ಕ್ರೀಡೆ

ಅಡಿಲೇಡ್‌ನಲ್ಲಿ ಜೈಸ್ವಾಲ್ ಆರಂಭಿಕ ಜತೆಗಾರ ಯಾರು?: ರೋಹಿತ್-ರಾಹುಲ್ ನಡುವೆ ಒಬ್ಬರಿಗೆ ಮಧ್ಯಮ ಕ್ರಮಾಂಕ ಫಿಕ್ಸ್!

ನವದೆಹಲಿ: ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ ಸೇರ್ಪಡೆ ಹೆಚ್ಚಿನ ಬಲ ತುಂಬಲಿದೆ. ಜತೆಗೆ ತಂಡದಲ್ಲಿ ಸ್ವಲ್ಪ ಗೊಂದಲವನ್ನೂ ಉಂಟು ಮಾಡಿದೆ. ಡಿಸೆಂಬರ್ 6ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಅಹರ್ನಿಶಿ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ರೋಹಿತ್ ಆರಂಭಿಕರಾಗಿ ಕಣಕ್ಕಿಯುತ್ತಾರೆಯೇ ಅಥವಾ ಮಧ್ಯಮ ಕ್ರಮಾಂಕದಲ್ಲಿ ಆಡುವರೇ ಎಂಬುದು ಸದ್ಯ ತೀವ್ರ ಕುತೂಹಲ ಕೆರಳಿಸಿದೆ. ಯುವ ಬ್ಯಾಟರ್ ದೇವದತ್ ಪಡಿಕ್ಕಲ್ ಬದಲಿಗೆ ರೋಹಿತ್ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಾತ್ರಿ ಎನಿಸಿದೆ. ಆದರೆ ರೋಹಿತ್ ಆಗಮನದಿಂದ ಇನ್ ಾರ್ಮ್ ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಚರ್ಚಿತ ವಿಷಯವಾಗಿದೆ.

ಸರಣಿಯ ಪೂರ್ವ ಸಿದ್ಧತೆಯಾಗಿ ಭಾರತ ತಂಡ ವಾಕಾದಲ್ಲಿ ಅಭ್ಯಾಸ ಪಂದ್ಯವನ್ನಾಡುವ ವೇಳೆ ಶುಭಮಾನ್ ಗಿಲ್ ಎಡಗೈ ಹೆಬ್ಬೆರಳಿನ ಗಾಯಕ್ಕೆ ತುತ್ತಾದರು. ನಂತರ ಮೊದಲ ಟೆಸ್ಟ್ ವೇಳೆಗೆ ಅವರು ಫಿಟ್ ಆಗದ ಕಾರಣ ಕನ್ನಡಿಗ ಪಡಿಕ್ಕಲ್ ಕೊನೇ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಆದರೆ ಈಗ 2ನೇ ಟೆಸ್ಟ್‌ಗೆ ಪಡಿಕ್ಕಲ್ ಸ್ಥಾನದಲ್ಲಿ ರೋಹಿತ್ ಕಣಕ್ಕಿಳಿಯಲಿದ್ದು, ಪರ್ತ್‌ನಲ್ಲಿ ದಿಟ್ಟ ಆಟವಾಡಿರುವ ರಾಹುಲ್‌ರನ್ನು ಆರಂಭಿಕರಾಗಿಯೇ ಮುಂದುವರಿಸಿ ತಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.

ಒಂದು ವೇಳೆ ಗಿಲ್ ಫಿಟ್ ಆದರೆ ಧ್ರುವ ಜುರೆಲ್ ಸ್ಥಾನ ಕಳೆದುಕೊಳ್ಳಲಿದ್ದಾರೆ ಅಥವಾ 2ನೇ ಟೆಸ್ಟ್ ವೇಳೆಗೂ ಗಿಲ್ ಫಿಟ್ ಆಗದಿದ್ದರೆ, ರಾಹುಲ್‌ಗೆ ಮೂರನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಿ ಜೈಸ್ವಾಲ್ ಜತೆಯಾಗಿ ರೋಹಿತ್ ಇನಿಂಗ್ಸ್ ಆರಂಭಿಸುವ ಬಗ್ಗೆಯೂ ಮ್ಯಾನೇಜ್‌ಮೆಂಟ್ ಕಾರ್ಯತಂತ್ರ ರೂಪಿಸುವ ಸಾಧ್ಯತೆಗಳಿವೆ. ಅದಕ್ಕೂ ಮುನ್ನ ಕ್ಯಾನ್‌ಬೆರಾದಲ್ಲಿ ನ.30, ಡಿ.1 ರಂದು ನಡೆಯಲಿರುವ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಇಲೆವೆನ್ ಎದುರಿನ ದ್ವಿದಿನ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ ಕ್ರಮಾಂಕದ ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆಗಳಿವೆ.

ಪರ್ತ್ ಟೆಸ್ಟ್‌ನಲ್ಲಿ ರೋಹಿತ್ ಅನುಪಸ್ಥಿತಿಯಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆದ ರಾಹುಲ್, ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 26 ಮತ್ತು 77 ಸ್ಕೋರ್‌ನೊಂದಿಗೆ ಇತರ ಬ್ಯಾಟರ್‌ಗಳಿಗಿಂತ ಹೆಚ್ಚು ಸ್ಥಿರ ನಿರ್ವಹಣೆ ತೋರಿದ್ದರು. ಪ್ರಸ್ತುತ ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಬರ ಎದುರಿಸುತ್ತಿರುವ ರೋಹಿತ್, ತವರಿನಲ್ಲಿ ನಡೆದ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಕ್ರಮವಾಗಿ 42, 91 ರನ್‌ಗಳು ಮಾತ್ರ ಕಲೆಹಾಕಿದ್ದರು.

ಅಶ್ವಿನ್ ಅಥವಾ ಜಡೇಜಾಗೆ ಚಾನ್ಸ್!

ರೋಹಿತ್ ಸೇರ್ಪಡೆಯಿಂದ ಭಾರತದ ಗೆಲುವಿನ ಹನ್ನೊಂದರ ಬಳಗದಲ್ಲಿ ಬದಲಾವಣೆ ಖಚಿತ. ಇದರ ಜತೆಗೆ ಕಾರ್ಯತಂತ್ರದ ಬದಲಾವಣೆಯಾಗಿ ಸ್ಪಿನ್ನರ್ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಬದಲಿಗೆ ಅನುಭವಿಗಳಾದ ಆರ್.ಅಶ್ವಿನ್ ಅಥವಾ ರವೀಂದ್ರ ಜಡೇಜಾ ನಡುವೆ ಒಬ್ಬರು ಸ್ಥಾನ ಪಡೆಯುವ ಸಾಧ್ಯತೆಗಳಿವೆ.

ಪರ್ತ್ ಟೆಸ್ಟ್‌ನಿಂದ ಇವರಿಬ್ಬರನ್ನು ಕೈಬಿಟ್ಟು ವಾಷಿಂಗ್ಟನ್‌ಗೆ ಮಣೆ ಹಾಕಲಾಗಿತ್ತು. ಆದರೆ ವಾಷಿಂಗ್ಟನ್ ಬೌಲಿಂಗ್‌ನಲ್ಲಿ ದುಬಾರಿ ಎನಿಸಿದರು. ಈ ಹಿಂದೆ 2021ರಲ್ಲಿ ಅಡಿಲೇಡ್‌ನಲ್ಲಿ ನಡೆದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಅಶ್ವಿನ್, 45 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು. ಜಡೇಜಾ ಸಹ ವಿದೇಶಿ ನೆಲದಲ್ಲಿ ಬ್ಯಾಟಿಂಗ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಸ್ಪಿನ್ನರ್‌ಗಳು ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಹೆಚ್ಚು ಪರಿಣಾಮಕಾರಿ ಎನಿಸದ ಕಾರಣ, ಬ್ಯಾಟಿಂಗ್ ಕ್ರಮಾಂಕಕ್ಕೆ ಹೆಚ್ಚು ಒತ್ತು ನೀಡುವ ಸಾಧ್ಯತೆಗಳಿವೆ. ಎಡಗೈ ಬ್ಯಾಟರ್ ವಾಷಿಂಗ್ಟನ್ ಬ್ಯಾಟಿಂಗ್ ಕ್ರಮಾಂಕದಲ್ಲಿ ವೈವಿಧ್ಯತೆ ತರಬಲ್ಲ ಆಟಗಾರನಾಗಿದ್ದು, ಪರ್ತ್‌ನಲ್ಲಿ ಕೊಹ್ಲಿ ಜತೆಗೆ ಅಮೂಲ್ಯ 89 ರನ್‌ಗಳ ಜತೆಯಾಟ ಕಟ್ಟಿದ್ದರು.