ಡೆಹ್ರಾಡೂನ್/ಹಲ್ದಾವಾನಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಭಾರತದ ಕಿರಿಯ ಕ್ರೀಡಾಪಟು ಎನಿಸಿದ ಕರ್ನಾಟಕದ ಈಜುತಾರೆ ಧಿನಿಧಿ ದೇಸಿಂಘು ಬೆಟ್ಟಗಳ ರಾಜ್ಯ ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವೈಯಕ್ತಿಕ 5ನೇ ಪದಕ ತನ್ನದಾಗಿಸಿಕೊಂಡಿದ್ದಾರೆ. ಕೂಟದ ಮೂರನೇ ದಿನವಾದ ಶುಕ್ರವಾರ ಈಜುಪಟುಗಳು 2 ಚಿನ್ನ, 1 ಬೆಳ್ಳಿ, 2 ಕಂಚು ಜಯಿಸುವ ಮೂಲಕ ಕರ್ನಾಟಕದ ಪದಕ ಸಂಖ್ಯೆಯನ್ನು 17ಕ್ಕೇರಿಸಿದ್ದಾರೆ. ಇದರೊಂದಿಗೆ ಕರ್ನಾಟಕ 9 ಚಿನ್ನ, 4 ಬೆಳ್ಳಿ, 4 ಕಂಚು ಸಹಿತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಣಿಪುರ 19 ಪದಕ (9 ಚಿನ್ನ, 7 ಬೆಳ್ಳಿ, 3 ಕಂಚು), ಸರ್ವೀಸಸ್ 18 ಪದಕ (9 ಸ್ವರ್ಣ, 6 ರಜತ, 3 ಕಂಚು) ರಾಜ್ಯಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.
ಮಹಿಳೆಯರ 50 ಮೀಟರ್ ಬಟರ್ ್ಲೈ ಸ್ಪರ್ಧೆಯಲ್ಲಿ 14 ವರ್ಷದ ಧಿನಿಧಿ ದೇಸಿಂಘು 26.96 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರೆ, ಕರ್ನಾಟಕ ಮತ್ತೋರ್ವ ಸ್ಪರ್ಧಿ ನೀನಾ ವೆಂಕಟೇಶ್ 27.34 ಸೆಕೆಂಡ್‌ಗಳಲ್ಲಿ ಮೂರನೇ ಸ್ಥಾನಿಯಾಗಿ ಕಂಚು ಜಯಿಸಿದರು. ಮಹಾರಾಷ್ಟ್ರದ ಅವಂತಿಕಾ (27.28) ರಜತ ಪದಕ ಒಲಿಸಿಕೊಂಡರು.
800 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ರಾಜ್ಯದ ಶ್ರೀ ಚಾರಣಿ ತುಮು (9ನಿ,28.45ಸೆ) ಕಂಚು ಜಯಿಸಿದರೆ, ಅದಿತಿ ಎನ್ ಮೂಲೆ (9ನಿ,30.26ಸೆ) 4ನೇ ಸ್ಥಾನಿಯಾಗಿ ಪದಕವಂಚಿತರಾದರು. ದೆಹಲಿಯ ಭವ್ಯಾ ಸಚ್‌ದೇವ (9ನಿ, 17.60ಸೆ), ಅಸ್ಸಾಂನ ಸುಬ್ರಂಶಿ ಪ್ರಿಯದರ್ಶಿನಿ (9ನಿ, 28.43ಸೆ) ಕ್ರಮವಾಗ ಸ್ವರ್ಣ, ರಜತ ಪದಕಕ್ಕೆ ಕೊರಳೊಡ್ಡಿದರು.
ಪುರುಷರ ವಿಭಾಗದ 400 ಮೀಟರ್ ಮಿಡ್ಲೆ ವಿಭಾಗದಲ್ಲಿ ಶೋಯನ್ ಗಂಗೂಲಿ 4ನಿಮಿಷ 29.10 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನಿಯಾಗಿ ಗುರಿ ತಲುಪಿದರು. ಗುಜರಾತ್‌ನ ಆರ್ಯ ನೆಹ್ರಾ (4ನಿ,31.81ಸೆ), ಮಧ್ಯಪ್ರದೇಶದ ಅದ್ವೈತ್ ಪೇಜ್ (4ನಿ,35.83) ಕ್ರಮವಾಗಿ ನಂತರ ಎರಡು ಸ್ಥಾನ ಪಡೆದರು.
ಒಲಿಂಪಿಯನ್ ಶ್ರೀಹರಿ ನಟರಾಜ್ 50 ಮೀಟರ್ ಫ್ರೀಸ್ಟೈಲ್‌ನಲ್ಲಿ 23.37 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ರಜತ ಪದಕ ಒಲಿಸಿಕೊಂಡರೆ, ಮಹಾರಾಷ್ಟ್ರದ ಮಿಹಿರ್ ಅಂಬ್ರೆ (23.29ಸೆ), ತಮಿಳುನಾಡಿನ ಜೋಶುವಾ ಥಾಮಸ್ (23.40ಸೆ) ಚಿನ್ನ ಹಾಗೂ ಕಂಚು ಗೆದ್ದುಕೊಂಡರು.