ಪರ್ತ್: ಮುಂಬರುವ 2027ರ ಏಕದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಈಗಾಗಲೆ ಶುಭಮಾನ್ ಗಿಲ್ಗೆ ನಾಯಕತ್ವ ವಹಿಸಿರುವ ಭಾರತ, ಆತಿಥೇಯ ಆಸ್ಟ್ರೆಲಿಯಾ ವಿರುದ್ಧದ ಏಕದಿನ ಸರಣಿಯೊಂದಿಗೆ "ವಿಶ್ವ ಚಾಂಪಿಯನ್' ಪಟ್ಟಕ್ಕೇರಬಹುದಾದ ಬಲಿಷ್ಠ ತಂಡವನ್ನು ಕಟ್ಟುವ ಕೆಲಸವನ್ನು ಆರಂಭಿಸಲು ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯ ನೂತನ ಪರ್ತ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿದ್ದು, ಅನುಭವಿ ಬ್ಯಾಟರ್ಗಳು ಮತ್ತು ಮಾಜಿ ನಾಯಕರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಮೊದಲ ಬಾರಿ ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್ವರೆಗೆ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಅವರಿಬ್ಬರಿಗೆ ಇದು ಮಹತ್ವದ ಸರಣಿಯಾಗಿದ್ದರೆ, ಶುಭಮಾನ್ ಗಿಲ್ಗೆ ಏಕದಿನ ತಂಡದ ನಾಯಕರಾಗಿ ಮೊದಲ ಸವಾಲೆನಿಸಿದೆ.
2027ರ ಅಕ್ಟೋಬರ್&ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮುನ್ನ ಭಾರತ ತಂಡ ಸುಮಾರು 27 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಪೈಕಿ ಮುಂದಿನ 9 ಪಂದ್ಯಗಳನ್ನು ಕ್ರಮವಾಗಿ ಆಸ್ಟ್ರೆಲಿಯಾ, ದಣ ಆಫ್ರಿಕಾ, ನ್ಯೂಜಿಲೆಂಡ್ (ತಲಾ 3) ವಿರುದ್ಧ ಆಡಲಿದ್ದು, ವಿಶ್ವಕಪ್ಗೆ ತಂಡ ಕಟ್ಟುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ಲಭಿಸಲಿದೆ. ಈ ಪಂದ್ಯಗಳ ಸೋಲು-ಗೆಲುವು, ವೈಫಲ್ಯ-ಯಶಸ್ಸು ಭವಿಷ್ಯದ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ದೃಷ್ಟಿಯಿಂದ ಮಹತ್ವದಾಗಿರಲಿದೆ. ಭಾರತವೂ ಮಾರ್ಚ್ ತಿಂಗಳ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಆಡಲಿರುವ ಮೊದಲ ಏಕದಿನ ಇದಾಗಿದೆ. ಏಕದಿನ ವಿಶ್ವಕಪ್ ಮತ್ತು ಮಿನಿ ವಿಶ್ವಕಪ್ ವಿಜೇತರ ಕಾದಾಟ ಎಂದೂ ಇದನ್ನು ಬಣ್ಣಿಸಬಹುದು.
ರೋ-ಕೊ ಕೇಂದ್ರಬಿಂದು
ಸುಮಾರು ಆರು ತಿಂಗಳ ಬಳಿಕ ಭಾರತ ತಂಡದ ಪರ ಆಡಲಿರುವ ಸ್ಟಾರ್ ಬ್ಯಾಟರ್ಗಳಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಈ ಸರಣಿಯ ಕೇಂದ್ರಬಿಂದುಗಳೆನಿಸಿದ್ದಾರೆ. 2027ರ ಏಕದಿನ ವಿಶ್ವಕಪ್ನಲ್ಲಿ ಆಡುವ ಕನಸು ಹೊಂದಿರುವ ಇವರಿಬ್ಬರು ಆ ದೃಷ್ಟಿಯಿಂದ ಫಾರ್ಮ್ ಮತ್ತು ಫಿಟ್ನೆಸ್ ಸಾಬೀತುಪಡಿಸಬೇಕಾಗಿದೆ. ಟೆಸ್ಟ್, ಟಿ20ಯಿಂದ ನಿವೃತ್ತಿ ಹೊಂದಿ ಸದ್ಯ ಏಕದಿನದಲ್ಲಿ ಮಾತ್ರ ಸಕ್ರಿಯರಾಗಿರುವುದರಿಂದ ಇದು ಅವರಿಬ್ಬರಿಗೂ ದೊಡ್ಡ ಸವಾಲೆನಿಸಿದೆ. ಪ್ರಮುಖವಾಗಿ, ನಾಯಕತ್ವ ಕಳೆದುಕೊಂಡ ಬಳಿಕ ಮೊದಲ ಸರಣಿ ಆಡಲಿರುವ 38 ವರ್ಷದ ರೋಹಿತ್ ಮೇಲೆ ಹೆಚ್ಚಿನ ಒತ್ತಡವಿದೆ. 2027ರ ವಿಶ್ವಕಪ್ ವೇಳೆ 40 ವರ್ಷ ಆಗಲಿರುವುದರಿಂದ ಅಲ್ಲಿಯವರೆಗೆ ಫಿಟ್ನೆಸ್-ಫಾರ್ಮ್ ಕಾಯ್ದುಕೊಳ್ಳಬಲ್ಲೆ ಎಂದು ಅವರು ನಿರೂಪಿಸಬೇಕಾಗಿದೆ. ಟೀಮ್ ಮ್ಯಾನೇಜ್ಮೆಂಟ್ ವಿಶ್ವಾಸ ಗೆಲ್ಲಲು ಅವರಿಗೆ ಇದು ಮಹತ್ವದ ಸರಣಿ ಎನಿಸಿದೆ. ಇನ್ನು 36 ವರ್ಷದ ಕೊಹ್ಲಿ ಜೂನ್ 3ರ ಐಪಿಎಲ್ ಫೈನಲ್ ಬಳಿಕ ಮೊದಲ ಬಾರಿ ಸ್ಪರ್ಧಾತ್ಮಕ ಕ್ರಿಕೆಟ್ ಪಂದ್ಯ ಆಡಲಿದ್ದು, ಅವರ ಫಾರ್ಮ್ ಬಗ್ಗೆಯೂ ಕುತೂಹಲವಿದೆ. ಇವರಿಬ್ಬರೂ ಆಸೀಸ್ ನೆಲದಲ್ಲಿ ಉತ್ತಮ ದಾಖಲೆ ಹೊಂದಿರುವುದರಿಂದ ವಿಶ್ವಾಸದಿಂದ ಕಣಕ್ಕಿಳಿಯಬಹುದಾಗಿದೆ.
ಶುಭಮಾನ್ ಗಿಲ್ ಸತ್ವಪರೀಕ್ಷೆ
ಟೆಸ್ಟ್ ತಂಡದ ನಾಯಕರಾಗಿ ಕಳೆದ ಇಂಗ್ಲೆಂಡ್ ಪ್ರವಾಸದ ಮೊದಲ ಸರಣಿಯಲ್ಲಿ ಗಮನಾರ್ಹ ನಿರ್ವಹಣೆ ತೋರಿದ್ದ ಶುಭಮಾನ್ ಗಿಲ್, ಏಕದಿನದಲ್ಲೂ ಅದನ್ನೇ ಪುನರಾವರ್ತಿಸಬೇಕಾದ ಸವಾಲು ಹೊಂದಿದ್ದಾರೆ. ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಎರಡೂವರೆ ವರ್ಷ ಮೊದಲೇ ಏಕದಿನ ತಂಡದ ಸಾರಥ್ಯ ಪಡೆದುಕೊಂಡಿರುವ ಗಿಲ್, ರೋಹಿತ್ ಶರ್ಮ ಉತ್ತರಾಧಿಕಾರಿಯಾಗಿ ಅವರ ಯಶಸ್ವಿ ನಾಯಕತ್ವವನ್ನೇ ಮುಂದುವರಿಸಿಕೊಂಡು ಹೋಗಬೇಕಾಗಿದೆ. ಚಾಂಪಿಯನ್ಸ್ ಟ್ರೋಫಿ ಗೆಲುವಿನ ಹೊರತಾಗಿಯೂ ರೋಹಿತ್ ನಾಯಕತ್ವ ಕಳೆದುಕೊಂಡಿರುವುದಕ್ಕೆ ಮುಖ್ಯ ಕಾರಣ ವಿಶ್ವಕಪ್ ಸಿದ್ಧತೆ. ಹೀಗಾಗಿ ಗಿಲ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಯುವ&ಅನುಭವಿ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಹೊಣೆ ಅವರ ಮೇಲಿದೆ.
ಆಸೀಸ್ಗೆ ಗಾಯದ ಹಿನ್ನಡೆ
ಆತಿಥೇಯ ಆಸ್ಟ್ರೆಲಿಯಾ ತಂಡ ಗಾಯ ಮತ್ತಿತರ ಸಮಸ್ಯೆಯಿಂದಾಗಿ ಕೆಲ ಪ್ರಮುಖ ಆಟಗಾರರ ಗೈರಿನ ಹಿನ್ನಡೆ ಹೊಂದಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆ ಮತ್ತು ಆಶಸ್ ಸರಣಿಗೆ ಆದ್ಯತೆ ನೀಡಿ ಸರಣಿಯಿಂದ ಹೊರಗುಳಿದಿದ್ದಾರೆ. ಆಲ್ರೌಂಡರ್ ಕ್ಯಾಮರಾನ್ ಗ್ರೀನ್ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಜೋಶ್ ಇಂಗ್ಲಿಸ್ ಸರಣಿಯ ಮೊದಲ 2 ಮತ್ತು ಆಡಂ ಜಂಪಾ, ಅಲೆಕ್ಸ್ ಕ್ಯಾರಿ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್ವೆಲ್ ಏಕದಿನ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ ಈ ಹಿನ್ನಡೆಯ ನಡುವೆ ಅನುಭವಿ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಸಲ್ವುಡ್ ಆಸೀಸ್ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮಧ್ಯಮ ಕ್ರಮಾಂಕ ಅನನುಭವಿಗಳಿಂದ ತುಂಬಿದೆ.
ಟೀಮ್ ನ್ಯೂಸ್:
ಭಾರತ: ಬ್ಯಾಟಿಂಗ್ ಕ್ರಮಾಂಕದ ಟಾಪ್-6 ಮುಂದುವರಿಯಲಿದ್ದು, ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಏಕದಿನ ಕ್ರಿಕೆಟ್ ಪದಾರ್ಪಣೆಯ ಅವಕಾಶ ಪಡೆಯುವ ನಿರೀಕ್ಷೆ ಇದೆ. ಬ್ಯಾಟಿಂಗ್ ಸಾಮರ್ಥ್ಯದಿಂದಾಗಿ ಹರ್ಷಿತ್ ರಾಣಾ 2ನೇ ವೇಗಿಯಾಗಿ ಸ್ಥಾನ ಪಡೆದರೆ, 3ನೇ ವೇಗದ ಬೌಲರ್ ಸ್ಥಾನಕ್ಕೆ ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಎಡಗೈ ವೇಗಿ ಅರ್ಷದೀಪ್ ನಡುವೆ ಪೈಪೋಟಿ ನಡೆಯಲಿದೆ. ರವೀಂದ್ರ ಜಡೇಜಾ ಗೈರಿನಲ್ಲಿ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್ ಮೊದಲ ಆದ್ಯತೆ ಪಡೆದರೆ, 2ನೇ ಸ್ಪಿನ್ನರ್ ಸ್ಥಾನಕ್ಕೆ ಕುಲದೀಪ್ ಯಾದವ್ ಮತ್ತು ವಾಷಿಂಗ್ಟನ್ ಸುಂದರ್ ನಡುವೆ ಸ್ಪರ್ಧೆ ಇದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ, ಶುಭಮಾನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್/ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮದ್ ಸಿರಾಜ್, ಪ್ರಸಿದ್ಧಕೃಷ್ಣ/ಅರ್ಷದೀಪ್ ಸಿಂಗ್.
ಆಸ್ಟ್ರೆಲಿಯಾ: ಮ್ಯಾಟ್ ರೆನ್ಷಾ ಮತ್ತು ಮಿಚ್ ಓವನ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಲಿದ್ದರೆ, ಅಲೆಕ್ಸ್ ಕ್ಯಾರಿ ಗೈರಿನಲ್ಲಿ ಜೋಶ್ ಫಿಲಿಪ್ 2021ರ ಬಳಿಕ ಮೊದಲ ಬಾರಿ ಏಕದಿನ ಪಂದ್ಯ ಆಡಲಿದ್ದಾರೆ. ವಿಕೆಟ್ ಕೀಪರ್ ಆಗಿ ಇದು ಅವರಿಗೆ ಮೊದಲ ಪಂದ್ಯ ಆಗಿರಲಿದೆ. ಆಡಂ ಜಂಪಾ ಗೈರಿನಲ್ಲಿ ಎಡಗೈ ಸ್ಪಿನ್ನರ್ ಮ್ಯಾಟ್ ಕುಹ್ನೆಮನ್ ಸ್ಥಾನ ಪಡೆಯಲಿದ್ದಾರೆ. ತವರಿನಲ್ಲಿ ಇದು ಅವರಿಗೆ ಮೊದಲ ಏಕದಿನ ಪಂದ್ಯವಾಗಿರಲಿದೆ. ಕೂಪರ್ ಕೊನೊಲಿ ಮತ್ತು ಮ್ಯಾಟ್ ರೆನ್ಷಾ ತಂಡದ ಮತ್ತಿಬ್ಬರು ಸ್ಪಿನ್ ಬೌಲಿಂಗ್ ಆಯ್ಕೆಗಳಾಗಿದ್ದಾರೆ.
ಸಂಭಾವ್ಯ ತಂಡ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಟ್ ಶಾರ್ಟ್, ಮ್ಯಾಟ್ ರೆನ್ಷಾ, ಜೋಶ್ ಫಿಲಿಪ್ (ವಿ.ಕೀ), ಮಿಚ್ ಓವನ್, ಕೂಪರ್ ಕೊನೊಲಿ, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಟ್ ಕುಹ್ನೆಮನ್, ಜೋಶ್ ಹ್ಯಾಸಲ್ವುಡ್.
ಮುಖಾಮುಖಿ: 152
ಭಾರತ: 58
ಆಸ್ಟ್ರೆಲಿಯಾ: 84
ರದ್ದು: 10
ಏಕದಿನ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ
1. ಅ.19 ಪರ್ತ್
2. ಅ.23 ಅಡಿಲೇಡ್
3. ಅ.25 ಸಿಡ್ನಿ
ಆರಂಭ: ಬೆಳಗ್ಗೆ 9.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್ಸ್ಟಾರ್.
ಗಿಲ್ಗೆ ರೋ-ಕೊ ಬೆಂ"ಬಲ'
ಏಕದಿನ ತಂಡದ ನಾಯಕರಾದ ಬಳಿಕವೂ ರೋಹಿತ್-ಕೊಹ್ಲಿ ಜತೆಗಿನ ತನ್ನ ಸಂಬಂಧ ಬದಲಾಗಿಲ್ಲ. ಅವರಿಬ್ಬರು ಹಿಂದಿನಂತೆಯೇ ನನಗೆ ನೆರವಾಗುತ್ತಿದ್ದಾರೆ. ನಾನೂ ಅವರ ಬಳಿ ಏನನ್ನಾದರೂ ಕೇಳಬಹುದಾಗಿದೆ. ಅವರಿಬ್ಬರು ಯಾವುದೇ ರೀತಿಯಲ್ಲೂ ಹಿಂಜರಿಯದೆ ನನಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಶುಭಮಾನ್ ಗಿಲ್ ಹೇಳಿದ್ದಾರೆ. ಈ ಮೂಲಕ ತನಗೆ ಏಕದಿನ ತಂಡದ ನಾಯಕತ್ವ ವಹಿಸಿರುವ ಬಗ್ಗೆ ರೋಹಿತ್-ಕೊಹ್ಲಿ ಅಸಮಾಧಾನಗೊಂಡಿದ್ದಾರೆ ಎಂಬ ವರದಿಯನ್ನು ತಳ್ಳಿಹಾಕಿದ್ದಾರೆ. ನಾಯಕನಾಗಿ ಧೋನಿ, ಕೊಹ್ಲಿ, ರೋಹಿತ್ ಅವರ ದೊಡ್ಡ ಸ್ಥಾನವನ್ನು ತುಂಬುವ ಸವಾಲು ಇದೆ. ಅವರ ಆಟ ನೋಡಿಯೇ ಬೆಳೆದವನು ಮತ್ತು ಅವರು ನನಗೆ ಸ್ಫೂರ್ತಿಯನ್ನೂ ತುಂಬಿದ್ದಾರೆ. ರೋಹಿತ್&ಕೊಹ್ಲಿ ಅವರಂಥ ದಿಗ್ಗಜರು ಇರುವ ತಂಡವನ್ನು ಮುನ್ನಡೆಸುವುದು ನನಗೆ ದೊಡ್ಡ ಗೌರವವಾಗಿದೆ. ಪಂದ್ಯದ ವೇಳೆ ಕಠಿಣ ಪರಿಸ್ಥಿತಿ ಎದುರಾದಾಗ ಅವರಿಬ್ಬರ ಸಲಹೆ ಪಡೆಯಲು ಹಿಂಜರಿಯುವುದಿಲ್ಲ ಎಂದು ಗಿಲ್ ವಿವರಿಸಿದ್ದಾರೆ.
*7: ಮೊದಲ ಪಂದ್ಯದೊಂದಿಗೆ ಶುಭಮಾನ್ ಗಿಲ್ ಎಲ್ಲ 3 ಕ್ರಿಕೆಟ್ ಪ್ರಕಾರದಲ್ಲಿ ಭಾರತವನ್ನು ಮುನ್ನಡೆಸಿದ 7ನೇ ನಾಯಕ ಎನಿಸಲಿದ್ದಾರೆ. ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಕೆಎಲ್ ರಾಹುಲ್ ಹಿಂದಿನ ಸಾಧಕರು.
*9: ರೋಹಿತ್-ಕೊಹ್ಲಿ 9 ವರ್ಷಗಳ ಬಳಿಕ ಭಾರತ ಪರ ಭಿನ್ನ ನಾಯಕರ ಅಡಿಯಲ್ಲಿ ಆಡಲಿದ್ದಾರೆ. ಅವರಿಬ್ಬರು ಈ ಮುನ್ನ ಧೋನಿ (133 ಪಂದ್ಯ), ಸುರೇಶ್ ರೈನಾ (12 ಪಂದ್ಯ), ಸೆಹ್ವಾಗ್ (4 ಪಂದ್ಯ), ಗಂಭೀರ್ (3 ಪಂದ್ಯ) ನಾಯಕತ್ವದಲ್ಲಿ ಆಡಿದ್ದರು.
*28: ಶುಭಮಾನ್ ಗಿಲ್ (26 ವರ್ಷ, 41 ದಿನ) ಏಕದಿನ ಕ್ರಿಕೆಟ್ನಲ್ಲಿ ಭಾರತದ 28ನೇ ಮತ್ತು 7ನೇ ಅತಿ ಕಿರಿಯ ನಾಯಕ ಎನಿಸಲಿದ್ದಾರೆ.
*122: ಗಿಲ್ (122) ಭಾರತ ಪರ ಅತಿ ಕಡಿಮೆ ಪಂದ್ಯಗಳನ್ನು ಆಡಿ ಮೂರೂ ಪ್ರಕಾರದಲ್ಲಿ ನಾಯಕತ್ವ ವಹಿಸಿದ ನಾಯಕ ಎನಿಸಲಿದ್ದಾರೆ. ಅಜಿಂಕ್ಯ ರಹಾನೆ (129) ಹಿಂದಿನ ಅತಿವೇಗದ ಸಾಧಕ.
ಪಿಚ್ ರಿಪೋರ್ಟ್
ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ಕಳೆದ 6 ವರ್ಷಗಳಲ್ಲಿ 3 ಏಕದಿನ ಪಂದ್ಯಗಳಷ್ಟೇ ನಡೆದಿವೆ. ಇವುಗಳ ಅಂಕಿ-ಅಂಶ ಗಮನಿಸಿದಾಗ ಇದು ಲೋ-ಸ್ಕೋರಿಂಗ್ ತಾಣವೆನಿಸಿದೆ. ಆಸೀಸ್ ಇಲ್ಲಿ ಆಡಿದ ಕೊನೇ 2 ಪಂದ್ಯಗಳಲ್ಲಿ 152 ಮತ್ತು 140 ರನ್ಗಳಿಗೆ ಆಲೌಟ್ ಆಗಿತ್ತು. ಇಲ್ಲಿನ ಡ್ರಾಪ್-ಇನ್ ಪಿಚ್ ಇದಕ್ಕೆ ಕಾರಣ. ಅಹರ್ನಿಶಿ ಪಂದ್ಯಕ್ಕೆ ಹಗಲಿನ ವೇಳೆ ಮಳೆ ಕಾಡುವ ಭೀತಿಯೂ ಇದೆ.