11ನೇ ದಿನ ಮತ್ತೆ 4 ಪದಕ (1 ಚಿನ್ನ, 1 ಬೆಳ್ಳಿ, 2 ಕಂಚು) ಬಾಚಿಕೊಂಡಿದೆ. ಟೆನಿಸ್‌ನಲ್ಲಿ ಕನಿಷ್ಠ 4 ಪದಕಗಳ ನಿರೀಕ್ಷೆ ಹರಡಿದ್ದು, ಸದ್ಯ 31 ಚಿನ್ನ, 13 ಬೆಳ್ಳಿ ಹಾಗೂ 18 ಕಂಚು ಸಹಿತ ಒಟ್ಟು 62 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಸರ್ವೀಸಸ್ ತಂಡ (71 ಪದಕ) ಅಗ್ರಸ್ಥಾನದಲ್ಲಿದೆ. ಒಲಿಂಪಿಯನ್ ಆಂಧ್ರ ಪ್ರದೇಶದ ಜ್ಯೋತಿ ಯರ‌್ರಾಜಿ 100 ಮೀಟರ್ ಹರ್ಡಲ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಸಾಧನೆ ಮಾಡಿದ್ದಾರೆ. ಕರ್ನಾಟಕದ ಪುರುಷರ ಹಾಕಿ ತಂಡ ಸೆಮಿೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದೆ.
ಭಾನುವಾರ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಪುರುಷರ ಹೈಜಂಪ್‌ನಲ್ಲಿ 2.08 ಮೀಟರ್ ಎತ್ತರ ಜಿಗಿದ ರಾಜ್ಯದ ಸುದೀಪ್ ಮೂರನೇ ಸ್ಥಾನಿಯಾಗಿ ಕಂಚು ಜಯಿಸಿದರು. ರಾಜ್ಯದ ಮತ್ತೋರ್ವ ಅಥ್ಲೀಟ್ ಜೆಸ್ಸಿ ಸಂದೇಶ್ ಸಹ 2.08 ಮೀಟರ್ ಜಿಗಿತದ ನಡುವೆಯೂ ಪದಕ ವಂಚಿತರಾದರು. ತಮಿಳುನಾಡಿನ ಆದರ್ಶ ರಾಮ್ (2.14ಮೀ) ಹಾಗೂ ಒಡಿಶಾದ ಸ್ವಾಧಿನ್ ಕುಮಾರ್ (2.11ಮೀ) ಕ್ರಮವಾಗಿ ಅಗ್ರ 2 ಸ್ಥಾನ ಸಂಪಾದಿಸಿದರು.
ಜಾವೆಲಿನ್‌ನಲ್ಲಿ ಅವಳಿ ಪದಕ
ಮಹಿಳಾ ವಿಭಾಗದ ಜಾವೆಲಿನ್ ಎಸೆತದಲ್ಲಿ ಕರ್ನಾಟಕಕ್ಕೆ ಎರಡು ಪದಕಗಳು ಒಲಿದವು. ಕರೀಷ್ಮಾ ಎಸ್ ಸನೀಲ್ 55.55 ಮೀಟರ್ ದೂರದ ಎಸೆತದೊಂದಿಗೆ ಬೆಳ್ಳಿ ಜಯಿಸಿದರೆ, ರಮ್ಯಶ್ರೀ ಜೈನ್ 54.85 ಮೀಟರ್ ಭರ್ಜಿ ಎಸೆದು ಕಂಚಿನ ಪದಕ ಗೆದ್ದುಕೊಂಡರು. ಎರಡನೇ ಪ್ರಯತ್ನದಲ್ಲೇ 55.55 ಮೀಟರ್ ಎಸೆದ ಹರಿಯಾಣದ ಜ್ಯೋತಿ ರಾಕೇಶ್ ಅಗ್ರಸ್ಥಾನದೊಂದಿಗೆ ಚಿನ್ನ ಗೆದ್ದರು. ರಾಜ್ಯದ ಕರೀಷ್ಮಾ 6ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
ರಿಲೇಯಲ್ಲಿ ಸ್ವರ್ಣದ ಓಟ
ಕೀರ್ತನಾ ಎಸ್., ಜ್ಯೋತಿಕಾ, ಎನ್. ಕೊರ್ನೆಲಿಯೊ ಹಾಗೂ ಉನ್ನತಿ ಅಯ್ಯಪ್ಪ ಒಳಗೊಂಡ ಮಹಿಳಾ ತಂಡ 4/100 ಮೀಟರ್ ರಿಲೇಯಲ್ಲಿ 45.99 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿ ರಾಜ್ಯಕ್ಕೆ ದಿನದ ಮೊದಲ ಸ್ವರ್ಣ ಪದಕ ಗೆದ್ದುಕೊಟ್ಟಿತು. ಕೇರಳ (47.04ಸೆ) ಹಾಗೂ ತೆಲಂಗಾಣ (47.58ಸೆ) ತಂಡಗಳು ಕ್ರಮವಾಗಿ ರಜತ ಮತ್ತು ಕಂಚಿನ ಪದಕ ಜಯಿಸಿದವು. ಉನ್ನತಿ ಅಯ್ಯಪ್ಪ ಕರ್ನಾಟಕ ತಂಡದ ಕೋಚ್ ಅಯ್ಯಪ್ಪ ಹಾಗೂ ಮಾಜಿ ಒಲಿಂಪಿಯನ್ ಪ್ರಮೀಳಾ ಅಯ್ಯಪ್ಪ ದಂಪತಿ ಪುತ್ರಿ.
ಟೆನಿಸ್‌ನಲ್ಲಿ 4 ಮೆಡಲ್ ಖಾತ್ರಿ
ಹಾಲಿ ಕೂಟದ ಟೆನಿಸ್ ವಿಭಾಗದಲ್ಲಿ ಕರ್ನಾಟಕಕ್ಕೆ ಮತ್ತೆ ಕನಿಷ್ಠ 4 ಪದಕಗಳು ಖಾತ್ರಿಗೊಂಡಿವೆ. ಪುರುಷರ ಡಬಲ್ಸ್‌ನಲ್ಲಿ ರಾಜ್ಯದ ನಂ.1 ಪ್ರಜ್ವಲ್ ದೇವ್-ನಿಕಿ ಪೂಣಚ, ಮಿಶ್ರ ಡಬಲ್ಸ್‌ನಲ್ಲಿ ನಿಕಿ ಪೂಣಚ ಹಾಗೂ ಸೋಹಾ ಸಾಧಿಖ್ ಜೋಡಿಗಳು ೈನಲ್‌ಗೇರಿವೆ. ಇದರೊಂದಿಗೆ ಕನಿಷ್ಠ ರಜತ ಪದಕ ಒಲಿಯಲಿದೆ. ಮೈಸೂರಿನ ಪ್ರಜ್ವಲ್ ದೇವ್ ಹಾಗೂ ಅಮೋದಿನಿ ನಾಯಕ್ ಕ್ರಮವಾಗಿ ಪುರುಷರ ಹಾಗೂ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪ್ರಜ್ವಲ್ ದೇವ್-ನಿಕಿ ಜೋಡಿ 6-3, 6-0 ರಿಂದ ದೆಹಲಿಯ ಶಿವಾಂಕ್ ಭಟ್ನಾಗರ್-ಸಾರ್ಥಕ್ ಸುದೇನ್ ಜೋಡಿಯನ್ನು ಮಣಿಸಿದರೆ, ಮಿಶ್ರ ಡಬಲ್ಸ್‌ನಲ್ಲಿ ನಿಕಿ ಪೂಣಚ-ಸೋಹಾ ಸಾಧಿಖ್ 6-2, 6-3 ರಿಂದ ಹರಿಯಾಣದ ಆದಿತಿ ರಾವತ್-ಸುನೀಲ್ ಕುಮಾರ್ ಎದುರು ಗೆದ್ದು ಚಿನ್ನದ ಪದಕ ಸುತ್ತಿಗೇರಿದರು. ಸಿಂಗಲ್ಸ್‌ನಲ್ಲಿ ಪ್ರಜ್ವಲ್ ದೇವ್ 6-3,6-2 ರಿಂದ ಸಾರ್ಥಕ್ ವಿರುದ್ಧ ಗೆದ್ದರೆ, ಅಮೋದಿನಿ 4-6, 6-4, 6-3 ರಿಂದ ಆದಿತಿ ರಾವತ್ ಎದುರು ಗೆದ್ದು ನಾಲ್ಕರ ಘಟ್ಟಕ್ಕೇರಿದರು.