ರನ್ನರ್​ಅಪ್​ ಕಿಶನ್​ ಆರ್​. ಮತ್ತು ಚಾಂಪಿಯನ್​ ಆಕಾಶ್​ ಅಶೋಕ್​ ಕುಮಾರ್​ ಏಜೆನ್ಸಿ
ಕ್ರೀಡೆ

ಆಕಾಶ್​ ಅಶೋಕ್ ಕುಮಾರ್‌ಗೆ ಸತತ ಮೂರನೇ ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿ

ಕರ್ನಾಟಕ ರಾಜ್ಯದ 3ನೇ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿ

ಬೆಂಗಳೂರು: ಕರ್ನಾಟಕ ರಾಜ್ಯದ 3ನೇ ರಾಜ್ಯ ರ‍್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಆಕಾಶ್​ ಅಶೋಕ್ ಕುಮಾರ್ ಸತತ ಮೂರನೇ ಬಾರಿಗೆ ರಾಜ್ಯ ರ‍್ಯಾಂಕಿಂಗ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬೆಂಗಳೂರಿನ ಜಯನಗರದ ಕಾಸ್ಮೋಪಾಲಿಟನ್ ಕ್ಲಬ್‌ನ ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಆಕಾಶ್​, ಮೂರನೇ ಶ್ರೇಯಾಂಕಿತ ಕಿಶನ್ ಆರ್ ಅವರನ್ನು 42 ಪಿನ್‌ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು. ಎರಡು ಪಂದ್ಯಗಳ ಒಟ್ಟು ಸ್ಕೋರ್‌ನಲ್ಲಿ ಆಕಾಶ್​ 409 ಅಂಕ ಗಳಿಸಿದರೆ, ಕಿಶನ್ 367 ಅಂಕ ಗಳಿಸಿದರು.

ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಪ್ರಾಬಲ್ಯ ಮೆರೆದ ಆಕಾಶ್​ ಮೊದಲ ಗೇಮ್‌ನಲ್ಲಿ ಸತತ ಐದು ಸ್ಟ್ರೈಕ್‌ಗಳನ್ನು ದಾಖಲಿಸಿ 205 ಅಂಕ ಗಳಿಸಿದರು. ಕಿಶನ್ 181 ಅಂಕಗಳಿಗೆ ತೃಪ್ತಿಪಟ್ಟರು. ಇದರಿಂದ ಆಕಾಶ್​ಗೆ ಆರಂಭದಲ್ಲೇ 35 ಪಿನ್‌ಗಳ ಮುನ್ನಡೆ ದೊರೆಯಿತು. ಎರಡನೇ ಗೇಮ್‌ನಲ್ಲೂ ಉತ್ತಮ ಪ್ರದರ್ಶನ ಮುಂದುವರಿಸಿದ ಆಕಾಶ್​ 193 ಅಂಕ ಗಳಿಸಿದರೆ, ಕಿಶನ್ 186 ಅಂಕ ಗಳಿಸಿದರು.

ಇದಕ್ಕೂ ಮುನ್ನ ನಡೆದ ಮೊದಲ ನಾಕೌಟ್ ಪಂದ್ಯದಲ್ಲಿ ಆಕಾಶ್​, ನಾಲ್ಕನೇ ಶ್ರೇಯಾಂಕಿತ ಸತೀಶ್ ಎ.ವಿ. ಅವರನ್ನು 441-371 ಅಂಕಗಳಿಂದ 70 ಪಿನ್‌ಗಳ ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದರು. ಮತ್ತೊಂದು ನಾಕೌಟ್ ಪಂದ್ಯದಲ್ಲಿ ಕಿಶನ್ ಆರ್ ಅವರು ವಿಜಯ್ ಪಂಜಾಬಿ ಅವರನ್ನು 439-366 ಅಂಕಗಳಿಂದ 73 ಪಿನ್‌ಗಳ ಅಂತರದಲ್ಲಿ ಮಣಿಸಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದರು.

ವಿಶೇಷ ಪ್ರಶಸ್ತಿಗಳು

  • ಆರು ಗೇಮ್‌ಗಳ ಬ್ಲಾಕ್‌ನಲ್ಲಿ ಗರಿಷ್ಠ ಸರಾಸರಿ: ಆಕಾಶ್​ ಅಶೋಕ್ ಕುಮಾರ್ (215.19)

  • 18 ಗೇಮ್‌ಗಳಲ್ಲಿ ಗರಿಷ್ಠ ಸರಾಸರಿ: ಆಕಾಶ್​ ಅಶೋಕ್ ಕುಮಾರ್ (204.67)

  • 225ಕ್ಕಿಂತ ಹೆಚ್ಚಿನ ಸ್ಕೋರ್‌ಗಳ ಗರಿಷ್ಠ ಸಂಖ್ಯೆ: ಆಕಾಶ್​ ಅಶೋಕ್ ಕುಮಾರ್ (3)

  • ಮಹಿಳಾ ವಿಭಾಗದ 12 ಗೇಮ್‌ಗಳಲ್ಲಿ ಗರಿಷ್ಠ ಸರಾಸರಿ: ಹಿತಾಶಾ ಸಿಸೋಡಿಯಾ (169.67)

ಅಂತಿಮ ಫಲಿತಾಂಶ

  1. ಆಕಾಶ್​ ಅಶೋಕ್ ಕುಮಾರ್ – ಪ್ರಥಮ ಸ್ಥಾನ

  2. ಕಿಶನ್ ಆರ್ – ದ್ವಿತೀಯ ಸ್ಥಾನ

  3. ಸತೀಶ್ ಎ.ವಿ. – ತೃತೀಯ ಸ್ಥಾನ

  4. ವಿಜಯ್ ಪಂಜಾಬಿ – ನಾಲ್ಕನೇ ಸ್ಥಾನ