ನವದೆಹಲಿ: ಒಲಿಂಪಿಕ್ಸ್ ಅವಳಿ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಕೊಲೆ ಪ್ರಕರಣದಲ್ಲಿ ಈಗಾಗಲೆ ದೆಹಲಿ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ಇದಕ್ಕೆ ಮುನ್ನ ಪೊಲೀಸರು ಮತ್ತು ಸುಶೀಲ್ ಕುಮಾರ್ ನಡುವೆ ಇಲಿ-ಬೆಕ್ಕಿನ ದೊಡ್ಡ ಆಟವೇ ನಡೆದಿತ್ತು. ಸುಶೀಲ್ ಕುಮಾರ್ ಅವರನ್ನು ಸೆರೆ ಹಿಡಿಯಲು ಪೊಲೀಸರು 18 ದಿನಗಳ ಕಾಲ ಹೆಣಗಾಡಿದ್ದರು. ಕುಸ್ತಿಪಟುವಾಗಿದ್ದರೂ ಸುಶೀಲ್ ಓಟದಲ್ಲೂ ಸಾಕಷ್ಟು ಸತಾಯಿಸಿದ್ದರು.
ಮೇ 4ರಂದು ರಾತ್ರಿ ಯುವ ಪೈಲ್ವಾನ್ ಕೊಲೆ ನಡೆದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಸುಶೀಲ್ ಕುಮಾರ್ ಮೇ 22ರಂದು ಬಂಧನಕ್ಕೆ ಒಳಗಾಗುವ ನಡುವೆ 18 ದಿನಗಳಲ್ಲಿ ನೆರೆಹೊರೆಯ 5 ರಾಜ್ಯಗಳಲ್ಲಿ ಓಡಾಡುವ ಮೂಲಕ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ದೆಹಲಿ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಸುಶೀಲ್ ಕಣ್ತಪ್ಪಿಸಿ ಸುತ್ತಾಡಿದ್ದರು ಎನ್ನಲಾಗಿದೆ. ಕೊನೆಗೆ ದೆಹಲಿ-ಹರಿಯಾಣ ಗಡಿಯಲ್ಲಿ ಅವರು ಪೊಲೀಸರ ಬಲೆಗೆ ಬಿದ್ದಿದ್ದರು. ದೆಹಲಿ ಪೊಲೀಸರು 14 ತಂಡಗಳಾಗಿ ವಿಭಾಗಿಸಲ್ಪಟ್ಟು ಸುಶೀಲ್ ಬೆನ್ನು ಹತ್ತಿದ್ದರು.
ಛತ್ರಶಾಲಾ ಕ್ರೀಡಾಂಗಣದ ಹೊರಗೆ ಕೊಲೆ ನಡೆದ ರಾತ್ರಿ ಸುಶೀಲ್ ಮನೆಗೆ ಹೋಗಿ ಮಲಗಿದ್ದರು. ಆದರೆ ಮರುದಿನ ಎಫ್ಐಆರ್ನಲ್ಲಿ ತಮ್ಮ ಹೆಸರಿರುವುದು ಗೊತ್ತಾಗಿ ಹೃಷಿಕೇಶಕ್ಕೆ ಹಾರಿದ್ದರು. ಅಲ್ಲಿ 3 ದಿನಗಳನ್ನು ಕಳೆದ ಬಳಿಕ ಮಥುರಾಗೆ ಕಾರಿನ ಮೂಲಕ ತೆರಳಿದ್ದರು. ಅಲ್ಲಿ ಕೆಲ ದಿನಗಳಲ್ಲು ಕಳೆದ ಬಳಿಕ ದೆಹಲಿ, ಬಹದೂರ್‌ಗಢದಲ್ಲಿ ಸುತ್ತಾಡಿದ್ದರು. ಬಳಿಕ ಚಂಢೀಗಢಕ್ಕೆ ಹಾರಿದ್ದರು. ಅಲ್ಲಿಂದ ಬಥಿಂದ ಮತ್ತು ಜಲಂಧರ್‌ಗೆ ತೆರಳಿದ್ದರು. ಬಳಿಕ ಗುರುಗ್ರಾಮಕ್ಕೆ ಹೋಗಿದ್ದರು. ಕೊನೆಗೆ ದೆಹಲಿ-ಹರಿಯಾಣ ಗಡಿಯಲ್ಲಿ ಪೊಲೀಸರ ಸೆರೆಗೆ ಬಿದ್ದಿದ್ದರು. ಸುಶೀಲ್ 2008 ಮತ್ತು 2012ರ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ್ದರು.
ರೈಲ್ವೇಸ್‌ನಿಂದ ಸುಶೀಲ್ ಅಮಾನತು?
ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಸುಶೀಲ್ ಕುಮಾರ್ ಅವರನ್ನು ಉತ್ತರ ರೈಲ್ವೇಸ್‌ನ ಉದ್ಯೋಗದಿಂದ ಅಮಾನತುಗೊಳಿಸುವ ಸಾಧ್ಯತೆ ಇದೆ. ಉತ್ತರ ರೈಲ್ವೇಸ್‌ನಲ್ಲಿ ಸೀನಿಯರ್ ಕಮರ್ಷಿಯಲ್ ಮ್ಯಾನೇಜರ್ ಆಗಿರುವ ಸುಶೀಲ್ ವಿರುದ್ಧ ದೆಹಲಿ ಪೊಲೀಸರಿಂದ ಎಫ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಬಹುದಾಗಿದೆ ಎಂದು ಉತ್ತರ ರೈಲ್ವೇಸ್ ವಕ್ತಾರ ದೀಪಕ್ ಕುಮಾರ್ ಹೇಳಿದ್ದಾರೆ. ಈ ಸಂಬಂಧ ಅಧಿಕೃತ ಆದೇಶ ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿದೆ ಎಂದೂ ಅವರು ತಿಳಿಸಿದ್ದಾರೆ.
ತೀರ್ಪು ಬರುವವರೆಗೆ ಕಾಯಲಿದೆ ಡಬ್ಲ್ಯುಎಫ್ಐ
ಸುಶೀಲ್ ಕುಮಾರ್ ಸದ್ಯ 6 ದಿನಗಳ ಮಟ್ಟಿಗೆ ದೆಹಲಿ ಪೊಲೀಸರ ಕಸ್ಟಡಿಗೆ ಒಪ್ಪಿಸಲ್ಪಟ್ಟಿರುವ ನಡುವೆಯೂ, ನ್ಯಾಯಾಲಯದ ತೀರ್ಪು ಬರುವವರೆಗೂ ಅವರ ವಿರುದ್ಧ ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ) ಹೇಳಿದೆ. ಆದರೆ ತೀರ್ಪು ಏನೇ ಬಂದರೂ ಜಾಗತಿಕವಾಗಿ ಭಾರತೀಯ ಕುಸ್ತಿಯ ವರ್ಚಸ್ಸಿಗೆ ಪ್ರಕರಣದಿಂದ ಸಾಕಷ್ಟು ಧಕ್ಕೆಯಾಗಿದೆ ಎಂದು ಡಬ್ಲ್ಯುಎಫ್ಐ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಹೇಳಿದ್ದಾರೆ.