ಬೆಂಗಳೂರು: ಡಿಸೆಂಬರ್ 6ರಿಂದ 10ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಪುರುಷರ ಕ್ಲಬ್ ವಿಶ್ವ ಚಾಂಪಿಯನ್ಷಿಪ್ಗಾಗಿ ಜಾಗತಿಕ ವಾಲಿಬಾಲ್ ತಾರೆಯರು ಆಗಮಿಸಲಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಆಯೋಜನೆಗೊಂಡಿರುವ ಈ ಟೂರ್ನಿಯ ಪಂದ್ಯಗಳು ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆಯಲಿವೆ.
5 ದಿನಗಳಲ್ಲಿ ಅಗ್ರ 6 ಕ್ಲಬ್ ತಂಡಗಳು ಒಟ್ಟು 10 ಪಂದ್ಯಗಳನ್ನು ಆಡಲಿವೆ. ಆತಿಥೇಯ ಭಾರತವನ್ನು ಅಹಮದಾಬಾದ್ ಡಿಫೆಂಡರ್ಸ್ ತಂಡ ಪ್ರತಿನಿಧಿಸಲಿದೆ. ಈ ವರ್ಷ ನಡೆದ ಪ್ರೈಮ್ ವಾಲಿಬಾಲ್ ಲೀಗ್ 2ನೇ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ಆಧಾರದಲ್ಲಿ ಅಹಮದಾಬಾದ್ ಡಿಫೆಂಡರ್ಸ್ ತಂಡ ಈ ಟೂರ್ನಿಗೆ ಅರ್ಹತೆ ಸಂಪಾದಿಸಿದೆ.
ಹಾಲಿ ಚಾಂಪಿಯನ್ ಸರ್ ಸೇಫ್ಟಿ ಸುಸ ಪೆರುಗಿಯಾ (ಇಟಲಿ), ಸದಾ ಕ್ರುಜೆರೋ ವೊಲಿ ಮತ್ತು ಮಿನಾಸ್ ಟೆನಿಸ್ ಕ್ಲಬ್ (ಬ್ರೆಜಿಲ್), ಸುಂಟೊರಿ ಸನ್ಬರ್ಡ್ಸ್ ಕ್ಲಬ್ (ಜಪಾನ್) ಮತ್ತು ಹಲ್ಕ್ಬ್ಯಾಂಕ್ ಸ್ಪೋರ್ ಕುಲುಬು (ಟರ್ಕಿ) ಟೂರ್ನಿಯಲ್ಲಿ ಆಡಲಿರುವ ಇತರ ತಂಡಗಳಾಗಿವೆ. ಪಂದ್ಯಗಳು ಸೋನಿ ಟೆನ್1 ಮತ್ತು ಸೋನಿ ಟೆನ್3 ಚಾನಲ್ಗಳಲ್ಲಿ ನೇರಪ್ರಸಾರವನ್ನೂ ಕಾಣಲಿವೆ.