ಆಕ್ಲೆಂಡ್: ಭಾರತ ತಂಡ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿ ಸೋಲು ಕಂಡಿದ್ದು, ಆರು ವರ್ಷಗಳ ಹಿಂದೆ. 2014ರ ಜನವರಿಯಲ್ಲಿ ನ್ಯೂಜಿಲೆಂಡ್ನಲ್ಲಿಯೇ ನಡೆದಿದ್ದ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ 0-4ರಿಂದ ಸೋತಿತ್ತು. ಹ್ಯಾಮಿಲ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೆಟ್ಟ ಸೋಲು ಕಂಡ ಬೆನ್ನಲ್ಲಿಯೇ ಭಾರತ ತಂಡ, ಮತ್ತೊಮ್ಮೆ ಕಿವೀಸ್ ವಿರುದ್ಧ ಸರಣಿ ಸೋಲು ಕಾಣುವ ಭೀತಿಯಲ್ಲಿದೆ. ಸರಣಿಯನ್ನು ಜೀವಂತವಾಗಿಡುವುದರೊಂದಿಗೆ ನ್ಯೂಜಿಲೆಂಡ್ ನೆಲದ ಗೆಲುವಿನ ಓಟವನ್ನು ಮುಂದುವರಿಸುವ ಗುರಿಯಲ್ಲಿ ಟೀಮ್ ಇಂಡಿಯಾ ಶನಿವಾರ ಈಡನ್ ಪಾರ್ಕ್ನಲ್ಲಿ 2ನೇ ಏಕದಿನ ಪಂದ್ಯ ಆಡಲಿದೆ.
09 ಭಾರತ ತಂಡ ಈಡನ್ ಪಾರ್ಕ್ ಮೈದಾನದಲ್ಲಿ ಈವರೆಗೂ 9 ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 4 ಪಂದ್ಯಗಳಲ್ಲಿ ಸೋಲು ಕಂಡಿದೆ. 1 ಪಂದ್ಯ ಟೈ ಆಗಿದೆ.
ಟೀಮ್ ನ್ಯೂಸ್
ಭಾರತ: ಶಾರ್ದೂಲ್ ಠಾಕೂರ್ ಹಾಗೂ ನವದೀಪ್ ಸೈನಿ ನಡುವೆ ಯಾರನ್ನು ಆಡಿಸಬೇಕು ಎನ್ನುವ ವಿಚಾರದಲ್ಲಿ ತಂಡದಲ್ಲಿ ಗೊಂದಲ ಮುಂದುವರಿದಿದೆ. ಅದರಲ್ಲೂ ಮಾಡು ಇಲ್ಲವೆ ಮಡಿ ಎನ್ನುವಂತಿರುವ ಪಂದ್ಯದಲ್ಲಿ ಟೀಮ್ ಮ್ಯಾನೇಜ್ವೆುಂಟ್ ಮಾಡುವ ನಿರ್ಧಾರ ಬಹಳ ಪ್ರಮುಖವಾಗಿರಲಿದೆ. ಇದೇ ಕಾರಣಕ್ಕಾಗಿ ಹ್ಯಾಮಿಲ್ಟನ್ ಏಕದಿನ ಪಂದ್ಯದಲ್ಲಿ ದುಬಾರಿಯಾಗಿರುವ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಬದಲು ಯಜುವೇಂದ್ರ ಚಾಹಲ್ ತಂಡದಲ್ಲಿ ಸ್ಥಾನ ಪಡೆಯಬಹುದು.
ನ್ಯೂಜಿಲೆಂಡ್: ಎ ತಂಡವನ್ನು ಕೂಡಿಕೊಳ್ಳುವ ಸಲುವಾಗಿ ಇಶ್ ಸೋಧಿಯನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದೆ. 6.8 ಅಡಿ ಎತ್ತರದ ವೇಗಿ ಕೈಲ್ ಜೇಮಿಸನ್ ಏಕದಿನ ಕ್ರಿಕೆಟ್ ಮಾದರಿಗೆ ಪದಾರ್ಪಣೆ ಮಾಡುವುದು ಖಚಿತವಾಗಿದೆ. ಸ್ಕಾಟ್ ಕಗಿಲಿನ್ ಜ್ವರದ ಕಾರಣದಿಂದ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಸ್ಥಾನದಲ್ಲಿ ಜೇಮಿಸನ್ ಆಡುವ ಸಾಧ್ಯತೆ ಇದೆ. ಉಳಿದಂತೆ ತಂಡದ ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆ ಅನುಮಾನ.
ಮತ್ತೊಮ್ಮೆ ರನ್ಹಬ್ಬ ಸಾಧ್ಯತೆ
ವಿಶ್ವದಲ್ಲಿಯೇ ಚಿಕ್ಕ ಬೌಂಡರಿಗಳನ್ನು ಹೊಂದಿರುವ ಮೈದಾನಗಳ ಪೈಕಿ ಒಂದಾಗಿರುವ ಈಡನ್ ಪಾರ್ಕ್ ಬ್ಯಾಟಿಂಗ್ ಸ್ನೇಹಿ. ಉಭಯ ತಂಡಗಳು ಟಿ20 ಮಾದರಿಯಲ್ಲಿ ಇಲ್ಲಿ 2 ಪಂದ್ಯ ಆಡಿದ್ದವು. ಒಂದು ಪಂದ್ಯದಲ್ಲಿ ದೊಡ್ಡ ಮೊತ್ತ ದಾಖಲಾಗಿದ್ದರೆ, 2ನೇ ಪಂದ್ಯ ಅಲ್ಪ ಮೊತ್ತದ ಮುಖಾಮುಖಿ ಎನಿಸಿತ್ತು. ಆದರೆ, ಏಕದಿನ ಮಾದರಿಯಲ್ಲಿ ಇದು ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ.
350 ನ್ಯೂಜಿಲೆಂಡ್ ತಂಡ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ, ಏಕದಿನ ಕ್ರಿಕೆಟ್ನಲ್ಲಿ 350 ಗೆಲುವಿನ ದಾಖಲೆ ಮಾಡಲಿದೆ. ನ್ಯೂಜಿಲೆಂಡ್ ತಂಡ ಈವರೆಗೂ ಆಡಿದ 769 ಏಕದಿನ ಪಂದ್ಯಗಳಲ್ಲಿ 349 ಗೆಲವು, 373 ಸೋಲು, 7 ಟೈ ಹಾಗೂ 40 ರದ್ದು ಫಲಿತಾಂಶ ಕಂಡಿದೆ. ಏಕದಿನದಲ್ಲಿ 350 ಗೆಲುವು ಕಂಡ ವಿಶ್ವದ 8ನೇ ದೇಶ ಎನಿಸಲಿದೆ.
ಕಳಪೆ ಫೀಲ್ಡಿಂಗ್ಗೆ ಆರ್.ಶ್ರೀಧರ್ ಬೇಸರ
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾದ ಫೀಲ್ಡಿಂಗ್ ಉತ್ತಮ ಮಟ್ಟದಲ್ಲಿಲ್ಲ ಎಂದು ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಬೇಸರ ವ್ಯಕ್ತಪಡಿಸಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ತಂಡದ ಫೀಲ್ಡಿಂಗ್ ಅಭ್ಯಾಸಕ್ಕೆ ಸಮಯ ಸಿಗುತ್ತಿಲ್ಲ ಎಂದು ಹೇಳಿದ ಅವರು, ತಂಡದ ಕೆಟ್ಟ ಫೀಲ್ಡಿಂಗ್ಗೆ ಇದನ್ನೇ ಕಾರಣವನ್ನಾಗಿ ತಿಳಿಸಲು ಬಯಸುತ್ತಿಲ್ಲ ಎಂದಿದ್ದಾರೆ. ‘ಕಳೆದ ನಾಲ್ಕು ತಿಂಗಳಿಂದ ತಂಡದ ಫೀಲ್ಡಿಂಗ್ ಸಾಧಾರಣ ಮಟ್ಟದಲ್ಲಿದೆ’ ಎಂದು 2ನೇ ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.